ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಲ್ಮೀಕಿ ನಿಗಮದ ಅಕ್ರಮ | ಇ.ಡಿ ದೋಷಾರೋಪ ಪಟ್ಟಿ: ನಾಗೇಂದ್ರ ಮೊದಲ ಆರೋಪಿ

ಚುನಾವಣೆಗೆ ₹20.19 ಕೋಟಿ
Published : 10 ಸೆಪ್ಟೆಂಬರ್ 2024, 21:20 IST
Last Updated : 10 ಸೆಪ್ಟೆಂಬರ್ 2024, 21:20 IST
ಫಾಲೋ ಮಾಡಿ
Comments

ಬೆಂಗಳೂರು: ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ₹94 ಕೋಟಿ ಅಕ್ರಮದಲ್ಲಿ ಮಾಜಿ ಸಚಿವ ಹಾಗೂ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ. ನಾಗೇಂದ್ರ ಅವರನ್ನು ಮೊದಲ ಆರೋಪಿಯಾಗಿ ಹೆಸರಿಸಿರುವ ಜಾರಿ ನಿರ್ದೇಶನಾಲಯ (ಇ.ಡಿ), ಈ ಮೊತ್ತದಲ್ಲಿ ₹20.19 ಕೋಟಿಯನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಬಳಸಿಕೊಳ್ಳಲಾಗಿದೆ ಎಂದೂ ಉಲ್ಲೇಖಿಸಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸೋಮವಾರ ಮಧ್ಯಾಹ್ನ 4,970 ಪುಟಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ. 

ನಿಗಮದ ಅಕ್ರಮ ಕುರಿತು ತನಿಖೆ ನಡೆಸಲು ಸರ್ಕಾರ ರಚಿಸಿದ್ದ ವಿಶೇಷ ತನಿಖಾ ದಳವು ನ್ಯಾಯಾಲಯಕ್ಕೆ ಪ್ರತ್ಯೇಕವಾಗಿ ಸಲ್ಲಿಸಿದ್ದ ದೋಷಾರೋಪ ಪಟ್ಟಿಯಲ್ಲಿ ನಾಗೇಂದ್ರ ಅವರನ್ನು ಆರೋಪಿ ಎಂದು ಉಲ್ಲೇಖಿಸಿರಲಿಲ್ಲ. ಅಧಿಕಾರಿಗಳನ್ನಷ್ಟೇ ಹೊಣೆ ಮಾಡಿತ್ತು. ಇ.ಡಿ. ಸಲ್ಲಿಸಿರುವ ದೋಷಾರೋಪ ಪಟ್ಟಿ ಇದಕ್ಕೆ ವ್ಯತಿರಿಕ್ತವಾಗಿದೆ.

‘ನಿಗಮದ ಹಣವನ್ನು ದೋಚಲು ಚುನಾವಣೆಗೂ ಹಲವು ತಿಂಗಳು ಮೊದಲೇ ನಾಗೇಂದ್ರ ಸಂಚು ರೂಪಿಸಿದ್ದರು. ಅವರು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾಗಿದ್ದ ಸಮಯದಲ್ಲಿ, ಅವರ ಆಣತಿಯಂತೆಯೇ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ. ಜತೆಗೆ ಈ ಹಣದಲ್ಲಿ ಸ್ವತಃ ನಾಗೇಂದ್ರ ₹5.26 ಕೋಟಿ ಬಳಸಿಕೊಂಡಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಇ.ತುಕಾರಾಂ ಪರವಾಗಿ ಮತದಾರರನ್ನು ಸೆಳೆಯಲು ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಪ್ರತಿ ಮತಗಟ್ಟೆಯಲ್ಲೂ ಹಣ ಹಂಚಲಾಗಿದೆ ಮತ್ತು ಮತದಾರರಿಗೆ ಹಂಚಲು ಕೋಟ್ಯಂತರ ಮೊತ್ತದ ಮದ್ಯ ಖರೀದಿಸಲಾಗಿದೆ. ಮದ್ಯದಂಗಡಿಯ ಪರವಾನಗಿ ಹೊಂದಿರುವ ನಾಲ್ವರಿಗೆ ಈ ಹಣ ಹೋಗಿದೆ’ ಎಂದು ದೋಷಾರೋಪ ಪಟ್ಟಿ ಉಲ್ಲೇಖಿಸಿದೆ.

ನಾಗೇಂದ್ರ ಪಾತ್ರವೇನು?
  • ಹಣ ಲಪಟಾಯಿಸುವ ಉದ್ದೇಶದಿಂದಲೇ ನಾಗೇಂದ್ರ ಅವರ ಆಪ್ತ ಜೆ.ಜಿ.ಪದ್ಮನಾಭ ಅವರನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ

  • ಯೂನಿಯನ್‌ ಬ್ಯಾಂಕ್‌ನ ಶಾಖೆಯಲ್ಲಿ ಖಾತೆ ತೆರೆಯುವಂತೆ ಮತ್ತು ಎಲ್ಲ ಹಣವನ್ನು ಆ ಖಾತೆಗೇ ವರ್ಗಾಯಿಸುವಂತೆ ನಾಗೇಂದ್ರ ಸೂಚನೆ. ವಸಂತನಗರದ ಶಾಂಗ್ರಿ–ಲಾ ಹೋಟೆಲ್‌ನಲ್ಲಿ ಸಭೆ ನಡೆಸಿದ ಸಾಕ್ಷ್ಯ ಲಭ್ಯ

  • ಲೋಕಸಭಾ ಚುನಾವಣೆಗೆ ಹಣ ಬಳಸಿರುವ, ಪ್ರತಿ ಮತಗಟ್ಟೆಯಲ್ಲಿ ಎಷ್ಟು ಹಣ ಹಂಚಲಾಗಿದೆ ಎಂಬುದರ ವಿವರ ಇರುವ ಪಟ್ಟಿ ನಾಗೇಂದ್ರ ಆಪ್ತ ಸಹಾಯಕ ವಿಜಯಕುಮಾರ್ ಮೊಬೈಲ್‌ನಲ್ಲಿ ಪತ್ತೆ

  • ಹಣದ ಕಂತೆಗಳು, ಚೀಟಿಗಳ ಚಿತ್ರ ಸೇರಿ ಮಹತ್ವದ ದಾಖಲೆಗಳು ಪತ್ತೆ

  • ವಾಲ್ಮೀಕಿ ನಿಗಮದ ಅಧ್ಯಕ್ಷರಾಗಿರುವ ರಾಯಚೂರು ಗ್ರಾಮೀಣ ಕ್ಷೇತ್ರ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್‌ ಅವರ ಹೆಸರೂ ಆರೋಪ ಪಟ್ಟಿಯಲ್ಲಿ ಮುಂದೆ ಬರಬಹುದು ಎಂದು ಮೂಲಗಳು ಹೇಳಿವೆ.

ಜಾರಿ ನಿರ್ದೇಶನಾಲಯದ ಆರೋಪ ಪಟ್ಟಿಯಲ್ಲಿ ಶಾಸಕ ಬಿ. ನಾಗೇಂದ್ರ ಹೆಸರು ಇರುವ ಬಗ್ಗೆ ನನಗೆ ಗೊತ್ತಿಲ್ಲ. ಇ.ಡಿಯಿಂದ ನಮ್ಮ ಇಲಾಖೆಗೆ ವರದಿ ಬಂದಿಲ್ಲ.
–ಜಿ.ಪರಮೇಶ್ವರ, ಗೃಹ ಸಚಿವ

ತುಕಾರಾಂ ವಜಾಕ್ಕೆ ಆಗ್ರಹ

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ₹20.19 ಕೋಟಿಯನ್ನು ಬಳ್ಳಾರಿ ಚುನಾವಣೆಗೆ ಬಳಕೆ ಮಾಡಿರುವುದಾಗಿ ಜಾರಿ ನಿರ್ದೇಶನಾಲಯ ತನ್ನ ದೋಷಾರೋಪ ಪಟ್ಟಿಯಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಆದ್ದರಿಂದ, ಬಳ್ಳಾರಿ ಸಂಸದ ಇ. ತುಕಾರಾಂ ಅವರ ಸದಸ್ಯತ್ವವನ್ನು ಚುನಾವಣಾ ಆಯೋಗ ವಜಾ ಮಾಡಬೇಕು ಎಂದು ವಿಧಾನಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಆಗ್ರಹಿಸಿದರು.

‘ಈ ಹಗರಣದಲ್ಲಿ ನಾಗೇಂದ್ರ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಇ.ಡಿ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ. ಆದರೆ, ಸಿದ್ದರಾಮಯ್ಯ ಮತ್ತು ಶಿವಕುಮಾರ್‌ ಇನ್ವೆಸ್ಟಿಗೇಶನ್‌ ಟೀಂ (ಎಸ್‌ಐಟಿ) ನಾಗೇಂದ್ರಗೆ ಕ್ಲೀನ್‌ ಚಿಟ್‌ ಕೊಟ್ಟಿತ್ತು. ಎಸ್‌ಐಟಿ ತನಿಖೆಯಲ್ಲಿ ನಾಗೇಂದ್ರ ಅವರನ್ನು ರಕ್ಷಿಸಲಾಗಿದೆ’ ಎಂದು ಆರೋಪಿಸಿದ್ದಾರೆ.

‘ಹಣಕಾಸು ಇಲಾಖೆಯ ಲೋಪ’
ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮತ್ತು ಹಣಕಾಸು ಇಲಾಖೆಗಳಿಂದಲೂ ಲೋಪವಾಗಿದೆ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ‘ನಿಗಮವು ಎರಡನೇ ಖಾತೆ ತೆರೆಯುವುದನ್ನು ತಡೆಯುವಲ್ಲಿ ಎರಡೂ ಇಲಾಖೆಗಳು ವಿಫಲವಾಗಿವೆ. ಈ ವಿಚಾರದಲ್ಲಿ ಎರಡೂ ಇಲಾಖೆಗಳಿಂದ ಲೋಪವಾಗಿದೆ. ಎರಡನೇ ಖಾತೆಗೆ ಹಣಕಾಸು ಇಲಾಖೆಯಿಂದ ಹಣ ವರ್ಗಾವಣೆ ಆಗಿದೆ’ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಮುಖ ಆರೋಪಿಗಳು
  • ಎ1: ಬಿ.ನಾಗೇಂದ್ರ, ಶಾಸಕ

  • ಎ2: ಸತ್ಯನಾರಾಯಣ ವರ್ಮಾ, ಫರ್ಸ್ಟ್‌ ಫೈನಾನ್ಸ್‌ ಕ್ರೆಡಿಟ್‌ ಸೊಸೈಟಿ ಪಾಲುದಾರ

  • ಎ3: ಸತ್ಯನಾರಾಯಣ ಏಕತಾರಿ, ಫರ್ಸ್ಟ್‌ ಫೈನಾನ್ಸ್‌ ಕ್ರೆಡಿಟ್‌ ಸೊಸೈಟಿ ಅಧ್ಯಕ್ಷ

  • ಎ4: ಜೆ.ಜಿ.ಪದ್ಮನಾಭ, ನಿಗಮದ ಅಂದಿನ ವ್ಯವಸ್ಥಾಪಕ ನಿರ್ದೇಶಕ

  • ಎ8: ಬಿ.ವಿಜಯಕುಮಾರ್‌, ನಾಗೇಂದ್ರ ಆಪ್ತ ಸಹಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT