ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಲೆಗಳು ನಾಳೆ ಪುನರಾರಂಭ, ಮೊದಲ ದಿನ ಸಿಹಿಯೂಟ

Published 27 ಮೇ 2024, 23:30 IST
Last Updated 27 ಮೇ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಮೇ 29 ರಿಂದ ಪುನರಾರಂಭವಾಗುತ್ತಿದ್ದು, ಮೊದಲ ದಿನದಿಂದಲೇ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. 

2024–25 ನೇ ಸಾಲಿನ ಶಿಕ್ಷಣವನ್ನು ‘ಶೈಕ್ಷಣಿಕ ಬಲವರ್ಧನೆ’ ಪರಿಕಲ್ಪನೆಯ ಆಧಾರದಲ್ಲಿ ನಿರ್ವಹಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಘೋಷ ವಾಕ್ಯ ಸಿದ್ಧಪಡಿಸಿದ್ದು, ಕಲಿಕಾ ಗುಣಮಟ್ಟ ಹಾಗೂ ತಂತ್ರಜ್ಞಾನ ಆಧಾರಿತ ಬೋಧನೆಗೆ ಹೆಚ್ಚಿನ ಒತ್ತು ನೀಡಲು ಸೂಚಿಸಿದೆ.

ಮುಖ್ಯ ಶಿಕ್ಷಕರು, ಕೆಲ ಸಹ ಶಿಕ್ಷಕರು ಶಾಲೆ ಆರಂಭಕ್ಕೂ ಎರಡು ದಿನಗಳ ಮೊದಲೇ ಕೆಲಸಕ್ಕೆ ಹಾಜರಾಗಿದ್ದು, ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಶಾಲೆಯ ಅಂಗಳ ಹಾಗೂ ಶಾಲಾ ಕೊಠಡಿ, ಶೌಚಾಲಯಗಳನ್ನು ಈಗಾಗಲೇ ಸ್ವಚ್ಛಗೊಳಿಸಲಾಗಿದೆ. ಬಹುತೇಕ ಕಡೆ ಸಣ್ಣಪುಟ್ಟ ದುರಸ್ತಿ ಕಾರ್ಯ ಪೂರ್ಣಗೊಳಿಸಲಾಗಿದೆ. ಮಾವಿನ ತೋರಣ, ಬಾಳೆಕಂದು ಕಟ್ಟಿ, ರಂಗೋಲಿ ಬಿಡಿಸಿ ಶಾಲೆಗಳನ್ನು ಸಿಂಗಾರಗೊಳಿಸುವ ಕೆಲಸ ಸಾಗಿದೆ. ಶಾಲಾ ಆರಂಭದ ದಿನ ಒಂದು ರೀತಿ ಹಬ್ಬದ ಸಂಭ್ರಮವಿರಲಿದೆ.

ಮೊದಲ ದಿನ ಸಿಹಿಯೂಟ: ಶಾಲಾ ಮಕ್ಕಳಿಗೆ ಮೊದಲ ದಿನವೇ ಪಠ್ಯಪುಸ್ತಕ, ಎರಡು ಜತೆ ಸಮವಸ್ತ್ರ ವಿತರಿಸಲಾಗುತ್ತದೆ. ಇದೇ ಮೊದಲ ಬಾರಿ ಶಾಲಾ ಆರಂಭಕ್ಕೂ ಮೊದಲೇ ಎಲ್ಲ ವಿಷಯಗಳ ಪಠ್ಯಪುಸ್ತಕಗಳು ಶಾಲೆಗಳನ್ನು ತಲುಪಿವೆ. ಒಂದೇ ಬಾರಿಗೆ ಎರಡೂ ಜತೆ ಸಮವಸ್ತ್ರ ನೀಡಲಾಗುತ್ತಿದೆ. ಮಧ್ಯಾಹ್ನದ ಬಿಸಿಯೂಟದಲ್ಲಿ ಕೇಸರಿ ಬಾತ್, ಹೆಸರುಬೇಳೆ ಪಾಯಸ ಸೇರಿದಂತೆ ಯಾವುದಾದರೂ ಒಂದು ಸಿಹಿ ತಿನಿಸು ನೀಡಲಾಗುತ್ತಿದೆ. ಈಗಾಗಲೇ ಆಹಾರ ಪದಾರ್ಥಗಳನ್ನು ಸಂಗ್ರಹಿಸಿಡಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT