ಬೆಂಗಳೂರು: ಆರ್‌ಎಸ್‌ಎಸ್ ನಾಯಕರ ಸಂಧಾನ ಹಾಗೂ ಎಚ್ಚರಿಕೆಯ ನಂತರವೂ ಬಿಜೆಪಿಯಲ್ಲಿನ ಭಿನ್ನಮತ ಮುಂದುವರಿದಿದೆ.
ಸದಾಶಿವ ನಗರದ ರಾಷ್ಟ್ರೋತ್ಥಾನ ಕೇಂದ್ರದಲ್ಲಿ ಆರ್‌ಎಸ್‌ಎಸ್ ಪ್ರಮುಖರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಪಕ್ಷದ ಭಿನ್ನ ಬಣಗಳ ನಾಯಕರ ಜತೆ ಸಭೆ ನಡೆಸಿದ್ದರು. ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಆರ್‌ಎಸ್‌ಎಸ್ ಸಹ ಸರಕಾರ್ಯವಾಹ ಸಿ.ಆರ್. ಮುಕುಂದ ಅವರೂ ಭಾಗವಹಿಸಿ, ಸಂಧಾನ ಮಾಡಿದ್ದರು. ಇನ್ನು ಮುಂದೆ ‘ಭಿನ್ನ’ಮತ ಇರದು, ವಿಜಯೇಂದ್ರ ನೇತೃತ್ವದಲ್ಲೇ ಬಳ್ಳಾರಿ ಪಾದಯಾತ್ರೆ ಹಮ್ಮಿಕೊಳ್ಳಲಾಗುತ್ತದೆ ಎಂದು ಘೋಷಿಸಿದ್ದರು.
ಸಂಧಾನದ ಮರು ದಿನವೇ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್, ರಮೇಶ ಜಾರಕಿಹೊಳಿ, ಬಿ.ಪಿ. ಹರೀಶ್, ಮಾಜಿ ಶಾಸಕರಾದ ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಮತ್ತಿತರರು, ರಾಜ್ಯಪಾಲರ ಥ್ಯಾವರಚಂದ್ ಗೆಹಲೋತ್ ಅವರನ್ನು ಭೇಟಿಯಾಗಿ ‘ವಾಲ್ಮೀಕಿ ನಿಗಮದ ಹಣ ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಬಳಕೆಯಾಗಿದ್ದು, ಚುನಾವಣಾ ಅಕ್ರಮ ನಡೆದಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಸಂಬಂಧಿಸಿದ ಪ್ರಾಧಿಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಮನವಿ ಸಲ್ಲಿಸಿದ್ದರು. ಈ ವಿಷಯವನ್ನು ವಿಜಯೇಂದ್ರ ಅಥವಾ ಆರ್. ಅಶೋಕ ಸೇರಿದಂತೆ ಯಾವ ನಾಯಕರ ಗಮನಕ್ಕೂ ತಂದಿರಲಿಲ್ಲ ಎಂದೂ ಗೊತ್ತಾಗಿದೆ.
‘ಭಿನ್ನ’ ಬಣಗಳ ಮುನಿಸು ಮತ್ತು ಅಸಮಾಧಾನ ಶಮನವಾಗಿದೆ ಎಂದು ಆರ್‌ಎಸ್‌ಎಸ್ ಮುಖಂಡರು ಹೇಳಿಕೊಂಡಿದ್ದ ಬೆನ್ನಲ್ಲೇ, ಕೆಲವರು ಪ್ರತ್ಯೇಕವಾಗಿ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡುವ ಮೂಲಕ ವಿಜಯೇಂದ್ರ ಅವರನ್ನು ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಇಳಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂಬ ಸಂದೇಶವನ್ನು ಪಕ್ಷದ ವರಿಷ್ಠರಿಗೆ ಪರೋಕ್ಷವಾಗಿ ತಲುಪಿಸಿದ್ದಾರೆ’ ಎಂದು ವಿಶ್ಲೇಷಿಸಲಾಗುತ್ತಿದೆ.
‘ಈ ಬೆಳವಣಿಗೆಗಳ ನಡುವೆಯೇ ಪಕ್ಷದ ವರಿಷ್ಠರನ್ನು ದೂರವಾಣಿ ಮೂಲಕ ಸಂಪರ್ಕಿಸಿರುವ ವಿಜಯೇಂದ್ರ, ‘ವೈಮನಸ್ಸು ಬಿಟ್ಟು, ಒಂದಾಗಿ ಹೋಗದೆ ಇದ್ದರೆ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತದೆ. ಮುಂದೆ ಕಷ್ಟವಾಗಬಹುದು. ಕಠಿಣ ನಿರ್ಧಾರ ತೆಗೆದುಕೊಳ್ಳಲೇಬೇಕು. ಪಕ್ಷದ ಗಮನಕ್ಕೆ ತಾರದೇ ರಾಜ್ಯಪಾಲರನ್ನು ಭೇಟಿಯಾದ ಎಲ್ಲರಿಗೂ ನೋಟಿಸ್ ನೀಡಲು ಅನುಮತಿ ನೀಡಬೇಕು. ಶಿಸ್ತು ಕ್ರಮ ಜರುಗಿಸಬೇಕು’ ಎಂದು ಮನವಿ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.