ಬೆಂಗಳೂರು: ‘ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ದಿನೇ ದಿನೇ ರಾಷ್ಟ್ರೀಯ ನಾಯಕನ ವರ್ಚಸ್ಸು ಲಭಿಸುತ್ತಿದೆ ಎಂಬ ಆತಂಕದಲ್ಲಿ ಅವರ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದಡಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ‘ ಎಂದು ಡಿ.ಕೆ.ಶಿವಕುಮಾರ್ ಪರ ವಕೀಲರು ಹೈಕೋರ್ಟ್‌ಗೆ ಅರುಹಿದರು.
‘ನನ್ನ ಬಳಿ ಇದ್ದ ಹಣಕ್ಕೆ ಬ್ಯಾಂಕ್ ಖಾತೆಯ ದಾಖಲೆ ಇಲ್ಲ ಎಂಬ ಕಾರಣದಡಿ; ಆದಾಯ ಮೀರಿದ ಆಸ್ತಿ ಗಳಿಕೆ ಆರೋಪದಡಿ ಸಿಬಿಐ ತನಿಖೆ ನಡೆಸಲು ಈ ಹಿಂದಿನ ರಾಜ್ಯ ಸರ್ಕಾರ ನೀಡಿರುವ ಒಪ್ಪಿಗೆ ಕಾನೂನು ಬಾಹಿರವಾಗಿದೆ‘ ಎಂದು ಆಕ್ಷೇಪಿಸಿ ಶಿವಕುಮಾರ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರ ಶಿವಕುಮಾರ್ ಪರ ಸುದೀರ್ಘ ವಾದ ಮಂಡಿಸಿದ ಹಿರಿಯ ವಕೀಲ ಸಂದೇಶ್ ಚೌಟ ಅವರು, ‘ಶಿವಕುಮಾರ್ ಅವರ ನವದೆಹಲಿ, ಬೆಂಗಳೂರು ಸೇರಿದಂತೆ ಇತರೆಡೆಯ ಮನೆಗಳ ಮೇಲೆ 2017ರ ಆಗಸ್ಟ್ 2ರಂದು ಆದಾಯ ತೆರಿಗೆ (ಐಟಿ) ದಾಳಿ ನಡೆಸಲಾಗಿತ್ತು. ಈ ವೇಳೆ ಅವರು ಈಗಲ್‌ಟನ್ ರೆಸಾರ್ಟ್‌ನಲ್ಲಿದ್ದರು. ಈ ಮಾಹಿತಿ ತಿಳಿದ ಅಧಿಕಾರಿಗಳು ಅಲ್ಲಿಯೂ ದಾಳಿ ನಡೆಸಿದ್ದರು. ಅಂದಿನಿಂದ ಶಿವಕುಮಾರ್ ವಿರುದ್ಧ ಐಟಿ, ಅಕ್ರಮ ಹಣ ವರ್ಗಾವಣೆ, ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಸಂಸ್ಥೆಗಳು ಒಂದಾದ ಮೇಲೊಂದರಂತೆ ಪ್ರಕರಣ ದಾಖಲಿಸಿವೆ. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿರುವ ಈ ಹಿಂದಿನ ರಾಜ್ಯ ಸರ್ಕಾರದ ಕ್ರಮ ಸಂಪೂರ್ಣ ಕಾನೂನು ಬಾಹಿರ‘ ಎಂದು ಆರೋಪಿಸಿದರು.
ಕೋರ್ಟ್‌ನ ದಿನದ ಕಲಾಪದ ಅವಧಿ ಮೀರುತ್ತಿದ್ದ ಕಾರಣ ವಿಚಾರಣೆಯನ್ನು ಇದೇ 7ಕ್ಕೆ ಮುಂದೂಡಲಾಗಿದೆ. ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ಸಮಯದಲ್ಲಿ ಒಟ್ಟು ₹ 8.59 ಕೋಟಿ ಮೊತ್ತವನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಸಂಬಂಧ ಶಿವಕುಮಾರ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ವಿವಿಧ ಕಲಂಗಳ ಅಡಿಯಲ್ಲಿ 2020ರ ಅಕ್ಟೋಬರ್ 3ರಂದು ಸಿಬಿಐ ಪ್ರಕರಣ ದಾಖಲಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.