ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ನಮನ | ಕಮಲಾ ಹಂಪನಾ ನಿಧನ: ಹಾರಿ ಹೋದ ಬಲಾಕ

Published 22 ಜೂನ್ 2024, 23:30 IST
Last Updated 22 ಜೂನ್ 2024, 23:30 IST
ಅಕ್ಷರ ಗಾತ್ರ

ಕಳೆದ ತಿಂಗಳು ರಂಗಪ್ರವೇಶದ ಕಾರ್ಯಕ್ರಮವೊಂದಿತ್ತು. ಮುಖ್ಯ ಅತಿಥಿಗಳಾದ ಹಂಪನಾ ಅವರಿಗಾಗಿ ಕಾಯುತ್ತಿರುವಾಗ ನಾನೆಂದೆ, ‘ಕನ್ನಡದ ಆದಿ ದಂಪತಿ’ ಯಾಕೋ ಇನ್ನೂ ಬರಲಿಲ್ಲವಲ್ಲ ಎಂದು. ಒಬ್ಬರು ಅತಿಥಿಯಾಗಿದ್ದರೂ ದಂಪತಿ ಇಬ್ಬರೂ ಬರುವುದು ಅವರ ನಿಡುಗಾಲದ ಸಖ್ಯದ ವ್ಯಾಖ್ಯಾನದಂತೆ ಕಾಣಿಸುತ್ತಿತ್ತು. ಅಲ್ಲಿದ್ದ ಹಲವರು ‘ಆದಿ ದಂಪತಿ’ ಎನ್ನುವುದು ಸರಿಯಾದ ಮಾತು ಎಂದೂ ಅನುಮೋದಿಸಿದ್ದರು. ಒಂದೇ ತಿಂಗಳಲ್ಲಿ ಆ ಜೋಡಿ ಮುಕ್ಕಾದುದನ್ನು ನೋಡಿ ಅಪಾರ ದುಃಖವಾಗುತ್ತಿದೆ. ‘ಜಕ್ಕವಕ್ಕಿ’ಗಳ ಹಾಗೆ ಬದುಕಿದವರು ಇವರಿಬ್ಬರು. ಅನುಕೂಲ ಸತಿಯರ ಪರಿಕಲ್ಪನೆಯನ್ನೇ ಬದಲಿಸುವಂತೆ ಪ್ರೊ. ಹಂಪನಾ ಅನುಕೂಲ ಪತಿಯೂ ಆಗಿದ್ದರು. 

ಅಂತರ್ಜಾತೀಯ ಮದುವೆಗಳು ವಿರಳವಾಗಿದ್ದ ಕಾಲದಲ್ಲಿ ಇವರದು ಅಂತರ್ಧರ್ಮೀಯ ಮದುವೆಯೂ ಆಗಿತ್ತು. ಆ ಕಷ್ಟದ ದಿನಗಳನ್ನು ಕಮಲಾ ಹಂಪನಾ ಅವರು ಅವರ ಆತ್ಮಚರಿತ್ರೆ ‘ಬೇರು ಬೆಂಕಿ ಬಿಳಲು’ವಿನಲ್ಲಿ ವಿವರವಾಗಿಯೇ ಬರೆದಿದ್ದಾರೆ. ಆ ಮದುವೆಗೆ ಎದುರಾದ ಸಂಕಷ್ಟದ ಗಳಿಗೆಯೊಂದನ್ನು ಅದೆಷ್ಟು ಧೀರವಾಗಿ ಅವರು ಎದುರಿಸಿದರು ಎನ್ನುವುದು ಅವರ ಬಗೆಗಿನ ಗೌರವವನ್ನು ಹೆಚ್ಚಿಸುತ್ತದೆ. ಮದುವೆಯ ನಂತರ ಅತ್ತೆ ಮನೆಯ ಮೆಚ್ಚಿನ ಸೊಸೆಯಾದದ್ದು, ಆ ಮನೆಯ ಆಧಾರಸ್ತಂಭವೇ ಆದದ್ದನ್ನೂ ತೃಪ್ತಿಯಿಂದಲೇ ಬರೆದಿದ್ದಾರೆ. ಇದನ್ನು ಹೆಣ್ಣಿನ ‘ಒಳಗೊಳ್ಳುವ’ ಶಕ್ತಿಯೆಂದೇ ನೋಡಬೇಕು. ಈ ದೃಷ್ಟಿಯಿಂದ ಹಂಪನಾ ಅವರ ‘ಚಾರು ವಸಂತ’ ಕೃತಿ ಇವರ ಸಖ್ಯಗೀತೆ.

ತುಂಬಾ ಹಿಂದೊಮ್ಮೆ ಇವರನ್ನು ಭೇಟಿಯಾಗಿದ್ದಾಗ, ಹೆಣ್ಣಿಗೆ ಯಾವುದೂ ಅಸಾಧ್ಯವಲ್ಲ, ನೋಡಿ , ನಾನು ಈಗ ತಾನೇ ಕಾಲೇಜಿಂದ ಬಂದಿದ್ದೀನಿ, ಒಳಗೆ ಅಡುಗೆಗೆ ಇಟ್ಟುಕೊಂಡೇ, ಇಲ್ಲಿ ಟೇಬಲ್ ಮೇಲೆ ಬರೀತಾನೂ ಇದ್ದೀನಿ ಅಂದಾಗ, ‘ಇದೂ ಶೋಷಣೆಯೇ ಅಲ್ಲವೇ’ ಅಂದಿದ್ದೆ. ‘ನಿಜ, ಆದರೆ ಆರಂಭದಲ್ಲಿ ನಾವು ಹೆಣ್ಣು ಮಕ್ಕಳು ಇದನ್ನೆಲ್ಲ ದಾಟಿಕೊಂಡೇ ಹೋಗಬೇಕು, ಮುಂದೊಂದು ದಿನ ಕಾಲ ಬದಲಾದೀತು’ ಎಂದದ್ದು ನೆನಪಾಗುತ್ತಿದೆ. 

ಶಿಕ್ಷಣ ಪಡೆಯುವ ಹಂತದಿಂದ ಮಹಾರಾಣಿ ಕಾಲೇಜಿನ ಪ್ರಾಂಶುಪಾಲರಾಗುವ ತನಕದ ಅವರ ಪ್ರಯಾಣ ಹೋರಾಟದ್ದು, ಮಾತ್ರವಲ್ಲ; ಸಾರ್ಥಕತೆಯದೂ ಹೌದು. ಉದ್ಯೋಗಸ್ಥ ಮಹಿಳೆಯ ಅನಿವಾರ್ಯ ಸವಾಲುಗಳನ್ನು ಲೀಲಾಜಾಲವಾಗಿ ಎನ್ನುವಂತೆ ಎದುರಿಸುತ್ತಾ ಸಂಶೋಧನೆಯಲ್ಲಿ ತೊಡಗಿಸಿಕೊಂಡು, ಸಾಹಿತ್ಯದ ಇತರ ಪ್ರಕಾರಗಳಲ್ಲೂ ಬರವಣಿಗೆಯನ್ನು ಸಾತತ್ಯದಲ್ಲಿ ಉಳಿಸಿಕೊಂಡು ಬರುವುದು ಅವರಿಗೆ ಸಾಧ್ಯವಾಯಿತು. ಮೂಡಬಿದಿರೆಯಲ್ಲಿ  2003ರಲ್ಲಿ ನಡೆದ  71ನೇ  ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಹೆಗ್ಗಳಿಕೆಯೂ ಇವರದಾಗಿದೆ. ಇವರ ಸಮಗ್ರ ಸಾಹಿತ್ಯ ಸಂಪುಟಗಳನ್ನು ಸ್ವಪ್ನ ಬುಕ್ ಹೌಸ್ ಪ್ರಕಟಿಸಿದೆ. ಕನ್ನಡದ ಮಟ್ಟಿಗೆ ಲೇಖಕಿಯೊಬ್ಬರ ಸಾಹಿತ್ಯದ ಹತ್ತು ಸಂಪುಟಗಳು ಪ್ರಕಟವಾಗಿರುವುದು ಬಹುಶಃ ಇವರೊಬ್ಬರದೇ ಎನ್ನಿಸುತ್ತದೆ. ಇವರ ಬಹುತೇಕ ಕೃತಿಗಳ ಶೀರ್ಷಿಕೆ ’ಬ’ಕಾರದಿಂದ ಶುರುವಾಗುತ್ತದೆ. ಇದಕ್ಕೆ ತಮ್ಮ ಗುರು ಹಾ ಮಾ ನಾಯಕರೇ ಸ್ಫೂರ್ತಿ ಎಂದು ಒಂದು ಕಡೆ ಹೇಳಿಕೊಂಡಿದ್ದಾರೆ.

ಜೈನ ಸಾಹಿತ್ಯ ಮತ್ತು ಮಹಿಳೆ ಕಮಲಾ ಅವರ ಪ್ರಧಾನ ಆಸಕ್ತಿಗಳು. ಸಂಶೋಧನೆ ಮತ್ತು ವಿಮರ್ಶೆ ಎರಡೂ ಇವರ ಬರವಣಿಗೆಯ ಜೀವನದುದ್ದಕ್ಕೂ ಉಳಿದುಕೊಂಡು ಬಂದವು.  ಜೈನಧರ್ಮದಲ್ಲಿ ಮಹಿಳೆಯರು ಪಡೆದ ಮಹತ್ವವನ್ನು ಕುರಿತು ಮತ್ತೆ ಮತ್ತೆ ಇವರು ಬರೆದಿದ್ದಾರೆ. ಜೈನಧರ್ಮವು ಪ್ರತಿಪಾದಿಸಿದ ಜೀವನ ಮೌಲ್ಯಗಳು ಇವತ್ತಿಗೆ ಪ್ರಸ್ತುತ, ಅವುಗಳಿಂದ ಸಮಕಾಲೀನ ಜಗತ್ತು ಕಲಿಯಲೇಬೇಕಾದ ಪಾಠಗಳಿವೆ ಎನ್ನುವುದು ಇವರ ಗಾಢ ನಂಬಿಕೆಯಾಗಿತ್ತು. ಸಾರ್ವಜನಿಕವಾಗಿಯೂ ಹೆಣ್ಣಿಗೆ ಅನ್ಯಾಯವಾದ ಸಂದರ್ಭಗಳಲ್ಲಿ ನಿರ್ಭಿಡೆಯಿಂದ ಇವರು ಪ್ರತಿಭಟಿಸಿದ ಅನೇಕ ಉದಾಹರಣೆಗಳಿವೆ. 

ಒಂದು ಸಣ್ಣ ಉದಾಹರಣೆ ಕೊಡುವುದಾದರೆ, ‘ಭಾರತ ಸಂವಿಧಾನಕ್ಕಿಂತ ನಾರಾಯಣಾಚಾರ್ಯ ದೊಡ್ಡವರೆ’ ಎನ್ನುವ ಲೇಖನದಲ್ಲಿ ಅವರ ಜನಪರ ನಿಲುವುಗಳು ನಿಷ್ಠುರತೆಯಲ್ಲಿ, ಪ್ರಖರತೆಯಲ್ಲಿ ಪ್ರತಿಪಾದಿತವಾಗಿವೆ. ವಾಲ್ಮೀಕಿಯನ್ನು ಬ್ರಾಹ್ಮಣರ ಗುಂಪಿಗೆ ಸೇರಿಸುವ ರಾಜಕಾರಣವನ್ನು ಪ್ರತಿಭಟಿಸುತ್ತಾ ಸಂವಿಧಾನವೇ ‘ಬೇಡ’ರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿರುವಾಗ ಇವರು, ಅವರನ್ನು ಬ್ರಾಹ್ಮಣ ಜಾತಿಗೆ ಸೇರಿಸಿರುವುದರ ಹಿಂದಿನ ಹುನ್ನಾರವನ್ನು ಪ್ರಶ್ನಿಸುತ್ತಾರೆ. 

ಜೊತೆಯ ಲೇಖಕಿಯರ ಏಳ್ಗೆಯಲ್ಲಿ ತಮ್ಮ ಏಳ್ಗೆಯನ್ನು ಕಾಣುವ ಅಪರೂಪದ ಗುಣವೊಂದಿತ್ತು ಇವರಲ್ಲಿ. ಯಾವ ಲೇಖಕಿಗೆ ಪ್ರಶಸ್ತಿ ಬಂದಾಗಲೂ ತಪ್ಪದೇ ಫೋನ್ ಮಾಡಿ ಅಭಿನಂದಿಸುತ್ತಿದ್ದರು. ಕೆಲವೊಮ್ಮೆ ‘ಏನಮ್ಮ, ನೀನು ವಾರಕ್ಕೊಂದು ಪ್ರಶಸ್ತಿ ತೊಗೊಳ್ತಾ ಇದ್ದರೆ, ಎಷ್ಟೂಂತ ನಿನಗೆ ಅಭಿನಂದಿಸೋದು’ ಎಂದು ರೇಗಿಸುತ್ತಾ, ‘ಮನೆಗೆ ಬಾ ಒಳ್ಳೆ ಕಾಫಿನಾದ್ರೂ ಮಾಡಿಕೊಡ್ತೀನಿ’ ಅನ್ನುತ್ತಿದ್ದರು.

ನಾಲ್ಕೈದು ವರ್ಷಗಳ ಕೆಳಗೆ ಒಮ್ಮೆ ಇದ್ದಕ್ಕಿದ್ದಂತೆ ಮಹಾರಾಣಿ ಕಾಲೇಜಿಗೆ ಬಂದರು. ಎಷ್ಟೆಲ್ಲಾ ಬದಲಾವಣೆ ಆಗಿದೆ ಅನ್ನುತ್ತಲೇ, ‘ಆಶಾ ನಿನ್ನಿಂದ ಒಂದು ಸಹಾಯ ಆಗಬೇಕು’ ಅಂದರು. ‘ಏನು ಅಂದರೆ ನಮ್ಮಿಬ್ಬರನ್ನೂ ಜಗತ್ತಿನ ಆಯ್ದ ಆದರ್ಶ ಜೋಡಿ ಅಂತ ಮಿಕ್ಕ ಕೆಲವು ಜೋಡಿಗಳ ಜೊತೆ ಆರಿಸಿದ್ದಾರೆ. ಇದಕ್ಕಾಗಿ ಒಂದು ಸಾಕ್ಷ್ಯಚಿತ್ರ ಮಾಡ್ತಿದ್ದಾರೆ. ಅದಕ್ಕೇ ನಮ್ಮಿಬ್ಬರ ಶೂಟಿಂಗ್ ಇಲ್ಲೂ ಆಗಬೇಕು ಅಂತ ಬಂದಿದ್ದೀವಿ. ನಡುವೆ ನಾನು ಬೇರೆ ಸೀರೆ ಉಟ್ಕೋಬೇಕು, ಅದಕ್ಕೆ ನಿಮ್ಮ ಸ್ಟಾಫ್ ರೂಮ್ ಬೇಕು’ ಎಂದರು. ಅವರ ಆಸಕ್ತಿ, ಉತ್ಸಾಹ ನೋಡಿ ಬೆರಗಾಗಿದ್ದೆ. 

ಕಮಲಾ ಮೇಡಂ ಎಂದರೆ ಅಸೀಮ ಜೀವನ ಪ್ರೀತಿ ಮತ್ತು ಸ್ನೇಹಪರತೆ. ನಗುವಿಲ್ಲದ ಅವರ ಮುಖವನ್ನು ಯಾರೂ ನೋಡಿಲ್ಲ, ಅವರ ಕೊನೆಯ ನೋಟದಲ್ಲೂ ಇದ್ದದ್ದು ಅದೇ ನಗುಮುಖ.

ಈ ‘ಆದಿ ದಂಪತಿ’ಯ ಪ್ರೇಮದ ಪರಿ. ಈ ಅನನ್ಯ ಚಿತ್ರವನ್ನು ಈ ಹಿಂದೆ ಪ್ರಜಾವಾಣಿ ಸಂದರ್ಶನದ ವೇಳೆ ಕ್ಲಿಕ್ಕಿಸಲಾಗಿತ್ತು

ಈ ‘ಆದಿ ದಂಪತಿ’ಯ ಪ್ರೇಮದ ಪರಿ. ಈ ಅನನ್ಯ ಚಿತ್ರವನ್ನು ಈ ಹಿಂದೆ ಪ್ರಜಾವಾಣಿ ಸಂದರ್ಶನದ ವೇಳೆ ಕ್ಲಿಕ್ಕಿಸಲಾಗಿತ್ತು

ಚಿತ್ರ: ಎಂ.ಎಸ್‌. ಮಂಜುನಾಥ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT