ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃದ್ಧ ತಾಯಿಯೊಬ್ಬರ ಜೀವನ ನಿರ್ವಹಣೆಗೆ: ವಾರ್ಷಿಕ ₹ 14 ಲಕ್ಷ ಪಾವತಿಸಲು ಆದೇಶ

Published 29 ಜನವರಿ 2024, 16:31 IST
Last Updated 29 ಜನವರಿ 2024, 16:31 IST
ಅಕ್ಷರ ಗಾತ್ರ

ಬೆಂಗಳೂರು: ‘ವೃದ್ಧ ತಾಯಿಯೊಬ್ಬರ ಜೀವನ ನಿರ್ವಹಣೆಗೆ ವಾರ್ಷಿಕ ತಲಾ ₹7 ಲಕ್ಷ ಪಾವತಿಸಿ’ ಎಂದು ಆಕೆಯ ಪುತ್ರ ಮತ್ತು ಮೊಮ್ಮಗಳಿಗೆ ಹೈಕೋರ್ಟ್ ನಿರ್ದೇಶಿಸಿದೆ.

ಈ ಕುರಿತಂತೆ ಅಪ್ಪರಂಡ ಶಾಂತಿ ಬೋಪಣ್ಣ (85) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ.

ಪ್ರಕರಣವೇನು?: ಅರ್ಜಿದಾರರಾದ ಅಪ್ಪರಂಡ ಶಾಂತಿ ಬೋಪಣ್ಣ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನಲ್ಲಿ ತಾವು ಹೊಂದಿದ್ದ 22 ಎಕರೆ ಕಾಫಿ ಎಸ್ಟೇಟ್‌ ಅನ್ನು ತಮ್ಮ ಪುತ್ರ ಹಾಗೂ ಮೊಮ್ಮಗಳಿಗೆ 2016ರಲ್ಲಿ ಉಡುಗೊರೆಯಾಗಿ (ಗಿಫ್ಟ್‌ ಡೀಡ್‌) ನೀಡಿದ್ದರು. ಈ ವೇಳೆ ಅಪ್ಪರಂಡ ಶಾಂತಿ ಅವರ ಬೋಪಣ್ಣ ಜೀವನ ನಿರ್ವಹಣೆಗಾಗಿ ವಾರ್ಷಿಕ ತಲಾ ₹ 7 ಲಕ್ಷವನ್ನು ಬ್ಯಾಂಕಿನಲ್ಲಿ ಠೇವಣಿ ಇರಿಸುವುದಾಗಿ ಪುತ್ರ ಹಾಗೂ ಮೊಮ್ಮಗಳು ಭರವಸೆ ನೀಡಿದ್ದರು. ಅಂತೆಯೇ, 2016ರಿಂದ 2019ರವರೆಗೆ ಹಣ ಪಾವತಿಸಿದ್ದರು. ತದನಂತರ ಹಣ ನೀಡಿರಲಿಲ್ಲ.

ಏತನ್ಮಧ್ಯೆ, ಮಗ ಮತ್ತು ಮೊಮ್ಮಗಳು ಆಸ್ತಿ ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಸಂಗತಿ ಶಾಂತಿ ಅವರ ಅರಿವಿಗೆ ಬಂದಿತ್ತು. ಹೀಗಾಗಿ, ಗಿಫ್ಟ್‌ ಡೀಡ್‌ ರದ್ದುಪಡಿಸುವಂತೆ ಕೋರಿ ಅಪ್ಪರಂಡ ಶಾಂತಿ ಬೋಪಣ್ಣ, ‘ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ-2007‘ರ ಅಡಿಯಲ್ಲಿ 2019ರಲ್ಲಿ ಉಪ ವಿಭಾಗಾಧಿಕಾರಿಗೆ (ಎಸಿ) ಮನವಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ್ದ ಉಪ ವಿಭಾಗಾಧಿಕಾರಿ 2021ರ ಸೆಪ್ಟೆಂಬರ್ 15ರಂದು ಗಿಫ್ಟ್‌ ಡೀಡ್‌ ರದ್ದುಗೊಳಿಸಿ ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ಮಗ ಮತ್ತು ಮೊಮ್ಮಗಳು, ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸಿದ್ದರು. 2023ರ ಮಾರ್ಚ್‌ 23ರಂದು ಉಪವಿಭಾಗಾಧಿಕಾರಿ ಆದೇಶವನ್ನು ರದ್ದುಪಡಿಸಿದ್ದ ಜಿಲ್ಲಾಧಿಕಾರಿ, ಪುತ್ರ ಹಾಗೂ ಮೊಮ್ಮಗಳ ಆಸ್ತಿ ಹಕ್ಕನ್ನು ಮರು ಸ್ಥಾಪಿಸಲು ಆದೇಶಿಸಿದ್ದರು. ಅಂತೆಯೇ, ವೃದ್ಧ ತಾಯಿಯ ಜೀವಿತಾವಧಿವರೆಗೆ ವಾರ್ಷಿಕ ಜೀವನಾಂಶವನ್ನು ಪಾವತಿಸುವಂತೆ ಪುತ್ರ ಮಗ ಮತ್ತು ಮೊಮ್ಮಗಳಿಗೆ ನಿರ್ದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಅಪ್ಪರಂಡ ಶಾಂತಿ ಬೋಪಣ್ಣ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT