ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಯೋನಿಕ್ಸ್‌ ಎಂ.ಡಿ ಸೇರಿ ಮೂವರ ವಿರುದ್ಧ ಎಫ್‌ಐಆರ್

2009–10ರಲ್ಲಿ ನಡೆದಿದ್ದ ಶಾಲಾ ಕಂಪ್ಯೂಟರ್‌ ಪೂರೈಕೆ ಹಗರಣ
Published 20 ಜನವರಿ 2024, 16:38 IST
Last Updated 20 ಜನವರಿ 2024, 16:38 IST
ಅಕ್ಷರ ಗಾತ್ರ

ಬೆಂಗಳೂರು: ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಯೋಜನೆಯನ್ನು (ಐಸಿಟಿ–3) ಸಮರ್ಪಕವಾಗಿ ಅನುಷ್ಠಾನಗೊಳಿಸದೆ ಸರ್ಕಾರಕ್ಕೆ ₹109.19 ಕೋಟಿ ನಷ್ಟ ಮಾಡಿದ ಆರೋಪದ ಮೇಲೆ ಕಿಯೋನಿಕ್ಸ್‌, ಎವೆರಾನ್‌ ಕಂಪನಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸರ್ಕಾರದ ಉಪ ಕಾರ್ಯದರ್ಶಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಸರ್ಕಾರಿ ಶಾಲಾ ಮಕ್ಕಳಿಗೆ ಕಂಪ್ಯೂಟರ್‌ ಸಾಕ್ಷರತೆ ನೀಡಲು 2009–10ರಲ್ಲಿ ಐಸಿಟಿ–3 ಯೋಜನೆ ರೂಪಿಸಲಾಗಿತ್ತು. ₹147.69 ಕೋಟಿ ಮೊತ್ತದ ಯೋಜನೆಯನ್ನು ಸರಿಯಾಗಿ ನಿಭಾಯಿಸದೆ ಅಂದಿನ ಕಿಯೋನಿಕ್ಸ್‌ ವ್ಯವಸ್ಥಾಪಕ ನಿರ್ದೇಶಕ ಹರಿಕುಮಾರ್‌ ಝಾ, ಚೆನ್ನೈನ ಎವೆರಾನ್‌ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಪಿ.ಕಿಶೋರ್‌ ಹಾಗೂ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿಯಾಗಿದ್ದ ಐ.ಎಫ್‌.ಮಾಗಿ ಅವರು ಸರ್ಕಾರಕ್ಕೆ ಆರ್ಥಿಕ ನಷ್ಟ ಮಾಡಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ಪ್ರೌಢಶಾಲಾ ವಿಭಾಗದ ನಿರ್ದೇಶಕರು ಹಲಸೂರು ಗೇಟ್ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಇದನ್ನು ಆಧರಿಸಿ, ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಅಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಹಾಗೂ ಶಿಕ್ಷಣ ಸಚಿವರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂಪುಟದ ಒಪ್ಪಿಗೆ ಪಡೆದು 4,396 ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್‌, ಸ್ಕ್ಯಾನರ್‌, ಡಿಜಿಟಲ್‌ ಕ್ಯಾಮೆರಾ, ಪ್ರಿಂಟರ್‌, ಎಲ್‌ಸಿಡಿ ಪ್ರಾಜೆಕ್ಟರ್‌ ಸೇರಿದಂತೆ ಹಾರ್ಡ್‌ವೇರ್‌ ಉಪಕರಣಗಳನ್ನು ಪೂರೈಸಲು ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮಕ್ಕೆ (ಕಿಯೋನಿಕ್ಸ್‌) ಗುತ್ತಿಗೆ ನೀಡಿದ್ದರು.

ಕಿಯೋನಿಕ್ಸ್ ಸಂಸ್ಥೆಯು ನಿಯಮ ಉಲ್ಲಂಘಿಸಿ ಚೆನ್ನೈನ ಎವೆರಾನ್‌ ಕಂಪನಿಗೆ ಉಪ ಗುತ್ತಿಗೆ ನೀಡಿತ್ತು. ಅಲ್ಲದೇ, ಐದು ವರ್ಷಗಳ ಅವಧಿಯಲ್ಲಿ ಹಂತಹಂತವಾಗಿ ಅನುಷ್ಠಾನಗೊಳಿಸಿದ್ದ ಯೋಜನೆಯಲ್ಲಿ ಶಾಲೆಗಳಿಗೆ ಹಾರ್ಡ್‌ವೇರ್‌ ಪೂರೈಸುವ ಮೊದಲೇ ಒಂದೇ ಬಾರಿಗೆ ಸಾಫ್ಟ್‌ವೇರ್‌ ಖರೀದಿಸಲಾಗಿತ್ತು. ಇದರಿಂದ ಇಲಾಖೆಗೆ ಆರ್ಥಿಕ ನಷ್ಟ ಮಾಡಲಾಗಿತ್ತು. ಈ ಕುರಿತು ತನಿಖೆ ನಡೆಸಲು 10 ವರ್ಷಗಳ ಹಿಂದೆಯೇ ಐಎಎಸ್‌ ಅಧಿಕಾರಿ ಜಿ.ವಿ.ಕೃಷ್ಣರಾವ್‌ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿ ಐದು ಬಾರಿ ವರದಿ ಸಲ್ಲಿಸಿದರೂ, ಲೋಪಗಳನ್ನು ಪಟ್ಟಿ ಮಾಡಿ ಪ್ರತಿ ಬಾರಿಯೂ ವರದಿ ತಿರಸ್ಕರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT