ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕು: ವಾಹನಗಳ ಸ್ವಚ್ಛತೆಗೆ ಆರೋಗ್ಯ ಇಲಾಖೆ ಸೂಚನೆ

Last Updated 20 ಮೇ 2020, 16:16 IST
ಅಕ್ಷರ ಗಾತ್ರ

ಬೆಂಗಳೂರು: ಕಂಟೈನ್‌ಮೆಂಟ್‌ ವಲಯಗಳಲ್ಲಿ ಸಂಚರಿಸಿದ ವಾಹನಗಳು ಹಾಗೂ ಆಂಬ್ಯುಲೆನ್ಸ್‌ಗಳನ್ನು ಸೋಂಕು ನಿವಾರಕಗಳ ಮೂಲಕ ಕಡ್ಡಾಯವಾಗಿ ಸ್ವಚ್ಛಪಡಿಸಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಆಯುಕ್ತರು ಸೂಚಿಸಿದ್ದಾರೆ.

ಕೊರೊನಾ ಸೋಂಕು ಲೋಹ, ಗಾಜು ಹಾಗೂ ಪ್ಲಾಸ್ಟಿಕ್‌ ವಸ್ತುಗಳ ಮೇಲ್ಮೈಮೇಲೆ 72 ಗಂಟೆಗಳ ಕಾಲ ಜೀವಂತವಾಗಿರುತ್ತದೆ. ಸೋಂಕು ತಗುಲಿರುವವಸ್ತುವಿನ ಮೇಲ್ಮೈಯನ್ನು ಸ್ಪರ್ಶಿಸಿದಾಗ ವ್ಯಕ್ತಿ ಸೋಂಕಿತರಾಗುವ ಸಾಧ್ಯತೆಗಳಿವೆ. ಹಾಗಾಗಿ ಡಿಟರ್ಜೆಂಟ್‌ ಮತ್ತು ಸೋಂಕು ನಿವಾರಕಗಳ ಮೂಲಕ ವಾಹನಗಳನ್ನು ಸ್ವಚ್ಛಗೊಳಿಸಬೇಕು. ಕಂಟೈನ್‌ಮೆಂಟ್‌ ಪ್ರದೇಶದಲ್ಲಿ ಸಂಚರಿಸಿದ ವಾಹನಗಳ ಚಾಲಕರು ರಕ್ಷಣಾ ಸಾಧನಗಳನ್ನು ಧರಿಸಿರಬೇಕು. ಮನೆಗೆ ತೆರಳಿದ ಬಳಿಕ ಮುಖಗವಸು, ಕೈಗವಸು ಮತ್ತು ಕನ್ನಡಕವನ್ನು 30 ನಿಮಿಷಗಳ ಕಾಲ ಹೈಪೋಕ್ಲೊರೈಟ್ ದ್ರಾವಣದಲ್ಲಿ ಇಡಬೇಕು ಎಂದು ತಿಳಿಸಿದ್ದಾರೆ.

ಪ್ರತಿನಿತ್ಯ ಸ್ವಚ್ಛತೆ: ವಾಹನಗಳನ್ನು ಸ್ವಚ್ಛಗೊಳಿಸಲು ಸೂಕ್ತ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ತ್ಯಾಜ್ಯ ನೀರು ಹರಿದು ಹೋಗಲು ಸಮರ್ಪಕ ಚರಂಡಿ ವ್ಯವಸ್ಥೆ ಇರಬೇಕು. ವಾಹನದಲ್ಲಿನ ಎಲ್ಲ ವಸ್ತುಗಳನ್ನೂ ಖಾಲಿ ಮಾಡಿದ ಬಳಿಕವೇ ಸ್ವಚ್ಛ ಮಾಡಬೇಕು. ಸ್ವಚ್ಛಗೊಳಿಸುವ ಸಿಬ್ಬಂದಿ ಕಡ್ಡಾಯವಾಗಿ ಸುರಕ್ಷಾ ಸಾಧನಗಳನ್ನು ಧರಿಸಿರಬೇಕು. ದ್ವಿಚಕ್ರ ವಾಹನಗಳು, ನಾಲ್ಕು ಚಕ್ರಗಳ ವಾಹನಗಳು (ಕಾರು, ಜೀಪು), ಬಸ್‌ಗಳು ಹಾಗೂ ಪೊಲೀಸ್ ವಾಹನಗಳನ್ನು ಪ್ರತಿನಿತ್ಯ ಸ್ವಚ್ಛಗೊಳಿಸಬೇಕು. ವಾಣಿಜ್ಯ ಚಟುವಟಿಕೆಯಲ್ಲಿ ಬಳಸುವ ತ್ರಿಚಕ್ರ ವಾಹನಗಳು ಹಾಗೂ ಲಾರಿಗಳನ್ನು ಪ್ರತಿನಿತ್ಯ ಸ್ವಚ್ಛಗೊಳಿಸಬೇಕಿಲ್ಲ. ಆದರೆ, ವಸ್ತುಗಳನ್ನು ಲೋಡ್‌ ಹಾಗೂ ಅನ್‌ಲೋಡ್‌ ಮಾಡುವ ಮುನ್ನ ಸಚ್ಛಗೊಳಿಸಬೇಕು ಎಂದು ಸೂಚಿಸಿದ್ದಾರೆ.

ದ್ವಿಚಕ್ರ ವಾಹನಗಳನ್ನು 10ರಿಂದ 12 ನಿಮಿಷ, ತ್ರಿಚಕ್ರ ವಾಹನಗಳನ್ನು 20ರಿಂದ 25 ನಿಮಿಷ, ನಾಲ್ಕು ಚಕ್ರಗಳ ವಾಹನಗಳನ್ನು 25ರಿಂದ 30 ನಿಮಿಷ, ಲಾರಿಗಳನ್ನು 40ರಿಂದ 45 ನಿಮಿಷ ಹಾಗೂ ಬಸ್‌, ಆಂಬ್ಯುಲೆನ್ಸ್ ಮತ್ತು ಪೊಲೀಸ್ ಟ್ರಕ್‌ಗಳನ್ನು 40ರಿಂದ 45 ನಿಮಿಷ ಸ್ವಚ್ಛ ಮಾಡಬೇಕು. ಎಲ್ಲ ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಸ್ವಚ್ಛತೆಯಲ್ಲಿ ಪಾಲ್ಗೊಂಡ ಸಿಬ್ಬಂದಿ ಬಿಸಿನೀರಿನಲ್ಲಿ ಸ್ನಾನ ಮಾಡಿ, ಬಟ್ಟೆಗಳನ್ನು ಸೋಪಿನ ನೀರಿನಲ್ಲಿ 30 ನಿಮಿಷಗಳು ಇಡಬೇಕು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT