ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವಿ ಕಾಲೇಜುಗಳಲ್ಲೇ ದೂರ ಶಿಕ್ಷಣ

ಕೆಎಸ್‌ಒಯುಗೆ ಅವಕಾಶ ನೀಡಲು ಉನ್ನತ ಶಿಕ್ಷಣ ಇಲಾಖೆ ಚಿಂತನೆ
Published 20 ಜನವರಿ 2024, 6:59 IST
Last Updated 20 ಜನವರಿ 2024, 6:59 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ 423 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ದೂರ ಶಿಕ್ಷಣ ವಿಭಾಗಗಳನ್ನು ತೆರೆಯಲು ಉನ್ನತ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) ಸಹಯೋಗದಲ್ಲಿ ರಾಜ್ಯದ ಪದವಿ ಕಾಲೇಜುಗಳಲ್ಲೇ ದೂರ ಶಿಕ್ಷಣ ವಿಭಾಗಗಳನ್ನು ತೆರೆಯಲು ಚರ್ಚೆಗಳು ಆರಂಭವಾಗಿವೆ.  ಅರ್ಧಕ್ಕೆ ಪದವಿ ತೊರೆದವರು, ಎಸ್‌ಎಸ್‌ಎಲ್‌ಸಿ, ಪಿಯುಸಿ ಉತ್ತೀರ್ಣರಾದ ನಂತರ ಕೆಲಸಕ್ಕೆ ಸೇರಿದವರು ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪೂರೈಸಲು ಇದರಿಂದ ಸಾಧ್ಯವಾಗಲಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಸಿದ್ಧಪಡಿಸಿದ ಟಿಪ್ಪಣಿ ಉಲ್ಲೇಖಿಸಿದೆ.

ಮೈಸೂರಿನಲ್ಲಿ ಕೇಂದ್ರ ಸ್ಥಾನವನ್ನು ಹೊಂದಿರುವ ಕೆಎಸ್‌ಒಯು ರಾಜ್ಯದಲ್ಲಿನ 34 ಪ್ರಾದೇಶಿಕ ಕೇಂದ್ರಗಳ ಮೂಲಕ ವಿದ್ಯಾರ್ಥಿಗಳಿಗೆ ದೂರ ಶಿಕ್ಷಣ ನೀಡುತ್ತಿದೆ. ಮೊದಲು ಬೆಂಗಳೂರಿನ ಐದು ಸೇರಿ ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿದ್ದ ಪ್ರಾದೇಶಿಕ ಕಚೇರಿಗಳನ್ನು ಈಚೆಗೆ ಉತ್ತರ ಕರ್ನಾಟಕದ ಜಿಲ್ಲೆಗಳಿಗೂ ವಿಸ್ತರಿಸಲಾಗಿತ್ತು. ಪ್ರಸ್ತುತ 54 ಸಾವಿರ ವಿದ್ಯಾರ್ಥಿಗಳು 64 ವಿಷಯಗಳಲ್ಲಿ ದೂರ ಶಿಕ್ಷಣ ಪಡೆಯುತ್ತಿದ್ದಾರೆ. 

ಪ್ರತಿ ಪದವಿ ಕಾಲೇಜಿನಲ್ಲೂ ಎರಡು ಕೊಠಡಿ ಮೀಸಲು:

ಪದವಿ ಕಾಲೇಜುಗಳಲ್ಲೇ ದೂರ ಶಿಕ್ಷಣ ವಿಭಾಗಗಳನ್ನು ತೆರೆಯಲು ಪ್ರತಿ ಕಾಲೇಜಿನಲ್ಲೂ ಕನಿಷ್ಠ ಎರಡು ಕೊಠಡಿಗಳನ್ನು ಮೀಸಲಿಡಬೇಕು. ಸಂಪರ್ಕ ತರಗತಿಗಳನ್ನು ನಡೆಸಲು ರಜಾ ದಿನಗಳಲ್ಲಿ ಇತರೆ ಕೊಠಡಿಗಳನ್ನು ಬಳಸಿಕೊಳ್ಳಲು ಅವಕಾಶ ನೀಡಬೇಕು ಎಂದು ಕೆಎಸ್‌ಒಯು ಉನ್ನತ ಶಿಕ್ಷಣ ಇಲಾಖೆಗೆ ಬರೆದ ಪತ್ರದಲ್ಲಿ ಕೋರಿಕೆ ಸಲ್ಲಿಸಿದೆ. ಇದಕ್ಕೆ ಉನ್ನತ ಶಿಕ್ಷಣ ಸಚಿವರು ಸಮ್ಮತಿ ಸೂಚಿಸಿದ್ದಾರೆ. 

ಏಕಕಾಲಕ್ಕೆ ಎರಡು ಪದವಿಗೆ ಅವಕಾಶ:

ಪದವಿ ಕಾಲೇಜುಗಳಲ್ಲಿ ಈಗಾಗಲೇ ಕಲಿಯುತ್ತಿರುವ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನಿಯಮದಂತೆ ದೂರ ಶಿಕ್ಷಣದಲ್ಲಿ ಏಕಕಾಲಕ್ಕೆ ಮತ್ತೊಂದು ಪದವಿ ಕೋರ್ಸ್‌ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಪ್ರಸ್ತುತ, ರಾಜ್ಯದಲ್ಲಿ 3.5 ಲಕ್ಷ ವಿದ್ಯಾರ್ಥಿಗಳು ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಏಕಕಾಲಕ್ಕೆ ಬಿ.ಇಡಿ ಶಿಕ್ಷಣ ಪಡೆಯಲು ಅವಕಾಶ ನೀಡುವ ಕುರಿತು ಚಿಂತನೆ ನಡೆದಿದೆ ಎನ್ನುತ್ತಾರೆ ಕೆಎಸ್‌ಒಯು ಕುಲಪತಿ ಶರಣಪ್ಪ ವಿ. ಹಲಸೆ.

ಸಂಶೋಧನೆಗೂ ಅವಕಾಶ:

ಕೆಎಸ್‌ಒಯುನಲ್ಲಿ ಪ್ರಸ್ತುತ 92 ಅಭ್ಯರ್ಥಿಗಳು ಸಂಶೋಧನೆಗೆ (ಪಿ.ಎಚ್‌ಡಿ) ಪ್ರವೇಶ ಪಡೆದಿದ್ದಾರೆ. ಪದವಿ ಕಾಲೇಜುಗಳಲ್ಲಿ ದೂರ ಶಿಕ್ಷಣ ಆರಂಭವಾದ ನಂತರ ಮತ್ತೆ 100 ಅಭ್ಯರ್ಥಿಗಳಿಗೆ ಪಿ.ಎಚ್‌ಡಿ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ಶರಣಪ್ಪ ಹಲಸೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT