ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ಸಾವಿರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

256 ಐಟಿಐಗಳಿಗೆ ಸಿಗದ ಸಂಯೋಜನೆ l ತಲೆಮರೆಸಿಕೊಂಡ ಪ್ರಾಚಾರ್ಯರು
Last Updated 3 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಮಂಡ್ಯ: ರಾಜ್ಯದ 256 ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ (ಐಟಿಐ) ರಾಜ್ಯ ವೃತ್ತಿ ಶಿಕ್ಷಣ ಪರಿಷತ್‌ ಸಂಯೋಜನೆ ನೀಡದ ಕಾರಣ 4 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ವಂಚಿತರಾಗಿದ್ದು, ಭವಿಷ್ಯ ಅತಂತ್ರವಾಗಿದೆ.

2014–15ರಿಂದ 2 ಬ್ಯಾಚ್‌ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಯೋಜನೆಗೂ ಮೊದಲೇ ಐಟಿಐ ಆಡಳಿತ ಮಂಡಳಿಗಳು ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಂಡಿದ್ದವು. ಪ್ರತಿ ವಿದ್ಯಾರ್ಥಿಯಿಂದ ಸಾವಿರಾರು ರೂಪಾಯಿ ಶುಲ್ಕ ವಸೂಲಿ ಮಾಡಿ ತರಗತಿಗಳನ್ನೂ ಆರಂಭಿಸಿದ್ದವು. ವೃತ್ತಿ ಶಿಕ್ಷಣ ಪರಿಷತ್‌ ಅಧಿಕಾರಿಗಳು ಸಂಸ್ಥೆಗಳಿಗೆ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದ ನಂತರವೂ ಸಂಯೋಜನೆ ನೀಡದ ಕಾರಣ ವಿದ್ಯಾರ್ಥಿಗಳು ಪರೀಕ್ಷೆ ವಂಚಿತರಾಗಿದ್ದಾರೆ.

ಈ ವಿದ್ಯಾರ್ಥಿಗಳು ಈಗ ಆಡಳಿತ ಮಂಡಳಿ ಮುಖ್ಯಸ್ಥರು ಹಾಗೂ ಪ್ರಾಚಾರ್ಯರ ವಿರುದ್ಧ ಆಕ್ರೋಶಗೊಂಡಿದ್ದಾರೆ. ಮದ್ದೂರು ತಾಲ್ಲೂಕು, ಬೆಸಗರಹಳ್ಳಿಯ ಪಂಚಲಿಂಗೇಶ್ವರ ಐಟಿಐ ವಿದ್ಯಾರ್ಥಿಗಳು ಪರೀಕ್ಷೆ ನೀಡುವಂತೆ ಒತ್ತಾಯಿಸಿ ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ.

ಪ್ರಾಚಾರ್ಯರು ತಲೆಮರೆಸಿಕೊಂಡಿದ್ದು, ಅವರ ವಿರುದ್ಧ ಬೆಸಗರಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಜಿಲ್ಲೆಯ 7 ಐಟಿಐಗಳಿಗೆ ಸಂಯೋಜನೆ ಸಿಗದೆ 400 ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ.

‘ಹಲವು ಕಾಲೇಜುಗಳಿಗೆ ಸಂಯೋಜನೆ ಸಿಕ್ಕಿದ್ದರೂ ಮಕ್ಕಳು ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ನೀಡಿಲ್ಲ. ದಾಖಲಾತಿ ಸಲ್ಲಿಸಿಲ್ಲ ಎಂಬ ನೆಪ ಹೇಳಿ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದ್ದಾರೆ. ವಿದ್ಯಾರ್ಥಿಗಳು ನಮ್ಮ ಕಾಲೇಜಿಗೆ ನುಗ್ಗಿ ದಾಂದಲೆ ನಡೆಸಿ ಪರಿಕರಗಳನ್ನು ಒಡೆದುಹಾಕಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಹೆಸರು ಹೇಳಲಿಚ್ಛಿಸದ ಐಟಿಐ
ಪ್ರಾಚಾರ್ಯರೊಬ್ಬರು ತಿಳಿಸಿದರು.

ಹೈಕೋರ್ಟ್‌ ಆದೇಶ: ಪರಿಷತ್‌ ನಡೆಯ ವಿರುದ್ಧ ಐಟಿಐ ಆಡಳಿತ ಮಂಡಳಿ ಸದಸ್ಯರು 2017ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್‌ 2018, ಮೇ ತಿಂಗಳಲ್ಲಿ ಮಧ್ಯಂತರ ಆದೇಶ ನೀಡಿತು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಪರಿಷತ್‌ಗೆ ಸೂಚನೆ ನೀಡಿತು. ಜೊತೆಗೆ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವರಾಗಿದ್ದ ಸಂತೋಷ್‌ ಲಾಡ್‌ ಕೂಡ ಪರೀಕ್ಷೆ ನೀಡುವಂತೆ ಸೂಚಿಸಿದ್ದರು.

ಆದರೆ, ಈ ಪ್ರಕ್ರಿಯೆ ನಡೆದು ವರ್ಷ ಕಳೆದರೂ ಯಾವುದೇ ಸಂಸ್ಥೆಗಳಿಗೆ ಸಂಯೋಜನೆ ಸಿಕ್ಕಿಲ್ಲ. ಪರಿವೀಕ್ಷಣೆ ನಡೆಸಿದ ನಂತರ ಸಂಯೋಜನೆ ಅರ್ಜಿ ತಿರಸ್ಕೃತವಾಗಿರುವ ಬಗ್ಗೆಯೂ ಯಾವುದೇ ಮಾಹಿತಿ ನೀಡಿಲ್ಲ.

‘ಹೈಕೋರ್ಟ್‌ ಆದೇಶವನ್ನೂ ಪಾಲಿಸದ ಪರಿಷತ್‌ ಆಯುಕ್ತರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಪ್ರಾಚಾರ್ಯರೊಬ್ಬರು ಹೇಳಿದರು.

ಸೆ.1ಕ್ಕೆ ಪರೀಕ್ಷೆ: ಪರದಾಟ
‘ಸೆಪ್ಟೆಂಬರ್‌ 1ರಿಂದ ಪರೀಕ್ಷೆ ಆರಂಭವಾಗಲಿದ್ದು, ಇನ್ನೂ ಪರೀಕ್ಷಾ ಶುಲ್ಕ ಕಟ್ಟಿಸಿಕೊಂಡಿಲ್ಲ. ಪರೀಕ್ಷೆ ಸಿಗುತ್ತದೋ, ಇಲ್ಲವೋ ಎಂಬ ಬಗ್ಗೆ ಮಾಹಿತಿ ಇಲ್ಲ. ಪ್ರತಿನಿತ್ಯ ಕಾಲೇಜಿನ ಬಳಿ ಬಂದರೂ ಪ್ರಾಚಾರ್ಯರುಸಿಗುತ್ತಿಲ್ಲ’ ಎಂದು ಕೆ.ಆರ್‌.ಪೇಟೆಯ ಐಟಿಐ ವಿದ್ಯಾರ್ಥಿ ಪ್ರಸನ್ನಕುಮಾರ್‌ ನೋವು ವ್ಯಕ್ತಪಡಿಸಿದರು.

*
ಕೈಗಾರಿಕಾ ತರಬೇತಿ ಸಂಸ್ಥೆಗಳು ನಿಯಮ ಉಲ್ಲಂಘನೆ ಮಾಡಿರುವ ಕಾರಣ ಸಂಯೋಜನೆ ನೀಡಿಲ್ಲ. ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.
-ಉಮೇಶ್‌ ರಾವ್‌, ಸಹಾಯಕ ನಿರ್ದೇಶಕರು, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT