ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಗನಕ್ಕೇ‌ರುತ್ತಿರುವ ಬೆಲೆ, ಕಳ್ಳರ ಕಾಟ: ಜಮೀನಿನಲ್ಲಿ ಟೊಮೆಟೊಗೆ ರೈತರ ಕಾವಲು

Published 6 ಜುಲೈ 2023, 23:30 IST
Last Updated 6 ಜುಲೈ 2023, 23:30 IST
ಅಕ್ಷರ ಗಾತ್ರ

ಹಳೇಬೀಡು: ತಾಲ್ಲೂಕಿನ ಗಣಿಸೋಮನಹಳ್ಳಿಯಲ್ಲಿ ಟೊಮೆಟೊ ಕಳವು ಪ್ರಕರಣ ನಡೆದ ಬಳಿಕ ಬೆಳೆಗಾರರು ರಾತ್ರಿ ವೇಳೆ ಚಳಿ, ಮಳೆ, ಗಾಳಿ, ಸೊಳ್ಳೆಕಾಟದ ನಡುವೆ ನಿದ್ದೆಗಟ್ಟು ಬೆಳೆಯ ಕಾವಲಿಗೆ ನಿಂತಿದ್ದಾರೆ. ತುಂತುರು ಮಳೆ ಬೀಳುತ್ತಿರುವುದರಿಂದ ಬೆಳೆ ಕೊಳೆಯುವ ಆತಂಕವೂ ಮೂಡಿದೆ. ‘ಎಡೆಬಿಡದೇ ಹೊಲದಲ್ಲಿದ್ದರೆ ಮಾತ್ರ ಬೆಳೆ ಉಳಿಸಿಕೊಳ್ಳಲು ಸಾಧ್ಯ’ ಎಂಬ ಮಾತು ರೈತರಿಂದ ಕೇಳಿ ಬರುತ್ತಿದೆ.

‘ಗುಡ್ಡದ ಬಳಿಯ ಜಮೀನುಗಳಲ್ಲಿ ಚಿರತೆ ಮೊದಲಾದ ವನ್ಯಜೀವಿಗಳು ಆಗಾಗ್ಗೆ ಕಾಣಿಸುತ್ತವೆ. ಇಂಥ ಅಪಾಯಕಾರಿ ಪರಿಸ್ಥಿತಿಯಲ್ಲಿಯೂ ಬೆಳೆಯನ್ನು ಕಾಯಬೇಕಾಗಿದೆ’ ಎಂದು ಬೆಳೆಗಾರ ಬಸ್ತಿಹಳ್ಳಿ ಗಣೇಶ್ ಅಳಲು ತೋಡಿಕೊಂಡರು.

‘ಹಗಲೆಲ್ಲ ಹೊಲದಲ್ಲಿ ಕೆಲಸ ಮಾಡಿ ದಣಿವಾಗಿರುತ್ತದೆ. ರಾತ್ರಿ ವಿಶ್ರಾಂತಿ ಪಡೆಯುವುದಕ್ಕೂ ಅವಕಾಶವಿಲ್ಲ. ಕಳೆದ ವರ್ಷ ಟೊಮೆಟೊ ಕೇಳುವವರಿಲ್ಲದೆ ನಷ್ಟವಾಗಿತ್ತು. ಈ ವರ್ಷ ನಮ್ಮ ಆದಾಯವನ್ನು ಕಳ್ಳರು ಕಸಿದುಕೊಳ್ಳುತ್ತಾರೆಂದು ಭಯವಾಗಿದೆ’ ಎಂದರು.

ಗಣಿ ಸೋಮನಹಳ್ಳಿಯ ಗಡಿಯಲ್ಲಿರುವ ಕುಮಾರ್ ಅವರ ಜಮೀನಿನಲ್ಲಿ ಕಳ್ಳರು ಮಂಗಳವಾರ ರಾತ್ರಿ ಎರಡು ಕ್ರೇಟ್‌ನಷ್ಟು ಟೊಮೆಟೊ ಕೊಯ್ಲು ಮಾಡಿದ್ದರು. ಅದೇ ಸಮಯಕ್ಕೆ ಕುಮಾರ್ ‌ಬಂದಿದ್ದರಿಂದ ಟೊಮೆಟೊ ಬಿಟ್ಟು ಓಡಿಹೋದ ಘಟನೆಯೂ ನಡೆದಿದೆ. ದೂರು ದಾಖಲಾಗಿಲ್ಲ.

25 ಕೆ.ಜಿ.ಗೆ ₹2100

25 ಕೆಜಿ. ತೂಕದ ಒಂದು ಕ್ರೇಟ್ ಟೊಮೆಟೊ ₹2050ರಿಂದ ₹2100ರಂತೆ ಹೊಲದಲ್ಲಿಯೇ ಮಾರಾಟವಾಗುತ್ತಿದೆ. ಮಾರುಕಟ್ಟೆಯಲ್ಲಿ ₹2300ಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. 15 ಕೆ.ಜಿ. ತೂಕದ ಒಂದು ಚೀಲ ₹900ರಿಂದ ₹1300ರವರೆಗೆ ಹಳೇಬೀಡಿನಲ್ಲಿ ಮಾರಾಟವಾಗುತ್ತಿದೆ. ಗ್ರಾಹಕರಿಗೆ ಕಡಿಮೆ ಗುಣಮಟ್ಟದ ಟೊಮೆಟೊ ಸಹ ₹100ಕ್ಕಿಂತ ಕಡಿಮೆ ಬೆಲೆಗೆ ದೊರಕುತ್ತಿಲ್ಲ. ‘ಈಗ ಮೂರು ದಿನದಿಂದ ಮಾತ್ರ ತಂಪಾದ ವಾತಾವರಣ ಇದೆ. ಇದಕ್ಕೂ ಮೊದಲು ಹಲವು ದಿನದಿಂದಲೂ ಉಷ್ಣಾಂಶ ಹೆಚ್ಚಾಗಿದ್ದರಿಂದ ಟೊಮೆಟೊ ಫಸಲು ಕಡಿಮೆಯಾಗಿದೆ. ಅಧಿಕ ಉಷ್ಣಾಂಶದಿಂದ ಬೆಳೆಯ ಬೆಳವಣಿಗೆ ಕುಂಠಿತವಾಗಿದೆ. ಸಕಾಲಕ್ಕೆ ಮಳೆ ಬೀಳದೇ ಅಂತರ್ಜಲ ಕಡಿಮೆ ಆಗಿರುವುದರಿಂದ ಎಲ್ಲ ಬೆಳೆಗಾರರು ಟೊಮೆಟೊ ಬೆಳೆಯಲು ಸಾಧ್ಯವಾಗಿಲ್ಲ. ಹೀಗಾಗಿ ಬೆಲೆ ಏರಿಕೆಯಾಗಿದೆ. ಬೇಡಿಕೆಗೆ ಅನುಗುಣವಾಗಿ ಟೊಮೆಟೊ ಫಸಲು ಬಂದಿಲ್ಲ. ಕೆಲವೇ ರೈತರು ಆದಾಯ ಕಾಣುತ್ತಿದ್ದಾರೆ. ಎಲ್ಲ ಬೆಳೆಗಾರರಿಗೂ ಏರಿದ ಬೆಲೆಯ ಉಪಯೋಗ ಆಗುತ್ತಿಲ್ಲ’ ಎಂದು ರೈತ ಮುಖಂಡ ಎಲ್.ಈ. ಶಿವಪ್ಪ ತಿಳಿಸಿದರು.

ಟೊಮೆಟೊ ಕೊಳೆಯುವ ಸಾಧ್ಯತೆ

ಎರಡು ದಿನದಿಂದ ಬೀಳುತ್ತಿರುವ ತುಂತುರು ಮಳೆಯಿಂದ ಚಿನ್ನದ ಬೆಲೆ ಬಂದಿರುವ ಟೊಮೆಟೊಗೆ ಹಾನಿಯಾಗುವ ಸಾಧ್ಯತೆ ಇದೆ. ಎಡಬಿಡದೆ ಮಳೆ ಸುರಿಯುತ್ತಿರುವುದರಿಂದ ಟೊಮೆಟೊ ಸತತವಾಗಿ ಮಳೆ ನೀರಿನಲ್ಲಿ ನೆನೆದರೆ ಕೊಳೆತು ಹೋಗುತ್ತದೆ. ‘ಮಳೆ ಹೆಚ್ಚಾದರೆ ಬೆಲೆ ಮತ್ತಷ್ಟು ಏರಿಕೆಯಾಗಬಹುದು. ಆದರೆ ಫಸಲು ಕೈಗೆ ಸಿಗದಿದ್ದರೆ ಬೆಲೆ ಇದ್ದರೂ ರೈತರ ನಷ್ಟ ಅನುಭವಿಸುವಂತಾಗುತ್ತದೆ. ಈಗ ಮಳೆಯಿಂದ ಫಸಲು ನಾಶವಾಗುವ ಸಾಧ್ಯತೆ ಇದೆ. ಮೋಡದ ವಾತಾವರಣದಿಂದ ಟೊಮೆಟೊ ಹೂವಾಗಿ ಕಾಯಿ ಕಟ್ಟುವುದಕ್ಕೂ ತೊಂದರೆಯಾಗುತ್ತದೆ. ಗಿಡದ ಕುಡಿ ಮುದುರಿ ಬೆಳೆಯ ಬೆಳವಣಿಗೆ ಕುಂಠಿತವಾಗುತ್ತದೆ. ರೋಗ ಬಾಧೆ ಸಾಧ್ಯತೆ ಹೆಚ್ಚಿದೆ’ ಎಂದು ರೈತ ಬಸ್ತಿಹಳ್ಳಿ ಚೇತನ್ ಸಮಸ್ಯೆ ಬಿಚ್ಚಿಟ್ಟರು.

ಪೂರೈಕೆ ವೇಳೆ ಬಾಕ್ಸ್‌ಗಳಿಗೆ ಕನ್ನ

ಚಿಂತಾಮಣಿ: ಟೊಮೆಟೊ ಬೆಲೆ ಹೆಚ್ಚಳದಿಂದ ರೈತರು ಹಗಲು ಮತ್ತು ರಾತ್ರಿ ಟೊಮೊಟೊ ತೋಟ ಕಾವಲು ಕಾಯುತ್ತಿದ್ದಾರೆ.

ಕೊಯ್ಲು ಮಾಡಿ ವಾಹನಗಳಿಗೆ ತುಂಬಿ ಮಾರುಕಟ್ಟೆಗೆ ಸಾಗಿಸುವವರೆಗೂ ಜತೆಯಲ್ಲೇ ಇರಬೇಕಾಗಿದೆ. ಇತ್ತೀಚಿನವರೆಗೂ ಹಣ್ಣು ಕಟಾವು ಮಾಡಿ ಬಾಕ್ಸ್‌ಗಳನ್ನು ವಾಹನಕ್ಕೆ ತುಂಬಿದರೆ, ವಾಹನದ ಸಿಬ್ಬಂದಿಯೇ ಮಾರುಕಟ್ಟೆಯಲ್ಲಿ ಇಳಿಸುತ್ತಿದ್ದರು. ರೈತರು ಹರಾಜಿನ ಸಮಯಕ್ಕೆ ಹೋಗುತ್ತಿದ್ದರು. ಆದರೆ, ಈಗ ವಾಹನದ ಜತೆಯಲ್ಲಿಯೇ ರೈತರು ಮಾರುಕಟ್ಟೆಗೆ ಹೋಗುತ್ತಿದ್ದಾರೆ.

ಎಪಿಎಂಸಿಯಲ್ಲಿ ಯಾಮಾರಿದರೆ ಕಳ್ಳತನ ಆಗುತ್ತದೆ. ರೈತರು ತಿಂಡಿ, ಕಾಫಿಗೂ ಹೋಗದೆ ಹದ್ದಿನ ಕಣ್ಣಿನಿಂದ ಟೊಮೆಟೊ ಕಾಪಾಡಬೇಕಿದೆ. ಕಳ್ಳತನಕ್ಕಾಗಿಯೇ ಕೆಲವರು ಕಾದಿರುತ್ತಾರೆ. ರೈತರು ತಲಾ 15 ಕೆ.ಜಿಯ 100 ಬಾಕ್ಸ್ ಟೊಮೆಟೊ ಕಳುಹಿಸಿದ್ದರೆ ಸಾಗಾಣಿಕೆ ಮಾಡುವವರು ಈ ಬಾಕ್ಸ್‌ಗಳಿಂದ ಹಣ್ಣನ್ನು ತೆಗೆದು ‌110 ಬಾಕ್ಸ್ ಮಾಡಿರುತ್ತಾರೆ. ಅವುಗಳಲ್ಲಿ10 ಬಾಕ್ಸ್ ಕದಿಯುತ್ತಾರೆ ಎಂದು ವ್ಯಾಪಾರಿಗಳು ಆರೋಪಿಸುತ್ತಾರೆ. 

ಹಳೇಬೀಡು ಹೊರವಲಯದಲ್ಲಿ ಮಳೆಯಲ್ಲೇ ಕೃಷಿ ಕಾರ್ಮಿಕರು ಟೊಮೆಟೊ ಬೆಳೆಗೆ ಕಾವಲು ನಿಂತಿದ್ದರು‌
ಹಳೇಬೀಡು ಹೊರವಲಯದಲ್ಲಿ ಮಳೆಯಲ್ಲೇ ಕೃಷಿ ಕಾರ್ಮಿಕರು ಟೊಮೆಟೊ ಬೆಳೆಗೆ ಕಾವಲು ನಿಂತಿದ್ದರು‌
ಹಗಲೆಲ್ಲ ಕೆಲಸ ಮಾಡಿ ರಾತ್ರಿ ಟೊಮೆಟೊ ಹೊಲ ಕಾಯುವ ಕೆಲಸ ಪ್ರಯಾಸದಾಯಕ. ರೈತ ಕುಟುಂಬದವರು ಸರದಿಯಲ್ಲಿ ಎಡೆಬಿಡದೆ ಹೊಲ ಕಾಯ್ದರೆ ಮಾತ್ರ ಫಸಲು ಉಳಿಸಿಕೊಳ್ಳಬಹುದು
-ಗಣೇಶ ರೈತ ಬಸ್ತಿಹಳ್ಳಿ
ಕಳೆದ ವರ್ಷ ಅತಿವೃಷ್ಟಿ ಹಾಗೂ ಬೆಲೆ ಕುಸಿತದಿಂದ ಟೊಮೆಟೊ ಬೆಳೆಗಾರರು ತತ್ತರಿಸಿದ್ದರು. ಈ ವರ್ಷ ಕೆಲವೇ ಜಮೀನಿನಲ್ಲಿ ಟೊಮೆಟೊ ಇದೆ. ಈಗಿನ ಚಿನ್ನದ ದರ ಎಲ್ಲರಿಗೂ ದೊರಕುತ್ತಿಲ್ಲ
ಎಲ್.ಈ.ಶಿವಪ್ಪ ರೈತ ಸಂಘ ಮುಖಂಡ ಲಿಂಗಪ್ಪನಕೊಪ್ಪಲು
ಕೊಯ್ಲು ಮಾಡಿದ ಟೊಮೆಟೊವನ್ನು ತಕ್ಷಣ ಮಾರುಕಟ್ಟೆಗೆ ಸಾಗಿಸಬೇಕು. ಹೊಲದಲ್ಲಿಯೇ ಬಿಟ್ಟರೆ ಕಳ್ಳರ ಪಾಲಾಗುತ್ತದೆ. ನೆಮ್ಮದಿ ಇಲ್ಲದೇ ಹೊಲ ಕಾಯುವುದು ಕೆಲಸಕ್ಕಿಂತ ಕಷ್ಟ
ಹರೀಶ್ ಮುಖಂಡ ಗೋಣಿಸೋಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT