ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಹವಾಲುಗಳಿಗೆ ಡಿಸಿಎಂ ಭರವಸೆಯ ವಾಗ್ದಾನ

‘ಕಾರ್ಯಕರ್ತರೊಂದಿಗೆ ನಿಮ್ಮ ಡಿಸಿಎಂ’ ಕಾರ್ಯಕ್ರಮ
Published 6 ಜುಲೈ 2024, 16:11 IST
Last Updated 6 ಜುಲೈ 2024, 16:11 IST
ಅಕ್ಷರ ಗಾತ್ರ

ಬೆಂಗಳೂರು: ‘ವೈಯಕ್ತಿಕವಾಗಿ ₹ 25 ಸಾವಿರ ನೀಡುತ್ತೇನೆ. ಯಾವುದಾದರೂ ಇಲಾಖೆಯಲ್ಲಿ ಉದ್ಯೋಗಕ್ಕೆ ಶಿಫಾರಸು ಮಾಡುತ್ತೇನೆ’ ಎಂದು ಎಚ್.ಡಿ. ಕೋಟೆಯ ಸೇವಾದಳ ಕಾರ್ಯಕರ್ತ ಮಣಿಕಂಠ ಅವರ ಮನವಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

ಭಾರತ್ ಜೋಡೊ ಭವನದಲ್ಲಿ ಶನಿವಾರ ಅವರು ‘ಕಾರ್ಯಕರ್ತರೊಂದಿಗೆ ನಿಮ್ಮ ಡಿಸಿಎಂ’ ಕಾರ್ಯಕ್ರಮದಲ್ಲಿ ‌ಭಾಗವಹಿಸಿದರು. ನಿಗಮ ಮಂಡಳಿಗೆ ನೇಮಕ, ಪಕ್ಷದಲ್ಲಿ ‌ಸ್ಥಾನಮಾನ, ಮನೆ, ನಿವೇಶನ, ಜಮೀನು ಸಮಸ್ಯೆ, ಹಾಸ್ಟೆಲ್ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳನ್ನು ಹೊತ್ತು ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಕಾರ್ಯಕರ್ತರು ಉಪ ಮುಖ್ಯಮಂತ್ರಿಗೆ ಅಹವಾಲು ಸಲ್ಲಿಸಿದರು.

‘ಲೋಕಸಭಾ ಚುನಾವಣೆಗೆ ಪ್ರಚಾರಕ್ಕೆ ತೆರಳುವ ವೇಳೆ ಅಪಘಾತವಾಗಿ ಕಾಲಿನ ಮೊಣಕಾಲು ಚಿಪ್ಪಿಗೆ ಪೆಟ್ಟು ಬಿದ್ದಿದೆ’ ಎಂದು ಮಣಿಕಂಠ ತಮ್ಮ ನೋವು ಹೇಳಿಕೊಂಡರು.

‘ಪಶುಸಂಗೋಪನಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಪತ್ನಿ ಮೃತ ಪಟ್ಟಿದ್ದು, ಕೋವಿಡ್‌ ಸಮಯದಲ್ಲಿ ನಾನು ಕಾಲು ಕಳೆದುಕೊಂಡಿದ್ದೇನೆ. ಮಗನಿಗೆ ಅನುಕಂಪದ ಆಧಾರದ ಕೆಲಸ ಕೊಡಿಸಿ’ ಎಂದು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಕಾರ್ಯಕರ್ತ ಕಿರಣ್ ಅವಲತ್ತುಕೊಂಡಾಗ, ತಕ್ಷಣ ಸಚಿವ ವೆಂಕಟೇಶ್ ಅವರನ್ನು ಭೇಟಿಯಾಗುವಂತೆ ಶಿವಕುಮಾರ್ ಸೂಚಿಸಿದರು.

‘ಸ್ಥಳೀಯ ಸಂಸ್ಥೆಯವರು ನನ್ನ ಜಮೀನು ಒತ್ತುವರಿ ಮಾಡಿಕೊಂಡಿದ್ದು, ನ್ಯಾಯ ಕೊಡಿಸಿ’ ಎಂದು ಬಂಟ್ವಾಳದ ಗಿಲ್ಬರ್ಟ್ ಅವರ ಮನವಿಗೆ ಸ್ಪಂದಿಸಿದ ಶಿವಕುಮಾರ್ ಅವರು, ‘ಇನ್ನೊಂದು ವಾರದಲ್ಲಿ ನಿಮ್ಮ ಸಮಸ್ಯೆ ಬಗೆಹರಿಯಲಿದೆ’ ಎಂದು ಭರವಸೆ ನೀಡಿದರು.

ನಿವೃತ್ತ ಯೋಧ ರಾಮಮೂರ್ತಿ ನಗರದ ಆರ್.ಜಿ. ಜಿ. ನಾಯ್ಡು ಅವರು ತಮ್ಮ ಬಡಾವಣೆಯಲ್ಲಿನ ಮೂಲಸೌಕರ್ಯಗಳ ಸಮಸ್ಯೆ ಬಗ್ಗೆ ಗಮನ ಸೆಳೆದಾಗ, ‘ಶೀಘ್ರದಲ್ಲೇ ಅಧಿಕಾರಿಗಳನ್ನು ಕಳುಹಿಸಿ ಸಮಸ್ಯೆ ಪರಿಹರಿಸಲಾಗುವುದು’ ಎಂದು ವಾಗ್ದಾನ ನೀಡಿದರು. ಮಗಳ ಶಾಲಾ ಶುಲ್ಕ ಮತ್ತು ಮನೆ ನೀಡಿ ಎಂದು ಯಶವಂತಪುರದ ಅಬ್ರಹಾಂ ಶಂಕರ್ ಮನವಿ ಸಲ್ಲಿಸಿದಾಗ, ‘ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಮನೆ ದೊರೆಯುವಂತೆ ಮಾಡುತ್ತೇನೆ’ ಎಂದು ಧೈರ್ಯ ಹೇಳಿದರು.

‘ಪಕ್ಷಕ್ಕೆ 39 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಎಂಎಸ್ಐಎಲ್‌ಗೆ ನಾಮನಿರ್ದೇಶನ ಮಾಡಿ’ ಎಂದು ತೇರದಾಳದ ಸಂಗಮೇಶ್ ಅವರ ಮನವಿಗೆ, ‘ಗೃಹಸಚಿವ ಪರಮೇಶ್ವರ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದು ಅವರಿಗೆ ತಿಳಿಸುತ್ತೇನೆ’ ಎಂದರು.

ಹಾರೋಹಳ್ಳಿಯ ಮಂಜುಳಾ, ಕುಡುಚಿಯ ಬಾಬಾ ಸಾಹೇಬ್ ಜಿನರಾಲ್ಕರ್, ಪಾವಗಡದ ರಾಮಮೂರ್ತಿ, ಬಬಲೇಶ್ವರದ ಫಯಾಜ್, ಬನಶಂಕರಿಯ ಪ್ರಸನ್ನ ಕುಮಾರ್ ಸೇರಿದಂತೆ ಅನೇಕರು ಅಹವಾಲು ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT