ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಕು ಕೊಟ್ಟವರಿಗೆ ಮತ್ತೆ ಕತ್ತಲು

ಭೂ ಹಂಚಿಕೆಯ 56 ಅಧಿಸೂಚನೆ ರದ್ದು; ಮರು ಪ್ರಸ್ತಾವನೆ ಸಲ್ಲಿಸಲು ಸೂಚನೆ
Last Updated 18 ಅಕ್ಟೋಬರ್ 2022, 22:45 IST
ಅಕ್ಷರ ಗಾತ್ರ

ಬೆಂಗಳೂರು:ಮುಳುಗಡೆ ಸಂತ್ರಸ್ತರ ಪುನರ್ವಸತಿ ಸೇರಿದಂತೆ ವಿವಿಧ ಉದ್ದೇಶಗಳಿಗೆ ಅರಣ್ಯ ಭೂಮಿ ಹಂಚಿಕೆ ಮಾಡಿ ಹೊರಡಿಸಲಾಗಿದ್ದ 56 ಅಧಿಸೂಚನೆಗಳನ್ನು ಸರ್ಕಾರ ರದ್ದುಪಡಿಸಿದ್ದು, ಒಮ್ಮೆ ಊರು ಕಳೆದುಕೊಂಡು ತಬ್ಬಲಿಗಳಾಗಿದ್ದವರು ಮತ್ತೆ ‘ಅನಾಥ’ರಾಗುವ ಪರಿಸ್ಥಿತಿ ಎದುರಾಗಿದೆ.

ಎಲ್ಲೆಲ್ಲಿ ಭೂಮಿ ಹಂಚಿಕೆ ಮಾಡಲಾಗಿತ್ತೋ ಆ ಪ್ರದೇಶಗಳನ್ನು ಮತ್ತೆ ಸಂತ್ರಸ್ತರಿಗೆ ನೀಡುವ ಬಗ್ಗೆ ಹೊಸದಾಗಿ ಪ್ರಸ್ತಾವ ಸಲ್ಲಿಸುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚಿಸಿದೆ. ‘ಹಂಚಿಕೆಯಾದ ಬಳಿಕ ಮತ್ತೆ ಕಳೆದುಕೊಂಡ ಭೂಮಿ, ಮನೆಜಾಗ ಪುನಃ ಸಿಗಬೇಕಾಗದರೆ, ಕನಿಷ್ಠ ಎರಡು ವರ್ಷ ಬೇಕಾಗಲಿದೆ’ ಎಂದೂ ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ಹೇಳಿವೆ.

ಸರ್ಕಾರ ಹೀಗೆ, ಅಧಿಸೂಚನೆಗಳನ್ನು ರದ್ದುಪಡಿಸಿದ ಪರಿಣಾಮಶಿವಮೊಗ್ಗ ಜಿಲ್ಲೆಯ ಶರಾವತಿ ಮುಳುಗಡೆ ಸಂತ್ರಸ್ತ 2 ಸಾವಿರ ಕುಟುಂಬಗಳ ಬದುಕು ಮತ್ತೆ ಅತಂತ್ರವಾಗಿದೆ. ಜತೆಗೆ,ಚಿಕ್ಕಮಗಳೂರು, ಬೆಳಗಾವಿ, ಕೊಡುಗು ಜಿಲ್ಲೆಗಳಲ್ಲಿ ಕೂಡುಬೇಸಾಯ ಸೇರಿದಂತೆ ವಿವಿಧ ಸಾರ್ವಜನಿಕ ಉದ್ದೇಶಗಳಿಗೆ ಹಂಚಿಕೆ ಮಾಡಿದ್ದ ಭೂಮಿಯೂ ಮರಳಿ ಅರಣ್ಯ ಭೂಮಿಗೆ ಸೇರ್ಪಡೆಯಾಗಿದೆ.

ಕೇಂದ್ರ ಸರ್ಕಾರದ ಅನುಮತಿ ಪಡೆಯದೇ ಅರಣ್ಯ ಭೂಮಿಯನ್ನು ಸಂರಕ್ಷಿತ ಪ್ರದೇಶದಿಂದ ಕೈಬಿಡಲಾಗಿದೆ
( ಡಿ–ನೋಟಿಫಿಕೇಶನ್) ಎಂದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಪುಣಜಿ ಬ್ರಹ್ಮೇಶ್ವರದ ಗಿರೀಶ್‌ ಆಚಾರ್ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ್ದ ಕೋರ್ಟ್‌, ಕಂದಾಯ ಇಲಾಖೆಗೆಅರಣ್ಯ ಭೂಮಿ ಹಸ್ತಾಂತರಿಸುವ ಪ್ರಕ್ರಿಯೆಯಲ್ಲಿ ಸರ್ಕಾರ 1963 ಹಾಗೂ 1980ರ ಅರಣ್ಯ ಕಾಯ್ದೆಯ ನಿಯಮಗಳನ್ನು ಪಾಲಿಸಿಲ್ಲ. ಕೇಂದ್ರದ ಅನುಮತಿ ಪಡೆಯದೇ ಡಿ–ನೋಟಿಫಿಕೇಶನ್ ಮಾಡಲಾಗಿದೆ. ಇದು ಕಾನೂನು ಬಾಹಿರ, ಮಾರ್ಚ್‌ 2009ರಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪಿಗೂ ವಿರುದ್ಧದ ನಿರ್ಧಾರ ಎಂದು ತೀರ್ಪು ನೀಡಿತ್ತು.ತೀರ್ಪಿನ ಒಂದೂವರೆ ವರ್ಷದ ನಂತರ ಸರ್ಕಾರ 1994ರಿಂದ 2019ರವರೆಗೆ ಹೊರ ಡಿಸಿದ್ದ 56 ಅಧಿಸೂಚನೆಗಳನ್ನು ರದ್ದುಪಡಿಸಿದೆ.

ಮುಗಿಯದ ಶರಾವತಿ ಸಂತ್ರಸ್ತರ ಬವಣೆ: 1958–64ರ ಅವಧಿಯಲ್ಲಿ ಜಲವಿದ್ಯುತ್‌ ಯೋಜನೆ ಮೂಲಕ ರಾಜ್ಯಕ್ಕೆ ಬೆಳಕು ನೀಡುವ ಉದ್ದೇಶಕ್ಕೆ ನಿರ್ಮಾಣವಾದ ಲಿಂಗನಮಕ್ಕಿ ಜಲಾಶಯಕ್ಕಾಗಿ 152 ಹಳ್ಳಿಗಳ 12 ಸಾವಿರ ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿತ್ತು. ಹೊಸನಗರ, ತೀರ್ಥಹಳ್ಳಿ, ಸಾಗರ, ಸೊರಬ, ಶಿವಮೊಗ್ಗ, ಶಿಕಾರಿಪುರ ತಾಲ್ಲೂಕಿನ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಪುನರ್‌ನೆಲೆ ಕಂಡುಕೊಂಡಿದ್ದರು. ಅವರ ಪುನರ್ವಸತಿಗಾಗಿಯೇ ಅಂದು ಕೇಂದ್ರ ಸರ್ಕಾರ 8 ಸಾವಿರ ಎಕರೆಗೂ ಹೆಚ್ಚು ಅರಣ್ಯಭೂಮಿ ಮೀಸಲಿಟ್ಟಿತ್ತು. ಆ ಸ್ಥಳದಲ್ಲಿ ಸಂತ್ರಸ್ತರು ನೆಲೆ ನಿಂತು, ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಾ ಬಂದರೂ, ಅವರ ಅನುಭೋಗದಲ್ಲಿದ್ದ ಆ ಭೂಮಿಯ ಹಕ್ಕು ಸಿಕ್ಕಿರಲಿಲ್ಲ. 2015ರಲ್ಲಿ ಸರ್ಕಾರ 9,934 ಎಕರೆ 2 ಗುಂಟೆ ಅರಣ್ಯಭೂಮಿಯನ್ನು ಡಿ–ನೋಟಿಫಿಕೇಶನ್ ಮಾಡಿ, ಕಂದಾಯ ಇಲಾಖೆಗೆ ಹಸ್ತಾಂತರಿಸಿತ್ತು. ಕಂದಾಯ ಇಲಾಖೆ ಮೂರು ಹಂತಗಳಲ್ಲಿ 2 ಸಾವಿರ ಕುಟುಂಬಗಳಿಗೆ6,458 ಎಕರೆ ಭೂಮಿ ಹಂಚಿಕೆ ಮಾಡಿ, ಆರ್‌ಟಿಸಿಯನ್ನೂ (ಪಹಣಿ) ನೀಡಿತ್ತು. ಉಳಿದ ಭೂಮಿಗೂ ಸಂತ್ರಸ್ತರ ನೆಲೆಗೂ ತಾಳೆಯಾಗದ ಕಾರಣ ಹಂಚಿಕೆಯಾಗಿರಲಿಲ್ಲ.

ಕೇಂದ್ರದ ಅನುಮತಿ; ಮತ್ತಷ್ಟು ವಿಳಂಬ?

ಸರ್ಕಾರದ ಯೋಜನೆಗಳಿಂದ ನಿರಾಶ್ರಿತರಾದವರ ಪುನರ್ವಸತಿಗಾಗಿ ಹಾಗೂ ಸಾರ್ವಜನಿಕ ಉದ್ದೇಶಕ್ಕಾಗಿ ಕರ್ನಾಟಕ ಅರಣ್ಯ ಕಾಯ್ದೆ 1963ರ 28ನೇ ನಿಯಮದ ಅನ್ವಯ ದತ್ತವಾದ ಅಧಿಕಾರ ಚಲಾಯಿಸಿ, ರಾಜ್ಯ ಸರ್ಕಾರ ಅರಣ್ಯ ಭೂಮಿಯನ್ನು ಡಿ–ನೋಟಿಫಿಕೇಶನ್ ಮಾಡಿತ್ತು. ಈಗ ಎಲ್ಲ 56 ಅಧಿಸೂಚನೆಗಳು ರದ್ದಾಗಿವೆ.

‘ಈ ಭೂಮಿಯನ್ನು ಮತ್ತೆ ಸಂತ್ರಸ್ತರಿಗೆ ನೀಡಬೇಕಾದರೆ ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕಿದೆ. ಅದಕ್ಕಾಗಿ ಜಿಲ್ಲಾಧಿಕಾರಿಗಳು ಹೊಸದಾಗಿ ಪ್ರಸ್ತಾವ ಸಲ್ಲಿಸಬೇಕು. ನಂತರ ಅರಣ್ಯ ಇಲಾಖೆ ಅನುಮೋದನೆ ನೀಡಿ, ಕೇಂದ್ರಕ್ಕೆ ಕಳುಹಿಸುತ್ತದೆ. ಅನುಮತಿ ದೊರೆತ ನಂತರ ಕಂದಾಯ ಇಲಾಖೆಗೆ ಹಸ್ತಾಂತರಿಸಲಾಗುತ್ತದೆ. ಫಲಾನುಭವಿಗಳಿಗೆ ಮರು ಹಂಚಿಕೆ ಮಾಡುವ ಹೊಣೆ ಕಂದಾಯ ಇಲಾಖೆ ಮಾಡುತ್ತದೆ’ ಎಂದು ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸಂಜಯ್‌ ಬಿಜ್ಜೂರು ವಿವರ ನೀಡಿದರು. ‘ಕೇಂದ್ರ ಸರ್ಕಾರದ ಅನುಮತಿ ಪಡೆದು ಮತ್ತೆ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಲು ಕನಿಷ್ಠ ಎರಡು ವರ್ಷಗಳು ಬೇಕಾಗಬಹುದು. ಇನ್ನು ಆರು ತಿಂಗಳಿಗೆ ಈ ಸರ್ಕಾರದ ಅವಧಿ ಮುಗಿಯುತ್ತದೆ. ಲಿಂಗನಮಕ್ಕಿಗಾಗಿ ಎಲ್ಲ ಕಳೆದುಕೊಂಡ ನಮಗೆ ಆರು ದಶಕಗಳು ಕಳೆದರೂ ಪುನರ್‌ವಸತಿ ಸಿಗಲಿಲ್ಲ. ಈಗ ಸಿಕ್ಕಿದ್ದನ್ನೂ ಕಿತ್ತುಕೊಂಡಿದ್ದಾರೆ’ ಎಂದು ಶರಾವತಿ ಮುಳುಗಡೆ ಸಂತ್ರಸ್ತ ಹೆಬ್ಬೂರು ನಾಗರಾಜ್ ಸಂಕಟ ತೋಡಿಕೊಂಡರು.

ಕೇಂದ್ರಕ್ಕೆ ಸಿಎಂ ನೇತೃತ್ವದಲ್ಲಿ ನಿಯೋಗ

ಶರಾವತಿ ಸಂತ್ರಸ್ತರಿಗೆ ಭೂಮಿ ನೀಡಲು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಲು ಮುಖ್ಯಮಂತ್ರಿ ನೇತೃತ್ವದಲ್ಲಿ ನಿಯೋಗ ತೆಗೆದುಕೊಂಡು ಹೋಗುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ, ಸಾಗರ ಶಾಸಕ ಹರತಾಳು ಹಾಲಪ್ಪ ಅವರ ನೇತೃತ್ವದಲ್ಲಿ ಮಂಗಳವಾರ ನಡೆದ ಸಭೆ ನಿರ್ಧರಿಸಿದೆ.

‘ಜಿಲ್ಲಾಧಿಕಾರಿ, ಸಾಂಖ್ಯಿಕ ಮತ್ತು ಯೋಜನಾ ಅಧಿಕಾರಿಗಳಿಂದ ಮಾಹಿತಿ ಪಡೆದು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಈಗಾಗಲೇ ಡಿ–ರಿಸರ್ವೇಷನ್‌ ಆಗಿರುವ ಜಮೀನಿಗೆ ಇನ್ನೂ ಮೂರು ಸಾವಿರ ಎಕರೆ ಅರಣ್ಯ ಭೂಮಿ ಸೇರ್ಪಡೆಗೊಳಿಸಲು ಮನವಿ ಮಾಡಲಾಗುವುದು’ ಎಂದು ಜ್ಞಾನೇಂದ್ರ ಹೇಳಿದರು.

ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಜಾವೇದ್ ಅಖ್ತರ್, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸಂಜಯ್ ಬಿಜ್ಜೂರ್‌, ಶರಾವತಿ ಮುಳುಗಡೆ ಪ್ರದೇಶದ ರೈತರಾದ ಕಾಳನಾಯ್ಕ, ತಿಮ್ಮಪ್ಪ ಕುಂಬ್ರಿ, ಕೃಷ್ಣಮೂರ್ತಿ, ಜಾನಪದ ಆಕಾಡೆಮಿ ಮಾಜಿ ಸದಸ್ಯ ಬೂದ್ಯಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT