ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 30 ಕೋಟಿಗೂ ಹೆಚ್ಚು ಹಣ ಬಾಕಿ: ಬಿಲ್‌ಗಾಗಿ ಪಠ್ಯ ಪುಸ್ತಕ ಮುದ್ರಕರ ಪರದಾಟ

ದಂಡ ವಿಧಿಸದಂತೆ ಆಗ್ರಹ
Last Updated 3 ಡಿಸೆಂಬರ್ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು: ಪಠ್ಯ ಪುಸ್ತಕ ಮುದ್ರಕರಿಗೆ ₹30 ಕೋಟಿಗೂ ಅಧಿಕ ಬಿಲ್‌ ಪಾವತಿ ಮಾಡದೇ ಸತಾಯಿಸುತ್ತಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪಠ್ಯ ಪುಸ್ತಕ ಸೊಸೈಟಿಗೆ ನೋಟಿಸ್‌ ನೀಡಲು ಕರ್ನಾಟಕ ಪಠ್ಯ ಪುಸ್ತಕ ಮುದ್ರಕರ ಸಂಘ ತೀರ್ಮಾನಿಸಿದೆ.

2018–19 ನೇ ಸಾಲಿನಲ್ಲಿ ಪಠ್ಯ ಪುಸ್ತಕಗಳ ಸೊಸೈಟಿ ಮತ್ತು ಶಿಕ್ಷಣ ಇಲಾಖೆ, ಪಠ್ಯ ಪುಸ್ತಕಗಳ ಮುದ್ರಣಕ್ಕೆ ಒಟ್ಟು ನಾಲ್ಕು ಬಾರಿ ಕಾರ್ಯಾದೇಶಗಳನ್ನು ನೀಡಿದೆ. ಮೂಲ ಕಾರ್ಯಾದೇಶವಲ್ಲದೆ,ಟೆಂಡರ್‌ ನಿಯಮವನ್ನು ಉಲ್ಲಂಘಿಸಿ ಮೂರು ಬಾರಿ ಹೆಚ್ಚುವರಿ ಕಾರ್ಯಾದೇಶ ಹೊರಡಿಸಲಾಗಿದೆ ಎಂದು ಮುದ್ರಕರ ಸಂಘದ ಪ್ರತಿನಿಧಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೆಚ್ಚುವರಿ ಕಾರ್ಯಾದೇಶದ ಮೂಲಕ ಒಟ್ಟು 2 ಕೋಟಿ ಪಠ್ಯ ಪುಸ್ತಕಗಳ ಮುದ್ರಣಕ್ಕೆ ಆರ್ಡರ್‌ ನೀಡಲಾಗಿತ್ತು. ಪ್ರತಿ ವರ್ಷ 6 ಕೋಟಿ ಪಠ್ಯ ಪುಸ್ತಕಗಳಿಗೆ ಆದೇಶ ನೀಡಲಾಗುತ್ತದೆ. ಆದರೆ, ಈ ಸಾಲಿನ ಮೊದಲ ಕಾರ್ಯಾದೇಶದಲ್ಲಿ 4.84 ಕೋಟಿ ಪುಸ್ತಕಗಳ ಮುದ್ರಣಕ್ಕೆ 30 ಪ್ರಕಾಶಕರಿಗೆ ಆದೇಶ ನೀಡಲಾಗಿತ್ತು. ಉಳಿದ 2 ಕೋಟಿ ಪುಸ್ತಕಗಳ ಮುದ್ರಣಕ್ಕೆ ಮೂರು ಆದೇಶಗಳ ಮೂಲಕ ಸೂಚಿಸಲಾಗಿತ್ತು. ಈ ಯಡವಟ್ಟು ಇಲಾಖೆಯ ಉನ್ನತ ಅಧಿಕಾರಿಗಳಿಂದಲೇ ಆಗಿದೆ’ ಎಂಬುದು ಪ್ರಕಾಶಕರ ದೂರು.

‘ಪ್ರತಿ ಶೈಕ್ಷಣಿಕ ವರ್ಷದಲ್ಲಿ ಶೇ 10 ರಷ್ಟು ವ್ಯತ್ಯಾಸ ಇಟ್ಟುಕೊಂಡು ಪಠ್ಯ ಪುಸ್ತಕಗಳ ಮುದ್ರಣಕ್ಕೆ ಆದೇಶ ನೀಡಲಾಗುತ್ತದೆ. ಆದರೆ, ಈ ಬಾರಿ ಆ ರೀತಿ ಆಗಿಲ್ಲ. ಹೆಚ್ಚುವರಿ ಪುಸ್ತಕಗಳ ಮುದ್ರಣಕ್ಕೆ ನಮ್ಮ ಕೈಯಿಂದ ಹಣ ಹಾಕಿ ಮುದ್ರಣ ಮಾಡಿದ್ದರೂ ₹20 ಕೋಟಿಯಷ್ಟು ಬಿಲ್‌ ಪಾವತಿ ಮಾಡಿಲ್ಲ. ಮುದ್ರಣ ತಡವಾಗಿದೆ ಎಂಬ ಕಾರಣ ನೀಡಿ ದಂಡ ವಿಧಿಸಲಾಗುತ್ತಿದೆ. ಪ್ರತಿಯೊಬ್ಬ ಪ್ರಕಾಶಕನಿಗೂ ತಲಾ ₹20 ಲಕ್ಷದಷ್ಟು ದಂಡ ವಿಧಿಸಲಾಗುತ್ತಿದೆ. ಇದು ಅನ್ಯಾಯದ ಕ್ರಮ’ ಎಂದು ಮುದ್ರಕರ ಸಂಘದ ಪ್ರತಿಪಾದನೆ.

ಈ ಸಾಲಿನ ಮೊದಲ ಮುದ್ರಣದ ಬಿಲ್‌ ₹154 ಕೋಟಿ ಆಗಿದ್ದು, ಅದರಲ್ಲಿ ಸಾಕಷ್ಟು ಮುದ್ರಕರಿಗೆ ಬಿಲ್‌ ಪಾವತಿ ಆಗಿಲ್ಲ. ಒತ್ತಡ ಹೇರಿದವರು ಮತ್ತು ಗಲಾಟೆ ಮಾಡಿದವರಿಗಷ್ಟೇ ಹಣ ಪಾವತಿ ಮಾಡಲಾಗಿದೆ ಎಂದು ಸಂಘ ಹೇಳಿದೆ.

‘ಹೆಚ್ಚುವರಿ ಪುಸ್ತಕ ಪ್ರಕಟಣೆಗೆ ಮೂರು ಬಾರಿ ಕಾರ್ಯಾದೇಶ ನೀಡಿದಾಗಲೂ ಹದಿನೈದು ದಿನಗಳಲ್ಲಿ ಮುದ್ರಿಸಿಕೊಡಬೇಕು ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌ ತಿಳಿಸಿದ್ದರು. ಮುದ್ರಣ ಕಾಗದ ಇಲ್ಲದೆ ಅವರು ನೀಡಿದ ಗಡುವಿನೊಳಗೆ ಮುದ್ರಿಸುವುದಾದರೂ ಹೇಗೆ?. ಹೀಗಾಗಿ ಮುದ್ರಣಕ್ಕೆ 30 ರಿಂದ 40 ದಿನಗಳು ಬೇಕಾಯಿತು. ಈ ಕಾರಣಕ್ಕೆ ದಂಡ ವಿಧಿಸಲಾಗುತ್ತಿದೆ. ಇದರಲ್ಲಿ ನಮ್ಮ ತಪ್ಪೇನಿದೆ’ ಎಂಬುದು ಅವರ ಪ್ರಶ್ನೆ.

‘ಟೆಂಡರ್‌ ನಿಯಮಗಳ ಪ್ರಕಾರ ನಾವು ಸಲ್ಲಿಸುವ ಎಲ್‌1 ದರಗಳು ಬಿಡ್‌ ಸಲ್ಲಿಕೆಯ ಅಂತಿಮ ದಿನಾಂಕದಿಂದ 90 ದಿನಗಳವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ. ಆದರೆ, ಹೆಚ್ಚುವರಿ ಕಾರ್ಯಾದೇಶಗಳು ಈ ದರಗಳ ಸಿಂಧುತ್ವ ಮುಗಿದ ಬಳಿಕ ಅಂದರೆ 3 –4 ತಿಂಗಳ ಬಳಿಕ ನೀಡಲಾಗಿತ್ತು. ಈ ಸಂದರ್ಭದಲ್ಲಿ ಮಕ್ಕಳ ಹಿತದೃಷ್ಟಿಯಿಂದ ಮುದ್ರಣ ಕಾಗದದ ಬೆಲೆ ಏರಿಕೆಯಾಗಿದ್ದರೂ ಹೆಚ್ಚುವರಿ ಹಣ ಭರಿಸಿ ಮುದ್ರಿಸಿದ್ದೆವು. ಆದರೆ, ವಿಳಂಬದ ಕಾರಣ ನೀಡಿ ದಂಡ ವಿಧಿಸಲು ಮುಂದಾಗಿರುವುದು ಟೆಂಡರ್‌ ನಿಯಮದ ಉಲ್ಲಂಘನೆಯಾಗಿದೆ’ ಎಂದು ಸಂಘ ದೂರಿದೆ.

ಹಣದ ಕೊರತೆ ಇಲ್ಲ: ಆಯುಕ್ತ

‘ಪಠ್ಯ ಪುಸ್ತಕಗಳ ಮುದ್ರಕರಿಗೆ ಹಣ ಬಿಡುಗಡೆ ಮಾಡಲು ಅನುದಾನದ ಕೊರತೆ ಇಲ್ಲ. ದಂಡ ಪಾವತಿಯ ವಿಚಾರ ಇರುವುದರಿಂದ ಬಿಲ್‌ ಪಾವತಿ ಆಗಿಲ್ಲ. ಈ ಬಗ್ಗೆ ಪಠ್ಯ ಪುಸ್ತಕ ಸೊಸೈಟಿಯಿಂದ ಮಾಹಿತಿ ಪಡೆಯುತ್ತೇನೆ. ದಂಡ ಪಾವತಿಯ ಬಗ್ಗೆ ಟೆಂಡರ್‌ ನಿಯಮವನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇನೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಪಿ.ಸಿ.ಜಾಫರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT