ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ ಶೇ 2.7: ಕರ್ನಾಟಕ ಉದ್ಯೋಗ ವರದಿ ಬಿಡುಗಡೆ

5 ವರ್ಷದಲ್ಲಿ 67 ಲಕ್ಷ ಉದ್ಯೋಗ ಸೃಷ್ಟಿ : ಕರ್ನಾಟಕ ಉದ್ಯೋಗ ವರದಿ ಬಿಡುಗಡೆ
Published 26 ಏಪ್ರಿಲ್ 2023, 19:40 IST
Last Updated 26 ಏಪ್ರಿಲ್ 2023, 19:40 IST
ಅಕ್ಷರ ಗಾತ್ರ

ಬೆಂಗಳೂರು:‌ ರಾಜ್ಯದಲ್ಲಿ 5 ವರ್ಷಗಳಲ್ಲಿ 67.9 ಲಕ್ಷ ಉದ್ಯೋಗ ಸಂಘಟಿತ ವಲಯದಲ್ಲಿ ಸೃಷ್ಟಿಯಾಗಿದೆ. ಇಷ್ಟಾಗಿಯೂ ಅಸಂಘಟಿತ ವಲಯದ ಉದ್ಯೋಗಿಗಳನ್ನು ಸಂಘಟಿತ ವಲಯದಡಿಗೆ ತರಲು ಮಾಸಿಕ ಪ್ರೋತ್ಸಾಹಧನದಂತಹ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕು ಎಂದು ‘ಕರ್ನಾಟಕ ಉದ್ಯೋಗ ವರದಿ 2022–23’ರಲ್ಲಿ ಶಿಫಾರಸು ಮಾಡಲಾಗಿದೆ. 

ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಎಫ್‌ಐಸಿಸಿಐ) ಹಾಗೂ ಕ್ವೆಸ್ ಸಂಸ್ಥೆ ಜಂಟಿಯಾಗಿ ಹೊರತಂದ ವರದಿಯನ್ನು ಬುಧವಾರ ಬಿಡುಗಡೆ ಮಾಡಲಾಯಿತು. ಸಂಸ್ಥೆಯ ಹಿರಿಯ ಸಂಶೋಧನಾ ವಿಶ್ಲೇಷಕಿ ಅಕ್ಷತಾ ಎಂ.ವರದಿ ಮಂಡಿಸಿದರು. 

‘ರಾಜ್ಯದ 2.9 ಕೋಟಿ ಉದ್ಯೋಗಿಗಳಲ್ಲಿ ಶೇ 24.7ರಷ್ಟು (73.8 ಲಕ್ಷ) ಜನರು ಸಂಘಟಿತ ವಲಯದಲ್ಲಿದ್ದಾರೆ. ಈ ಪ್ರಮಾಣ ದೇಶದ ಸರಾಸರಿಗಿಂತ (ಶೇ 20) ಹೆಚ್ಚಿದೆ. ರಾಜ್ಯದಲ್ಲಿ ಪ್ರತಿವರ್ಷ 13.5 ಲಕ್ಷ ಜನರು ಇ‍‍‍‍ಪಿಎಫ್‌ಒ, ಇಎಸ್‌ಐಸಿ ಅಡಿ ನೋಂದಾಯಿಸಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ನಿರುದ್ಯೋಗದ ಪ್ರಮಾಣ ಶೇ 2.7ರಷ್ಟಿದ್ದು, ದೇಶದ ಸರಾಸರಿಗಿಂತ (ಶೇ 4.2) ಕಡಿಮೆಯಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

‘ನೌಕರರ ಭವಿಷ್ಯನಿಧಿ ಸಂಘಟನೆ (ಇ‍‍‍‍ಪಿಎಫ್‌ಒ) ಹಾಗೂ ನೌಕರರ ರಾಜ್ಯ ವಿಮಾ ನಿಗಮದ (ಇಎಸ್‌ಐಸಿ) ನೋಂದಣಿ ಪ್ರಕಾರ ಸಂಘಟಿತ ವಲಯದ ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕ ದ್ವಿತೀಯ ಸ್ಥಾನದಲ್ಲಿದೆ. ಮಹಾರಾಷ್ಟ್ರವು ಮೊದಲ ಸ್ಥಾನದಲ್ಲಿದ್ದು, 5 ವರ್ಷಗಳಲ್ಲಿ 1.2 ಕೋಟಿ ಉದ್ಯೋಗ ಸೃಷ್ಟಿಯಾಗಿದೆ. ರಾಜ್ಯದಲ್ಲಿ ಜನಸಂಖ್ಯೆಯ ಶೇ 45ರಷ್ಟು (2.9 ಕೋಟಿ) ಜನರು ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿದ್ದಾರೆ. 1.3 ಕೋಟಿ ಜನರು ಕೃಷಿ ಕ್ಷೇತ್ರದಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ. ಉಳಿದವರು ಬೇರೆ ಕ್ಷೇತ್ರಗಳಲ್ಲಿ ಇದ್ದಾರೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಶೇ 50ರಷ್ಟು ಹೆಚ್ಚಳ ಸವಾಲು: ‘ಅಸಂಘಟಿತ ವಲಯದ ಉದ್ಯೋಗಿಗಳನ್ನು ಸಂಘಟಿತ ವಲಯದಡಿ ತರುವುದು ಸವಾಲಾಗಿದೆ. ಶೇ 24.7ರಷ್ಟಿರುವ ಸಂಘಟಿತ ವಲಯ ಉದ್ಯೋಗಸ್ಥರ ಪ್ರಮಾಣವನ್ನು 2030ರ ವೇಳೆಗೆ ಶೇ 50ಕ್ಕೆ ಹೆಚ್ಚಿಸುವುದು ಕಷ್ಟ. ಆದ್ದರಿಂದ ಕೌಶಲ ವೃದ್ಧಿಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು’ ಎಂದು ವರದಿಯಲ್ಲಿ ಸಲಹೆ ಮಾಡಲಾಗಿದೆ. 

‘ಸಂಘಟಿತ ವಲಯದಲ್ಲಿ ಉದ್ಯೋಗ ಸೃಷ್ಟಿ ವೇಗವಾಗಿ ನಡೆಯುತ್ತಿದೆ. ಆದರೂ ಸಂಘಟಿತ ವಲಯದಲ್ಲಿ ಉದ್ಯೋಗ ಸೃಷ್ಟಿಯ ಬಗ್ಗೆ ಜಿಲ್ಲಾವಾರು ವಿಶ್ಲೇಷಣೆ ಆಗಬೇಕಿದೆ. ಸಂಘಟಿತ ಉದ್ಯೋಗಿಗಳ ಪ್ರಮಾಣ ಹೆಚ್ಚಳ ಮಾಡಲು ಪ್ರತ್ಯೇಕ ನೀತಿ ಜಾರಿಗೊಳಿಸಬೇಕಾದ ಅಗತ್ಯವಿದೆ. ‘ಪ್ರಧಾನಮಂತ್ರಿ ರೋಜಗಾರ್’ ಅಂತಹ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿ, ಅನುಷ್ಠಾನಗೊಳಿಸಬೇಕು’ ಎಂದು ಹೇಳಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT