ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಡೆ ಒಡೆಸಿ, ತಾಯಿತ ಕಟ್ಟಿಸಿಕೊಂಡ ಡಿಕೆಶಿ: ಸಾಥ್‌ ನೀಡಿದ ಜೆಡಿಎಸ್‌ ಶಾಸಕರು

Last Updated 8 ನವೆಂಬರ್ 2019, 19:24 IST
ಅಕ್ಷರ ಗಾತ್ರ

ಮಂಡ್ಯ: ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವಕುಮಾರ್‌ ಶುಕ್ರವಾರ ನಗರದ ಶಕ್ತಿದೇವತೆ ಕಾಳಿಕಾಂಬಾ ದೇವಾಲಯಕ್ಕೆ ಭೇಟಿ ನೀಡಿ ತಡೆ ಒಡೆಸಿ, ತಾಯಿತ ಕಟ್ಟಿಸಿಕೊಂಡರು.

ಕಾಂಗ್ರೆಸ್‌, ಜೆಡಿಎಸ್‌ ಮುಖಂಡರು ಹಾಗೂ ಅಭಿಮಾನಿಗಳೊಂದಿಗೆ ಮೆರವಣಿಗೆ ಮೂಲಕ ದೇವಾಲಯಕ್ಕೆ ಬಂದರು. ದೇವರ ದರ್ಶನ ಪಡೆದ ನಂತರ, ತಮ್ಮ ಕಷ್ಟ– ಕಾರ್ಪಣ್ಯ ನಿವಾರಣೆಗಾಗಿ ತಡೆ ಒಡೆಸಿದರು. ನಿಂಬೆಹಣ್ಣು, ಕುಡಿಕೆ, ಎಲೆ– ಅಡಿಕೆ ಇಟ್ಟು, ಮೇಲೆ ಕರ್ಪೂರ ಹಚ್ಚಿ ಅದನ್ನು ಮೂರು ಬಾರಿ ದಾಟಿದರು.

ನಂತರ ಸಂಪ್ರದಾಯದಂತೆ ಅದನ್ನು ತಿರುಗಿ ನೋಡದಂತೆ ಮುನ್ನಡೆದರು. ಅರ್ಚಕರು ತಡೆಯನ್ನು ಕಲ್ಲಿನಿಂದ ಜಜ್ಜಿದರು. ನಂತರ ಅವರಿಂದ ಶಿವಕುಮಾರ್‌ ತಾಯಿತ ಕಟ್ಟಿಸಿಕೊಂಡು ತೀರ್ಥ, ಪ್ರಸಾದ ಸೇವಿಸಿದರು.

ಡಿಕೆಶಿ ಕಾರು ಓಡಿಸಿದ ಜೆಡಿಎಸ್‌ ಶಾಸಕ
ಮೈಸೂರು ಹಾಗೂ ಮಂಡ್ಯ ಭೇಟಿ ವೇಳೆ, ಡಿ.ಕೆ. ಶಿವಕುಮಾರ ಅವರಿಗೆ ಜೆಡಿಎಸ್‌ ಶಾಸಕರು ಸಾಥ್‌ ನೀಡಿದ್ದು ವಿಶೇಷವಾಗಿತ್ತು.

ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಾಲಯಕ್ಕೆ ಬಂದಾಗ, ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಶಿವಕುಮಾರ್‌ ಅವರ ಕಾರು ಓಡಿಸಿ ಅಚ್ಚರಿ ಮೂಡಿಸಿದರು.

ನಾಗಮಂಗಲ ಜೆಡಿಎಸ್‌ ಶಾಸಕ ಸುರೇಶ್‌ಗೌಡ ಸ್ವಾಗತಿಸಿದರು. 500 ಕೆ.ಜಿ ತೂಕದ ಸೇಬಿನ ಹಾರ ಹಾಕುವ ಮೂಲಕ ಸ್ವಾಗತ ಕೋರಲಾಯಿತು. ಜೆಡಿಎಸ್‌ ಮುಖಂಡರ ನೇತೃತ್ವದಲ್ಲೇ ಪೂಜೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಪೂಜೆಯ ನಂತರ ದೇವಾಲಯದಿಂದ ಟಿಪ್ಪು ಸುಲ್ತಾನ್‌ ಮಡಿದ ಸ್ಥಳದವರೆಗೂ ರವೀಂದ್ರ ಶ್ರೀಕಂಠಯ್ಯ ಅವರು ಡಿ.ಕೆ.ಶಿವಕುಮಾರ್‌ ಕಾರು ಓಡಿಸಿದರು.‌

ಇದಕ್ಕೂ ಮುನ್ನ, ಮೈಸೂರಿನಲ್ಲಿ ಚಾಮುಂಡಿ ಬೆಟ್ಟದಲ್ಲಿ ಶಾಸಕ ಜಿ.ಟಿ. ದೇವೇಗೌಡ, ಚಾಮುಂಡೇಶ್ವರಿ ದೇವಾಲಯದ ಗರ್ಭಗುಡಿವರೆಗೆ ಅವರನ್ನು ಕರೆದೊಯ್ದರು. ಆದರೆ, ಆ ಬಳಿಕ ಪಕ್ಷದ ವರಿಷ್ಠ ಎಚ್‌.ಡಿ. ದೇವೇಗೌಡ ಬಂದಾಗ ಗೈರಾದರು.

ಮೈಸೂರಿನ ಬೋಗಾದಿಯಲ್ಲಿರುವ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿ, ಸೋಮನಾಥ ಸ್ವಾಮಿಜಿ ಆಶೀರ್ವಾದ ಪಡೆದ ಶಿವಕುಮಾರ್‌, ಆ ಬಳಿಕ ಜೆಡಿಎಸ್‌ ಶಾಸಕ ಸಾ.ರಾ. ಮಹೇಶ್‌ ಅವರೊಂದಿಗೆ ಮಠದಲ್ಲಿಯೇ ಅರ್ಧತಾಸು ಗೋಪ್ಯ ಮಾತುಕತೆ ನಡೆಸಿದರು.

ಪೇಟ, ಕೈಯಲ್ಲಿ ಕತ್ತಿ
ಶ್ರೀರಂಗಪಟ್ಟಣದಲ್ಲಿ ಟಿಪ್ಪು ಮಡಿದ ಸ್ಥಳಕ್ಕೆ ಭೇಟಿ ನೀಡಿದಾಗ, ಸ್ಥಳೀಯ ಮುಸ್ಲಿಂ ಮುಖಂಡರು ಅವರಿಗೆ ಪೇಟ ತೊಡಿಸಿ, ಕೈಗೆ ಕತ್ತಿ ಕೊಟ್ಟರು. ಈ ಸಂದರ್ಭದಲ್ಲಿ ಅಭಿಮಾನಿಗಳ ನೂಕಾಟ ಹೆಚ್ಚಾಗಿತ್ತು. ಆಗ ಶಿವಕುಮಾರ್‌, ‘ಸುಮ್ಮನಿರಿ, ಇಲ್ಲದಿದ್ದರೆ ಈ ಕತ್ತಿಯಿಂದಲೇ ನಿಮ್ಮನ್ನು ಸರಿಮಾಡುತ್ತೇನೆ’ ಎಂದು ತಮಾಷೆ ಮಾಡಿದರು. ಇದಕ್ಕೆ ಎಲ್ಲರೂ ಗೊಳ್ ಎಂದು ನಕ್ಕರು. ನಂತರ ಗುಂಬಸ್‌ ಬಳಿಯಿರುವ ಟಿಪ್ಪು ಸಮಾಧಿಗೆ ತೆರಳಿ ದರ್ಶನ ಪಡೆದರು.

ಸೇಬಿಗಾಗಿ ಕಿತ್ತಾಡಿದ ಜನ:ಮಂಡ್ಯದಲ್ಲಿ ಮೂರು ಕಡೆ ಅಭಿಮಾನಿಗಳು ಬೃಹತ್‌ ಸೇಬಿನ ಹಾರ ಹಾಕಿದರು. ಜನರು ಸೇಬಿನ ಹಣ್ಣಿಗಾಗಿ ಕಿತ್ತಾಡಿದರು.

ದೇವೇಗೌಡರ ಕಾಲಿಗೆರಗಿದ ಡಿಕೆಶಿ
ಮೈಸೂರು:
ಚಾಮುಂಡೇಶ್ವರಿ ದರ್ಶನದ ಬಳಿಕ ಡಿ.ಕೆ. ಶಿವಕುಮಾರ್‌, ದೇವಾಲಯದ ಮುಂಭಾಗದಲ್ಲಿ 101 ಈಡುಗಾಯಿ ಒಡೆಯುತ್ತಿದ್ದರು. ಈ ವೇಳೆ, ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಪತ್ನಿಸಮೇತರಾಗಿ ಕಾರ್ತೀಕ ಮಾಸದ ವಿಶೇಷ ಪೂಜೆ ಸಲ್ಲಿಸಲು ಚಾಮುಂಡಿ ಬೆಟ್ಟಕ್ಕೆ ಬಂದರು. ಅವರನ್ನು ಕಂಡ ಶಿವಕುಮಾರ್‌, ಈಡುಗಾಯಿ ಒಡೆಯುವುದನ್ನು ಅರ್ಧಕ್ಕೇ ನಿಲ್ಲಿಸಿ, ದೇವೇಗೌಡರ ಬಳಿ ಸಾರಿ ಕಾಲಿಗೆ ನಮಸ್ಕರಿಸಿದರು.

ಶಿವಕುಮಾರ್ ಹೆಗಲ ಮೇಲೆ ಕೈ ಹಾಕಿದ ದೇವೇಗೌಡ, ಕುಶಲೋಪರಿ ವಿಚಾರಿಸಿದರು. ಇತ್ತ, ಶಿವಕುಮಾರ್‌ ಅರ್ಧಕ್ಕೇನಿಲ್ಲಿಸಿದ ಈಡುಗಾಯಿ ಒಡೆಯುವ ಕೆಲಸವನ್ನು ಬೆಂಬಲಿಗರು ಪೂರ್ತಿಗೊಳಿಸಿದರು.

**

ನನಗೆ ಜೆಡಿಎಸ್‌ನಲ್ಲೂ ಪ್ರೀತಿ ತೋರಿಸುವವರು ಇದ್ದಾರೆ. ಅವರ ಪ್ರೀತಿಯನ್ನು ಬೇಡ ಎನ್ನಲು ಸಾಧ್ಯವಿಲ್ಲ. ವೈಯಕ್ತಿಕ ವಿಚಾರ ಬೇರೆ, ನಮ್ಮ ಪಕ್ಷದ ಸಿದ್ಧಾಂತ ಬೇರೆ
-ಡಿ.ಕೆ. ಶಿವಕುಮಾರ್‌,ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT