ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯ ಮೀರಿ ಆಸ್ತಿ ಗಳಿಸಿದ ಆರೋಪ: ಡಿ.ಕೆ.ಶಿವಕುಮಾರ್ ಮೇಲ್ಮನವಿ; ಸಿಬಿಐ ತನಿಖೆಗೆ ತಡೆ

Published 12 ಜೂನ್ 2023, 17:41 IST
Last Updated 12 ಜೂನ್ 2023, 17:41 IST
ಅಕ್ಷರ ಗಾತ್ರ

ಬೆಂಗಳೂರು: ‘ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಲು ಅನುಮತಿ ನೀಡಿ ಈ ಹಿಂದಿನ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠ ಮಧ್ಯಂತರ ತಡೆ ನೀಡಿದೆ.

ಈ ಕುರಿತಂತೆ ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ಮೇಲ್ಮನವಿಯ ಪ್ರಾಥಮಿಕ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. ‌

ಶಿವಕುಮಾರ್ ಪರ ಹಾಜರಾಗಿದ್ದ ಹಿರಿಯ ವಕೀಲ ಉದಯ ಹೊಳ್ಳ ಅವರು, ನ್ಯಾಯಮೂರ್ತಿ ಕೆ.ನಟರಾಜನ್‌ ಅವರಿದ್ದ ಏಕಸದಸ್ಯ ನ್ಯಾಯಪೀಠದ ಆದೇಶ ರದ್ದುಗೊಳಿಸುವಂತೆ ಕೋರಿದರು.

‍ಪ್ರಾಥಮಿಕ ವಾದ ಆಲಿಸಿದ ನ್ಯಾಯಪೀಠ, ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ 2023ರ ಜುಲೈ 17ರವರೆಗೆ ಮಧ್ಯಂತರ ತಡೆ ನೀಡಿತು. ಅಂತೆಯೇ, ಪ್ರತಿವಾದಿಗಳಾದ ಸಿಬಿಐ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿತು. ರಾಜ್ಯ ಸರ್ಕಾರದ ಪರ ಎಸ್‌.ಎಸ್‌.ಮಹೇಂದ್ರ ಹಾಜರಾಗಿದ್ದರು.

ಪ್ರಕರಣವೇನು?: ‘ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ಕಲಂ 13 (2), 13 (1)(ಇ) ಅಡಿಯಲ್ಲಿ ಸಿಬಿಐ 2020ರ ಅಕ್ಟೋಬರ್ 3ರಂದು ಪ್ರಕರಣ ದಾಖಲಿಸಿದೆ. ಸಿಬಿಐ ದಾಖಲಿಸಿರುವ ಈ ಎಫ್‌ಐಆರ್‌ ಕಾನೂನು ಬಾಹಿರವಾಗಿದ್ದು ಇದನ್ನು ರದ್ದುಗೊಳಿಸಬೇಕು’ ಎಂದು ಕೋರಿ ಶಿವಕುಮಾರ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಈ ರಿಟ್‌ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೆ.ನಟರಾಜನ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಎರಡೂವರೆ ವರ್ಷಗಳಲ್ಲಿ ಸಿಬಿಐ ಈಗಾಗಲೇ ಶೇ 90ರಷ್ಟು ತನಿಖೆ ಪೂರ್ಣಗೊಳಿಸಿದೆ. ಈ ಕುರಿತಂತೆ ತನಿಖೆಯ ವಸ್ತುಸ್ಥಿತಿ ವರದಿಯನ್ನು ಕೋರ್ಟಿಗೂ ಸಲ್ಲಿಸಲಾಗಿದೆ. ಇಷ್ಟೆಲ್ಲಾ ಸಮಯ ಕಳೆದ ಮೇಲೆ ಅರ್ಜಿದಾರರು ಅಧಿಸೂಚನೆ ಪ್ರಶ್ನಿಸುವುದಾಗಲೀ ಅಥವಾ ರದ್ದುಗೊಳಿಸಿ ಎಂದು ಕೋರುವುದಾಗಲಿ ಕಾನೂನು ಪ್ರಕಾರ ಸಾಧ್ಯವಿಲ್ಲ. ಇದು ಆದಾಯ ತೆರಿಗೆ ಕಾನೂನುಗಳ ಪ್ರಕಾರ ದಾಖಲಾಗಿಸಿರುವ ವಿಶೇಷ ಕ್ರಿಮಿನಲ್‌ ಪ್ರಕರಣ’ ಎಂಬ ಸಿಬಿಐ ವಾದಾಂಶವನ್ನು ಎತ್ತಿಹಿಡಿದಿದ್ದ ನ್ಯಾಯಪೀಠ ಶಿವಕುಮಾರ್ ಅರ್ಜಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT