ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆಯಲ್ಲಿ ಕಾಂಗ್ರೆಸ್‌ ಪತ್ರಿಕಾಗೋಷ್ಠಿಗೆ ಅಡ್ಡಿಪಡಿಸಲು ಯತ್ನ

ಆನಂದ್‌ ಸಿಂಗ್‌ ಕೈವಾಡ–ರಾಯರಡ್ಡಿ ಆರೋಪ
Last Updated 23 ನವೆಂಬರ್ 2019, 10:01 IST
ಅಕ್ಷರ ಗಾತ್ರ

ಹೊಸಪೇಟೆ: ಶನಿವಾರ ನಗರದ ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪಕ್ಷದ ಮುಖಂಡರ ಸುದ್ದಿಗೋಷ್ಠಿಗೆ ಅಡ್ಡಿಪಡಿಸುವ ಯತ್ನ ನಡೆಯಿತು.

ಕಚೇರಿಯೊಳಗೆ ಪತ್ರಕರ್ತರು ಆಸೀನರಾಗಿದ್ದರು. ಇನ್ನೇನು ಮುಖಂಡರು ಬಂದು ಸುದ್ದಿಗೋಷ್ಠಿ ನಡೆಸಬೇಕಿತ್ತು. ಈ ವೇಳೆ ಇಬ್ಬರು ವ್ಯಕ್ತಿಗಳು ಅಲ್ಲಿಗೆ ಬಂದು, ‘ಏ ಹೊರಗೆ ಬರ್ರಿ’ ಎಂದು ಕಿರುಚಾಡಿ ಕಚೇರಿಯ ಶಟರ್‌ ಮುಚ್ಚಿದರು. ಈ ವೇಳೆ ಅಲ್ಲಿಯೇ ಇದ್ದ ಕಾಂಗ್ರೆಸ್‌ ಕಾರ್ಯಕರ್ತರು ಅವರನ್ನು ಹಿಡಿದು, ತೀವ್ರ ತರಾಟೆಗೆ ತೆಗೆದುಕೊಂಡರು. ಬಳಿಕ ಇಬ್ಬರನ್ನು ಮಾಧ್ಯಮದವರ ಎದುರು ತಂದು ಕ್ಷಮಾಪಣೆ ಕೇಳುವಂತೆ ಮಾಡಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಉಸ್ತುವಾರಿ ಬಸವರಾಜ ರಾಯರಡ್ಡಿ, ‘ಪತ್ರಿಕಾಗೋಷ್ಠಿ ನಡೆಸದಂತೆ ದುಷ್ಕರ್ಮಿಗಳು ಬಂದು ತಡೆವೊಡ್ಡಲು ಪ್ರಯತ್ನಿಸಿದ್ದಾರೆ. ಹಣ, ತೋಳ್ಬಲ ಹೊಂದಿರುವ ಆನಂದ್‌ ಸಿಂಗ್‌ ಅವರು ಈ ರೀತಿ ಮಾಡಿಸಿದ್ದಾರೆ. ಇದೇ ರೀತಿ ಚುನಾವಣೆ ಮಾಡಿ ಗೆಲ್ಲಬೇಕು ಅಂದುಕೊಂಡಿದ್ದಾರೆ. ಆದರೆ, ಜನ ಅವರನ್ನು ತಿರಸ್ಕರಿಸುವುದು ಖಚಿತ’ ಎಂದು ಹೇಳಿದರು.

ಕೆ.ಪಿ.ಸಿ.ಸಿ. ಮಾಧ್ಯಮ ವಿಭಾಗದ ಮುಖ್ಯಸ್ಥ ವಿ.ಎಸ್‌. ಉಗ್ರಪ್ಪ ಮಾತನಾಡಿ, ‘ಆನಂದ್‌ ಸಿಂಗ್‌ ಅವರ ಬೆಂಬಲಿಗರಾದ ಶ್ರೀನಿವಾಸ್‌, ಖಾದರ್‌ ಎಂಬುವರು ಈ ಕೃತ್ಯ ಎಸಗಿದ್ದಾರೆ. ಸಿಂಗ್‌ ಹತಾಶರಾಗಿ ಈ ಕೆಲಸ ಮಾಡಿಸಿದ್ದಾರೆ. ಗೊಂದಲ ಸೃಷ್ಟಿಸಿದವರ ವಿರುದ್ಧ ಠಾಣೆಗೆ ದೂರು ಕೊಡಲಾಗುವುದು. ಶುಕ್ರವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಅಪಾರ ಜನರನ್ನು ನೋಡಿ, ಆತಂಕಗೊಂಡು ಸೋಲಿನ ಭಯದಿಂದ ಹೀಗೆ ಮಾಡಿಸಿದ್ದಾರೆ’ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ಅವರನ್ನು ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT