ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮೀನು ಅಕ್ರಮ ವರ್ಗಾವಣೆ: ತನಿಖೆಗೆ ತುಕಾರಾಂ ಆಗ್ರಹ

‘ಬಳ್ಳಾರಿಯಲ್ಲಿ ಮತ್ತೆ ‘ರಿಪಬ್ಲಿಕ್‌’ ನಡೆಸಲು ಅವಕಾಶ ಕೊಡಬಾರದು’
Published 13 ಡಿಸೆಂಬರ್ 2023, 14:22 IST
Last Updated 13 ಡಿಸೆಂಬರ್ 2023, 14:22 IST
ಅಕ್ಷರ ಗಾತ್ರ

ವಿಧಾನಸಭೆ: ಕಬ್ಬಿಣ ಮತ್ತು ಉಕ್ಕು ತಯಾರಿಕಾ ಕಾರ್ಖಾನೆ ಆರಂಭಿಸುವುದಾಗಿ 4,877 ಎಕರೆ ಜಮೀನು ಪಡೆದುಕೊಂಡಿದ್ದ ಬ್ರಹ್ಮಿಣಿ ಸ್ಟೀಲ್ಸ್‌ ಆ ಜಮೀನನ್ನು ಅಕ್ರಮವಾಗಿ ಉತ್ತಮ್ ಗಾಲ್ವಾ ಎಂಬ ಕಂಪನಿಗೆ ಮಾರಾಟ ಮಾಡಿರುವ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್‌ನ ಈ. ತುಕಾರಾಂ ಆಗ್ರಹಿಸಿದರು.

ಉತ್ತರ ಕರ್ನಾಟಕದ ಸಮಸ್ಯೆಗಳ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಬುಧವಾರ ಮಾತನಾಡಿದ ಅವರು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜಿ. ಜನಾರ್ದನ ರೆಡ್ಡಿ ಹೆಸರನ್ನು ಉಲ್ಲೇಖಿಸದೇ ವಾಗ್ದಾಳಿ ನಡೆಸಿದರು. ರೆಡ್ಡಿ ಮಂಗಳವಾರ ಸದನದಲ್ಲಿ ಆಡಿದ್ದ ಮಾತುಗಳಿಗೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದರು.

‘ಬಳ್ಳಾರಿ ಜಿಲ್ಲೆಯಲ್ಲಿ 11,000 ಎಕರೆ ಜಮೀನನ್ನು ಕೈಗಾರಿಕೆಗಳ ಸ್ಥಾಪನೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರ್ಸೆಲರ್‌ ಮಿತ್ತಲ್, ಬ್ರಹ್ಮಿಣಿ ಸ್ಟೀಲ್ಸ್‌ ಸೇರಿದಂತೆ ಹಲವು ಕಂಪನಿಗಳಿಗೆ ಜಮೀನು ನೀಡಲಾಗಿತ್ತು. ಒಬ್ಬರೂ ಕೈಗಾರಿಕೆ ಸ್ಥಾಪಿಸಿಲ್ಲ. ಅಂತಹ ಜಮೀನು ರಿಯಲ್‌ ಎಸ್ಟೇಟ್‌ ಉದ್ದೇಶಕ್ಕೆ ದುರ್ಬಳಕೆಯಾಗುತ್ತಿದೆ. ತಕ್ಷಣ ಈ ಜಮೀನುಗಳನ್ನು ವಶಕ್ಕೆ ಪಡೆಯಬೇಕು. ಕೈಗಾರಿಕೆಗಳನ್ನು ಸ್ಥಾಪಿಸುವವರಿಗೆ ನೀಡಬೇಕು ಅಥವಾ ರೈತರಿಗೆ ಮರಳಿಸಬೇಕು’ ಎಂದು ಒತ್ತಾಯಿಸಿದರು.

‘ಬಳ್ಳಾರಿಯಲ್ಲಿ ‘ರಿಪಬ್ಲಿಕ್‌’ ಮಾಡಿಕೊಂಡಿದ್ದವರು ಈಗ ಏನೇನೋ ಮಾತನಾಡುತ್ತಿದ್ದಾರೆ. 2011ರ ಸೆಪ್ಟೆಂಬರ್‌ ನಂತರ ಅವರು ಎಲ್ಲಿದ್ದರು ಎಂಬುದು ಗೊತ್ತಿದೆ. ಈಗ ತಾವೇ ಬಳ್ಳಾರಿ ಜಿಲ್ಲೆಯನ್ನು ಅಭಿವೃದ್ಧಿಪಡಿಸಿದ್ದಾಗಿ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಬಳ್ಳಾರಿಯಲ್ಲಿ ಮತ್ತೆ ‘ರಿಪಬ್ಲಿಕ್‌’ ನಡೆಸಲು ಯಾರಿಗೂ ಅವಕಾಶ ಕೊಡಬಾರದು. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆಯನ್ನು ಚುರುಕುಗೊಳಿಸಬೇಕು. ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಕೆಲವು ಅಧಿಕಾರಿಗಳು ಮತ್ತೆ ಬಳ್ಳಾರಿ ಜಿಲ್ಲೆಗೆ ಬಂದಿದ್ದಾರೆ. ಅಂತಹ ಅಧಿಕಾರಿಗಳನ್ನು ತಕ್ಷಣ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT