ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಲ್ಮೀಕಿ ನಿಗಮದ ಅಕ್ರಮ: ಯೂನಿಯನ್ ಬ್ಯಾಂಕ್ ಅಧಿಕಾರಿಗಳ ಹೆಸರಿಲ್ಲ!

Published : 10 ಸೆಪ್ಟೆಂಬರ್ 2024, 16:29 IST
Last Updated : 10 ಸೆಪ್ಟೆಂಬರ್ 2024, 16:29 IST
ಫಾಲೋ ಮಾಡಿ
Comments

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದ ದೋಷಾರೋಪ ಪಟ್ಟಿಯಲ್ಲಿ ಯೂನಿಯನ್ ಬ್ಯಾಂಕ್ ಅಧಿಕಾರಿಗಳ ಹೆಸರು ಇಲ್ಲ.

ಅಕ್ರಮದ ಕುರಿತು ತನಿಖೆ ನಡೆಸಿದ್ದ ಜಾರಿ ನಿರ್ದೇಶನಾಲಯವು, ಸೋಮವಾರ ದೋಷಾರೋಪ ಪಟ್ಟಿ ಸಲ್ಲಿಸಿದೆ.

‘ಯೂನಿಯನ್‌ ಬ್ಯಾಂಕ್‌ ಸಿಬಿಐಗೆ ನೀಡಿದ್ದ ದೂರಿನ ಆಧಾರದಲ್ಲೇ ಜಾರಿ ನಿರ್ದೇಶನಾಲಯವು (ಇ.ಡಿ) ಇಸಿಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು. ಆದರೆ ಈಗ ಇ.ಡಿ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಬ್ಯಾಂಕ್‌ನ ಅಧಿಕಾರಿಗಳ ಹೆಸರಿಲ್ಲ’ ಎಂದು ಮೂಲಗಳು ತಿಳಿಸಿವೆ.

ಸಿಬಿಐಗೆ ನೀಡಿದ್ದ ದೂರಿನಲ್ಲಿ ಯೂನಿಯನ್‌ ಬ್ಯಾಂಕ್‌, ‘ಎಂ.ಜಿ.ರಸ್ತೆ ಶಾಖೆಯ ಮುಖ್ಯಸ್ಥೆ ಸುಚಿಸ್ಮಿತಾ ರೌಲ್‌, ಶಾಖಾ ಉಪಮುಖ್ಯಸ್ಥೆ ದೀಪಾ ಡಿ ಮತ್ತು ಸಾಲ ವ್ಯವಹಾರಗಳ ಅಧಿಕಾರಿ ವಿ.ಕೃಷ್ಣಮೂರ್ತಿ ಅವರು ಕರ್ತವ್ಯಲೋಪ ಎಸಗಿದ್ದಾರೆ. ಅಕ್ರಮದಲ್ಲಿ ಅವರೂ ಭಾಗಿಯಾಗಿದ್ದಾರೆಯೇ ಎಂಬುದನ್ನು ಪತ್ತೆ ಮಾಡಬೇಕು’ ಎಂದು ಕೋರಿತ್ತು. ಸಿಬಿಐ ಇದನ್ನು ತನ್ನ ಎಫ್‌ಐಆರ್‌ನಲ್ಲೂ ದಾಖಲಿಸಿತ್ತು.

ಜುಲೈ 11–12ರ ಅವಧಿಯಲ್ಲಿ ಇ.ಡಿ ರಾಜ್ಯದಲ್ಲಿ ಶೋಧ ಕಾರ್ಯ ನಡೆಸಿದಾಗ, ಬ್ಯಾಂಕ್‌ನ ಅಧಿಕಾರಿಗಳ ಮನೆಗಳಲ್ಲೂ ಶೋಧ ನಡೆಸಿತ್ತು. ಆದರೆ ಈಗಿನ ಆರೋಪ ಪಟ್ಟಿಯಲ್ಲಿ ಈ ಮೂವರ ಹೆಸರೂ ಇಲ್ಲ ಎನ್ನಲಾಗಿದೆ.

ಪ್ರಕರಣ–ತನಿಖೆಯ ಹಾದಿ

  • ಮೇ 26: ನಿಗಮದ ಅಧೀಕ್ಷಕ ಚಂದ್ರಶೇಖರನ್‌ ಆತ್ಮಹತ್ಯೆ

  • ಮೇ 28–29: ನಿಗಮದ ಹಣವನ್ನು ಯೂನಿಯನ್‌ ಬ್ಯಾಂಕ್‌ನ ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ನಿಗಮದ ಪ್ರಧಾನ ವ್ಯವಸ್ಥಾಪಕ ಎ.ರಾಜಶೇಖರನ್ ಅವರಿಂದ ಹೈಗ್ರೌಂಡ್ಸ್‌ ಪೊಲೀಸರಿಗೆ ದೂರು

  • ಜೂನ್‌ 6: ಯೂನಿಯನ್‌ ಬ್ಯಾಂಕ್‌ನಿಂದ ತನ್ನ ಅಧಿಕಾರಿಗಳು ಮತ್ತು ಕೆಲ ಅಪರಿಚಿತ ವ್ಯಕ್ತಿಗಳ ವಿರುದ್ಧ ಸಿಬಿಐಗೆ ದೂರು

  • ಮೇ 31: ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರ್ಕಾರ

  • ಜೂನ್ 1: ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭ ಮತ್ತು ಲೆಕ್ಕಾಧಿಕಾರಿಯಾಗಿದ್ದ ಪರಶುರಾಮ್‌ ಜಿ. ದುರುಗಣ್ಣವರ್‌ ಬಂಧಿಸಿದ ಎಸ್‌ಐಟಿ

  • ಜೂನ್‌ 6: ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ

  • ಜೂನ್ 14–24: ನಿಗಮದ ಹಣ ಅಕ್ರಮವಾಗಿ ವರ್ಗಾವಣೆ ಮಾಡಿಕೊಳ್ಳುವಲ್ಲಿ ನೆರವಾಗಿದ್ದ ಸತ್ಯನಾರಾಯಣ ವರ್ಮಾ ಮತ್ತು ಚಂದ್ರಮೋಹನ್‌ ಬಂಧನ. ಸತ್ಯನಾರಾಯಣ ಸಹಚರ ಸಾಯಿತೇಜ್‌ ಬಂಧನ

  • ಜೂನ್‌ 29: ಅಕ್ರಮವಾಗಿ ವರ್ಗಾವಣೆಯಾಗಿತ್ತು ಎನ್ನಲಾದ ₹94.5 ಕೋಟಿಯಲ್ಲಿ ಆರೋಪಿಗಳಿಂದ ₹28 ಕೋಟಿ ವಶಕ್ಕೆ. ವಿವಿಧ ಬ್ಯಾಂಕ್‌ ಖಾತೆಗಳಲ್ಲಿ ಇದ್ದ ₹45 ಕೋಟಿ ಮುಟ್ಟುಗೋಲು

  • ಜೂನ್‌ 11: ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ 11ಕ್ಕೆ. ಶಾಸಕ ಬಿ.ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‌ ಅವರ ವಿಚಾರಣೆ ನಡೆಸಿದ ಎಸ್‌ಐಟಿ

  • ಜುಲೈ 10–12: ಪ್ರಕರಣ ದಾಖಲಿಸಿಕೊಂಡ ಜಾರಿ ನಿರ್ದೇಶನಾಲಯದಿಂದ ರಾಜ್ಯದ ಹಲವೆಡೆ ಶೋಧ. ಬಿ.ನಾಗೇಂದ್ರ ಮತ್ತು ಬಸನಗೌಡ ದದ್ದಲ್‌, ಆಪ್ತರು ಮತ್ತು ಸಂಬಂಧಿಕರ ದೀರ್ಘ ವಿಚಾರಣೆ

  • ಜುಲೈ 12: ನಾಗೇಂದ್ರ ಬಂಧನ. ನಿಗಮದ ಹಣವನ್ನು ಲೋಕಸಭೆ ಚುನಾವಣೆ ಬಳಸಿಕೊಳ್ಳಲಾಗಿದೆ. ₹20 ಕೋಟಿ ಮೌಲ್ಯದ ಮದ್ಯ ಖರೀದಿಸಲಾಗಿದೆ: ಇ.ಡಿ ಹೇಳಿಕೆ

  • ಆಗಸ್ಟ್‌ 5: ಎಸ್‌ಐಟಿಯಿಂದ ಆರೋಪ ಪಟ್ಟಿ ಸಲ್ಲಿಕೆ. ನಿಗಮದ ಪ್ರಧಾನ ವ್ಯವಸ್ಥಾಪಕ ಮತ್ತು ಇತರ ಅಧಿಕಾರಿಗಳಿಂದಲೇ ಕೃತ್ಯ ಎಂದ ಎಸ್‌ಐಟಿ. ಆರೋಪ ಪಟ್ಟಿಯಲ್ಲಿ ನಾಗೇಂದ್ರ ಮತ್ತು ಬಸನಗೌಡ ದದ್ದಲ್‌ ಹೆಸರಿಲ್ಲ

  • ಸೆಪ್ಟೆಂಬರ್ 9: ಜಾರಿ ನಿರ್ದೇಶನಾಲಯದಿಂದ ಆರೋಪ ಪಟ್ಟಿ ಸಲ್ಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT