ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಧಾನಕ್ಕೆ ಬಗ್ಗದ ಈಶ್ವರಪ್ಪ: ಮೋದಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ನಕಾರ

Published 17 ಮಾರ್ಚ್ 2024, 23:31 IST
Last Updated 17 ಮಾರ್ಚ್ 2024, 23:31 IST
ಅಕ್ಷರ ಗಾತ್ರ

ಶಿವಮೊಗ್ಗ: ತಮ್ಮ ಮಗ ಕೆ.ಇ. ಕಾಂತೇಶ್‌ಗೆ ಲೋಕಸಭಾ ಚುನಾವಣೆ ಯಲ್ಲಿ ಸ್ಪರ್ಧಿಸಲು ಟಿಕೆಟ್‌ ನೀಡಿಲ್ಲ ಎಂಬುದರಿಂದ ಆಕ್ರೋಶಗೊಂಡಿರುವ ಬಿಜೆಪಿ ಮುಖಂಡ ಕೆ.ಎಸ್‌. ಈಶ್ವರಪ್ಪ ಅವರ ಸಿಟ್ಟು ಇನ್ನೂ ಶಮನವಾಗಿಲ್ಲ. 

‘ಸೋಮವಾರ ಶಿವಮೊಗ್ಗದಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಬಿಜೆಪಿ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿ ವೇದಿಕೆ ಹಂಚಿಕೊಳ್ಳಲು ಸಾಧ್ಯವಿಲ್ಲ’ ಎಂದು ಈಶ್ವರಪ್ಪ ಹೇಳಿದ್ದಾರೆ.

ಭಾನುವಾರ ಮನವೊಲಿಕೆಗೆ ಬಂದಿದ್ದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೋಹನ್‌ ಅಗರ್‌ವಾಲ್ ಹಾಗೂ ಶಾಸಕರಾದ ಆರಗ ಜ್ಞಾನೇಂದ್ರ, ಡಿ.ಎಸ್. ಅರುಣ್ ಅವರನ್ನೊಳಗೊಂಡ ನಿಯೋಗದೊಂದಿಗೆ ಚರ್ಚಿಸಿದರು. ‘ಯಾವುದೇ ಕಾರಣಕ್ಕೂ ಸ್ಪರ್ಧೆಯ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಅಲ್ಲದೆ, ನಿಯೋಗವು ಮಾತುಕತೆ ನಡೆಸುತ್ತಿರುವಾಗಲೇ ಬೇರೆ ಕಾರ್ಯ ಕ್ರಮದ ಕಾರಣ ನೀಡಿ ಅವರು ಸಭೆಯಿಂದ ಹೊರನಡೆದರು.  ಸಂಧಾನಕಾರರು ಕಾಯುತ್ತ ಕುಳಿತರೂ ತಮ್ಮ ನಿವಾಸಕ್ಕೆ ಬಹಳ ಹೊತ್ತು ಮರಳಲಿಲ್ಲ.

‘ಪ್ರಧಾನಿ ಮೋದಿ ನನ್ನ ದೇವರು. ಪ್ರಾಣ ಹೋದರೂ ಅವರ ಹೆಸರು ಹೇಳುವುದನ್ನು ಬಿಡುವುದಿಲ್ಲ. ಆದರೆ, ಕುಟುಂಬವೊಂದರ (ಯಡಿಯೂರಪ್ಪ) ಕಪಿಮುಷ್ಟಿಯಿಂದ ಪಕ್ಷವನ್ನು ಬಿಡುಗಡೆಗೊಳಿಸಬೇಕು ಎನ್ನುವ ಉದ್ದೇಶದಿಂದ ಲೋಕಸಭಾ ಚುನಾವಣೆಗೆ ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ. ಗೆದ್ದ ಬಳಿಕ ಮೋದಿ ಬಳಿ ಹೋಗುವೆ. ಮೋದಿ ಅವರ ಸಮಾವೇಶದಲ್ಲಿ ಭಾಗವಹಿಸದಿರುವ ಬಗ್ಗೆ ದುಃಖವಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಯಡಿಯೂರಪ್ಪ ಹಾಗೂ ಅವರ ಪುತ್ರರ ಕೈಯಲ್ಲಿ ಪಕ್ಷ ನಲುಗುತ್ತಿದೆ. ಲಿಂಗಾಯತರೆಲ್ಲರೂ ಯಡಿಯೂರಪ್ಪನವರ ಕೈಯಲ್ಲಿದ್ದಾರೆಂಬ ಭ್ರಮೆಯಲ್ಲಿ ಕೇಂದ್ರದ ನಾಯಕರಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಅವರದೇ ರಾಜ್ಯಭಾರವಾಗಿದೆ. ನೊಂದ ಕಾರ್ಯಕರ್ತರು ಇವರಿಂದ ನಲುಗಿ ಹೋಗಿದ್ದಾರೆ’ ಎಂದರು.

ಸಂಧಾನ ವಿಫಲ: ಮಧ್ಯಾಹ್ನ 12ಕ್ಕೆ ಈಶ್ವರಪ್ಪ ಅವರ ಮನವೊಲಿಸಲು ಸಭೆ ನಡೆಸಲಾಯಿತು. ಈಶ್ವರಪ್ಪ ಅವರು ಸಭೆಯ ಮಧ್ಯೆ ಹೊರನಡೆದರೂ ಕಾದು ಕುಳಿತ ನಿಯೋಗ ಕಡೆಗೆ ಸಂಧಾನ ಫಲಿಸದೇ ಮರಳಿತು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಮೋಹನ್‌ ಅಗರ್‌ವಾಲ್, ‘ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ಪ್ರವಾಸ ಕೈಗೊಂಡಿರುವೆ. ಸ್ಪರ್ಧಿಸುವುದು ಬೇಡ ಎಂದು ಈಶ್ವರಪ್ಪ ಅವರನ್ನು ಕೋರಲಾಯಿತು. ಅವರ ಕುಟುಂಬ ಸದಸ್ಯರೊಂದಿಗೂ ಈ ಬಗ್ಗೆ ಚರ್ಚಿಸಲಾಗಿದ್ದು, ಕಾದು ನೋಡಬೇಕಿದೆ’ ಎಂದರು.

‘ಈಶ್ವರಪ್ಪ ಅವರ ಜೊತೆಯಲ್ಲಿ ಆಡಿ ಬೆಳೆದಿದ್ದೇವೆ. ಪುತ್ರನಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ಅವರಿಗೆ ಅಘಾತವಾಗಿದೆ. ಯಾವುದೇ ಕಾರಣಕ್ಕೂ ಸಂಘಟನೆಯಿಂದ ವಿಮುಖವಾಗದಂತೆ ಮನವರಿಕೆ ಮಾಡಲಾಗಿದೆ’ ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.

ಬಿಜೆಪಿ ಕಟ್ಟುವಲ್ಲಿ ಈಶ್ವರಪ್ಪ ಕೊಡುಗೆ ಅಪಾರ. ಆದ್ದರಿಂದ, ಅವರ ಜೊತೆ ಚರ್ಚಿಸಿ ಮೋದಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆ ಹೆಚ್ಚಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದರು.

‍ಪಟ್ಟು ಬದಲಿಸದ ರೇಣುಕಾಚಾರ್ಯ

ದಾವಣಗೆರೆ: ‘ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಾಗ ಬೇಕು’ ಎಂದು ಪಟ್ಟು ಹಿಡಿದಿರುವ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಬಣ, ‘ಶಿವಮೊಗ್ಗದಲ್ಲಿ ಸೋಮವಾರ (ಮಾ.18) ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಬಿಜೆಪಿ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಳ್ಳುವು ದಿಲ್ಲ’ ಎಂದು ಸ್ಪಷ್ಟಪಡಿಸಿದೆ.

ಭಾನುವಾರ ಮತ್ತೊಂದು ಸುತ್ತಿನ ಸಭೆ ನಡೆಸಿದ ಬಳಿಕ ಮಾತನಾಡಿದ ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್, ‘ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂಬುದು ನಮ್ಮೆಲ್ಲರ ಬಯಕೆ. ಸಂಸದ ಜಿ.ಎಂ. ಸಿದ್ದೇಶ್ವರ ಅವರ ಕುಟುಂಬಕ್ಕೆ ಟಿಕೆಟ್ ಕೊಟ್ಟರೆ ಪಕ್ಷಕ್ಕೆ ಸೋಲಾಗಲಿದೆ. ಬೇರೆಯವರಿಗೆ ಟಿಕೆಟ್ ನೀಡಬೇಕು’ ಎಂದು ಒತ್ತಾಯಿಸಿದರು.

‘ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಕಾರಣ. ನಾವು ಅವರಿಗೆ ಬೆಂಬಲ ನೀಡುವುದಿಲ್ಲ. ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಮೂರು ದಿನಗಳ ಬಳಿಕ ಸಭೆ ಸೇರಿ ನಿರ್ಧರಿಸಲಾಗುವುದು’ ಎಂದು ಹೇಳಿದರು.

ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಎಂ.ಪಿ. ರೇಣುಕಾಚಾರ್ಯ, ಜಿ.ಕರುಣಾಕರ ರೆಡ್ಡಿ, ಬಿ.ಜಿ. ಅಜಯ್‌ಕುಮಾರ್, ಲೋಕಿಕೆರೆ ನಾಗರಾಜ್, ಮಾಡಾಳ್ ಮಲ್ಲಿಕಾರ್ಜುನ, ಮಾಜಿ ಶಾಸಕ ಬಸವರಾಜ ನಾಯ್ಕ, ಡಾ.ಟಿ.ಜಿ. ರವಿಕುಮಾರ್ ಸಭೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT