ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಬವಣೆಯಲ್ಲಿ ಸರ್ಕಾರದ ಸಂಭ್ರಮ: ಸಿ.ಟಿ.ರವಿ ಟೀಕೆ

Published 29 ಆಗಸ್ಟ್ 2023, 13:21 IST
Last Updated 29 ಆಗಸ್ಟ್ 2023, 13:21 IST
ಅಕ್ಷರ ಗಾತ್ರ

ಮೈಸೂರು: ‘ಬರಗಾಲದ ಬವಣೆಯಲ್ಲಿ ರಾಜ್ಯದ ಅನ್ನದಾತರು ಬೇಯುತ್ತಿರುವಾಗ ಕಾಂಗ್ರೆಸ್‌ ಸರ್ಕಾರವು ಸಂಭ್ರಮದಲ್ಲಿ ತೇಲುತ್ತಿದೆ’ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಟೀಕಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ‘ಹಳಿ ತಪ್ಪಿದ ಆಡಳಿತ’ ಕೃತಿ ಬಿಡುಗಡೆ ಮಾಡಿ ಮಾತನಾಡಿ, ‘ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ತೀರ್ಮಾನಕ್ಕೂ ಮುನ್ನವೇ ತಮಿಳುನಾಡಿಗೆ ನೀರು ಹರಿಸಿ ರೈತರಿಗೆ ದ್ರೋಹ ಮಾಡಿದೆ’ ಎಂದು ಕಿಡಿಕಾರಿದರು.

‘ಇಂಡಿಯಾ’ ಮೈತ್ರಿಕೂಟಕ್ಕೆ ಒಡಕು ತಪ್ಪಿಸಲು ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರನ್ನು ಮೆಚ್ಚಿಸಲು ನೀರು ಹರಿಸಿ ರೈತರನ್ನು ಬಲಿಕೊಡಲಾಗಿದೆ. ಚಿತ್ರದುರ್ಗ, ಕೋಲಾರದಲ್ಲಿ ಕಲುಷಿತ ನೀರು ಕುಡಿದು ಜನರು ಮೃತಪಟ್ಟಿದ್ದಾರೆ. ವೈಫಲ್ಯ ಮರೆಮಾಚಲು ಹಿಂದಿನ ವಿವಾದಗಳನ್ನು ಕೆದಕುತ್ತಿದ್ದಾರೆ’ ಎಂದರು.

‘ಬಿಜೆಪಿಯ ಜನಪರ ಯೋಜನೆಗಳನ್ನು ರದ್ದು ಮಾಡಲಾಗಿದೆ. ಶಕ್ತಿ ಯೋಜನೆ ಮೂಲಕ ಬಸ್‌‍ ದರ ಏರಿಸಿ ಪುರುಷರಿಗೆ ಬರೆ ಹಾಕಿದೆ. ಗೃಹಜ್ಯೋತಿ ಯೋಜನೆಯಡಿ ದುಪ್ಪಟ್ಟು ವಿದ್ಯುತ್ ಬಿಲ್‌ ಬಂದಿದೆ. ಮಳೆಗಾಲದಲ್ಲಿಯೇ ಅನಿಯಮಿತ ವಿದ್ಯುತ್‌ ವ್ಯತ್ಯಯ ಸಾಮಾನ್ಯವಾಗಿದೆ’ ಎಂದು ಆರೋಪಿಸಿದರು.

‘ಮದ್ಯದ ದರ ಏರಿಸಿ ಗೃಹಲಕ್ಷ್ಮಿ ಗ್ಯಾರಂಟಿಗೆ ಹಣ ಹೊಂದಿಸಲಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಸಂಬಳ, ನಿವೃತ್ತರಿಗೆ ವೇತನ, ಗ್ಯಾರಂಟಿ ಯೋಜನೆಗೆ ತಿಂಗಳಿಗೆ ₹ 14,500 ಕೋಟಿ ಬೇಕು. ಸರ್ಕಾರದ ಆದಾಯವೇ ₹ 12 ಸಾವಿರ ಕೋಟಿ ಆಗಿರುವಾಗ ಉಳಿಕೆ ಹಣಕ್ಕೆ ಹೊಂದಿಸಲು ಸಾಲ ಮಾಡಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಲ ಮಾಡಿ ತುಪ್ಪ ತಿನ್ನು ಎನ್ನುವ ಆಧುನಿಕ ಚಾರ್ವಾಕ’ ಎಂದು ವ್ಯಂಗ್ಯವಾಡಿದರು.

‘ಪರಿಶಿಷ್ಟರ ಹಣದ ದುರ್ಬಳಕೆ ಮಾಡಲಾಗಿದೆ. ಫ್ಯಾಕ್ಟ್‌ಚೆಕ್‌ ಹೆಸರಿನಲ್ಲಿ ಜನರ ಅಭಿವ್ಯಕ್ತಿ ದಮನಿಸಲು ಸುಳ್ಳು ಪ್ರಕರಣ ದಾಖಲಿಸಲಾಗುತ್ತಿದೆ. ಬೆಲೆ ಏರಿಕೆಗೆ ಸಂಭ್ರಮಿಸಲು ರಾಹುಲ್‌ ಗಾಂಧಿ ಕರೆಸಿರುವುದಷ್ಟೇ ಸಾಧನೆಯಾಗಿದೆ’ ಎಂದು ಟೀಕಿಸಿದರು.

‘ದನವಾದರೆ ಕಟ್ಟಿಹಾಕಬಹುದು’

‘ದನವಾದರೆ ಕಟ್ಟಿಹಾಕಬಹುದು. ಪಕ್ಷದಿಂದ ಹೋಗುವವರನ್ನು ತಡೆಯಲಾಗುವುದೇ’ ಎಂದು ಸಿ.ಟಿ.ರವಿ ಪ್ರಶ್ನಿಸಿದರು.

‘ಕಾಂಗ್ರೆಸ್‌ ಶಾಸಕರಲ್ಲೇ ಅಸಮಾಧಾನವಿದೆ. ಅಲ್ಲಿರುವವರ ಭಾರ ತಡೆದುಕೊಳ್ಳುವುದೇ ಕಷ್ಟ. ಹೋದವರ ಭಾರವನ್ನು ತಡೆಯುವರೇ? ಬಿಜೆಪಿ 66 ಶಾಸಕರು ಪಕ್ಷ ನಿಷ್ಠರು. ಸಮೃದ್ಧಿಯ ಕಾಲದಲ್ಲಿ ಮಾತ್ರವಲ್ಲ, ಕಷ್ಟ ಬಂದಾಗ ಎಲ್ಲರ ನಿಷ್ಠೆಯೂ ಗೊತ್ತಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT