ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ₹2 ಸಾವಿರ ತುರ್ತು ಪರಿಹಾರ: ಸಿಎಂ ಸಿದ್ದರಾಮಯ್ಯ

Published 30 ನವೆಂಬರ್ 2023, 16:19 IST
Last Updated 30 ನವೆಂಬರ್ 2023, 16:19 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡುವವರೆಗೆ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಮಧ್ಯಂತರ ಪರಿಹಾರವಾಗಿ ₹ 2 ಸಾವಿರ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಗೃಹ ಕಚೇರಿ ಕೃಷ್ಣಾದಲ್ಲಿ ಕರೆದ ತುರ್ತು ಸುದ್ದಿಗೋಷ್ಠಿಯಲ್ಲಿ ಗುರುವಾರ ಈ ವಿಷಯ ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಬರ ಪರಿಹಾರ ಸಂಬಂಧ ಕೇಂದ್ರ ಗೃಹ ಸಚಿವರ ನೇತೃತ್ವದ ಉನ್ನತ ಮಟ್ಟದ ಸಭೆ ಈವರೆಗೂ ನಡೆದಿಲ್ಲ. ಪರಿಹಾರವನ್ನೂ ಕೊಟ್ಟಿಲ್ಲ’ ಎಂದರು. 

‘ರಾಜ್ಯದಲ್ಲಿರುವ ಒಟ್ಟು 236 ತಾಲ್ಲೂಕುಗಳ ಪೈಕಿ, ಈ ಬಾರಿ 223 ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ. ಬರದಿಂದ 48.19 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ₹ 33,770.10 ಕೋಟಿಯ ಬೆಳೆ ನಷ್ಟ ಅಂದಾಜಿಸಲಾಗಿದೆ. ಕೇಂದ್ರದಿಂದ ₹18,171.44 ಕೋಟಿ ಆರ್ಥಿಕ ನೆರವು ನೀಡಲು ಸೆ. 21ರಂದು ಕೇಂದ್ರಕ್ಕೆ ಮೊದಲ ಮನವಿ ಸಲ್ಲಿಸಲಾಗಿದೆ. ಕೇಂದ್ರದ ತಂಡ ಅಕ್ಟೋಬರ್‌ನಲ್ಲಿ ಬರ ಅಧ್ಯಯನ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಿದೆ’ ಎಂದರು.

‘ಕಂದಾಯ ಸಚಿವರು, ಕೃಷಿ ಸಚಿವರು ದೆಹಲಿಗೆ ಹೋಗಿದ್ದರೂ ಕೇಂದ್ರ ಗೃಹ, ಹಣಕಾಸು ಮತ್ತು ಕೃಷಿ ಸಚಿವರು ಭೇಟಿಗೆ ಸಿಕ್ಕಿರಲಿಲ್ಲ. ಹೀಗಾಗಿ, ಅಧಿಕಾರಿಗಳನ್ನು ಭೇಟಿ ಮಾಡಿ ಬರ ಪರಿಸ್ಥಿತಿ ವಿವರಿಸಿದ್ದಾರೆ. ಆ ಬಳಿಕ, ಹಣಕಾಸು ಸಚಿವರನ್ನು ಕಂದಾಯ ಮತ್ತು ಕೃಷಿ ಸಚಿವರು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ’ ಎಂದರು.

‘ಕೇಂದ್ರ ಸರ್ಕಾರ ಪ್ರತಿ ಹೆಕ್ಟೇರ್‌ ಮಳೆ ಆಶ್ರಿತ ಬೆಳೆಗೆ ₹ 8,500, ನೀರಾವರಿ ಬೆಳೆಗೆ ₹ 17 ಸಾವಿರ, ಬಹು ವಾರ್ಷಿಕ ಬೆಳೆಗೆ ₹ 22,500 ಪರಿಹಾರ ನಿಗದಿ ಮಾಡಿದೆ. ಮಾರ್ಗಸೂಚಿ ಅನ್ವಯ ಎರಡು ಹೆಕ್ಟೇರ್‌ವರೆಗೆ ಮಾತ್ರ ಬೆಳೆ ಪರಿಹಾರ ನೀಡಲಾಗುತ್ತದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ (ಎನ್‌ಡಿಆರ್‌ಎಫ್‌) ₹ 4,663 ಕೋಟಿ ಬೆಳೆ ನಷ್ಟ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ನಾನು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದು ಭೇಟಿಗೆ ಅವಕಾಶ ನೀಡುವಂತೆ ಕೋರಿದ್ದೇನೆ. ಆದರೆ, ಈವರೆಗೂ ಅವಕಾಶ ನೀಡಿಲ್ಲ’ ಎಂದರು.

‘ಬಿತ್ತನೆ ವೈಫಲ್ಯ ಮತ್ತು ಮಧ್ಯಂತರ ಬೆಳೆ ವಿಮೆ ಪರಿಹಾರವಾಗಿ ರಾಜ್ಯ ಸರ್ಕಾರ 6.5 ಲಕ್ಷ ರೈತರಿಗೆ ₹ 440 ಕೋಟಿ ಬಿಡುಗಡೆ ಮಾಡಿದೆ. ಕುಡಿಯುವ ನೀರಿಗೆ, ಮೇವಿಗೆ, ಉದ್ಯೋಗ ಒದಗಿಸಲು ₹ 327 ಕೋಟಿ ಬಿಡುಗಡೆ ಮಾಡಿದ್ದೇವೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ₹780 ಕೋಟಿ ಇದೆ. ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ಸಮಸ್ಯೆ ಆಗಬಾರದು ಎಂದು ಕಂದಾಯ ಸಚಿವರಿಗೆ ಸೂಚನೆ ನೀಡಿದ್ದೇನೆ. 60 ಹಳ್ಳಿಗಳಲ್ಲಿ ಟ್ಯಾಂಕರ್‌ಗಳಲ್ಲಿ ನೀರು ಪೂರೈಸಲಾಗುತ್ತದೆ. ಮೇವಿನ ಸಮಸ್ಯೆ ಈವರೆಗೆ ತಲೆದೋರಿಲ್ಲ. 7 ಲಕ್ಷ ಮೇವಿನ‌ ಬೀಜ ವಿತರಣೆ ಮಾಡಲಾಗಿದೆ’ ಎಂದರು.

'ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ರಾಜ್ಯಕ್ಕೆ ಬರ ಬರುತ್ತದೆ’ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಬರವೂ ಇತ್ತು, ನೆರೆಯೂ ಇತ್ತು. ದೇಶದ 12 ರಾಜ್ಯಗಳಲ್ಲಿ ಬರ ಇದೆ. ಅಲ್ಲೆಲ್ಲಾ ನಾನು ಮುಖ್ಯಮಂತ್ರಿಯಾ? ಸಾಮಾನ್ಯವಾಗಿ ನಾಲ್ಕು ವರ್ಷಕ್ಕೊಮ್ಮೆ ರಾಜ್ಯದಲ್ಲಿ ಬರ ಬರುತ್ತದೆ’ ಎಂದರು.

ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ‘ಜಮೀನಿನ ವಿಸ್ತೀರ್ಣ ಮತ್ತು ಬೆಳೆ ನಷ್ಟವನ್ನು ಪರಿಗಣಿಸಿ ಮೊದಲ ಕಂತಿನಲ್ಲಿ ಕನಿಷ್ಠ ₹ 1 ಸಾವಿರದಿಂದ ಗರಿಷ್ಠ ₹ 2 ಸಾವಿರವರೆಗೆ ನಷ್ಟ ಪರಿಹಾರ ನೀಡಲಾಗುವುದು. ಕೇಂದ್ರ ಸರ್ಕಾರದ ಬೆಳೆ ನಷ್ಟ ಪರಿಹಾರ ಹಣ ನೀಡುವ ಸಂದರ್ಭ, ರಾಜ್ಯ ಸರ್ಕಾರ ಪಾವತಿಸಿದ ಈ ಮಧ್ಯಂತರ ಬೆಳೆ ಪರಿಹಾರವನ್ನು ಕಡಿತಗೊಳಿಸಿ, ಬಾಕಿ ಉಳಿದ ಮೊತ್ತವನ್ನು ಪಾವತಿಸಲಾಗುವುದು. ಬರ ಪೀಡಿತ 223 ತಾಲ್ಲೂಕುಗಳ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ಬೆಳೆ ನಷ್ಟ ಪರಿಹಾರ ನೀಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT