ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿಗೆ ನಲಪಾಡ್‌ ಯುವ ಕಾಂಗ್ರೆಸ್‌ ಅಧ್ಯಕ್ಷ?

ಸಂಧಾನ ಸಭೆಯಲ್ಲಿ ನಿರ್ಧಾರ– ಬುಧವಾರ ಅಧಿಕೃತ ಪ್ರಕಟಣೆ ಸಾಧ್ಯತೆ
Last Updated 29 ಜೂನ್ 2021, 20:28 IST
ಅಕ್ಷರ ಗಾತ್ರ

ಬೆಂಗಳೂರು: 2022ರ ಜನವರಿಯಿಂದ ರಾಜ್ಯ ಯುವ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನವನ್ನು ಶಾಸಕ ಎನ್‌.ಎ. ಹ್ಯಾರಿಸ್‌ ಅವರ ಮಗ ಮೊಹಮ್ಮದ್ ನಲಪಾಡ್‌ ಅವರಿಗೆ ನೀಡಲು ಮಂಗಳವಾರ ರಾತ್ರಿ ನಡೆದ ಸಂಧಾನ ಸಭೆಯಲ್ಲಿ ನಿರ್ಧರಿಸಿದ್ದು, ಬುಧವಾರ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.

ಫೆಬ್ರುವರಿಯಲ್ಲಿ ನಡೆದ ಯುವ ಕಾಂಗ್ರೆಸ್‌ ಸಮಿತಿ ಚುನಾವಣೆಯಲ್ಲಿ ಮೊಹಮ್ಮದ್ ನಲಪಾಡ್ ಅತ್ಯಧಿಕ ಮತ ಗಳಿಸಿದ್ದರು. ಆದರೆ, ಅವರನ್ನು ಅನರ್ಹಗೊಳಿಸಿ ಎರಡನೇ ಸ್ಥಾನದಲ್ಲಿದ್ದ ರಕ್ಷಾ ರಾಮಯ್ಯ ಅವರನ್ನು ರಾಜ್ಯ ಯುವ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರನ್ನಾಗಿ ಘೋಷಿಸಲಾಗಿತ್ತು.

ರಕ್ಷಾ ಆಯ್ಕೆಯನ್ನು ಪ್ರಶ್ನಿಸಿ ನಲಪಾಡ್‌ ಕಾಂಗ್ರೆಸ್‌ ಹೈಕಮಾಂಡ್‌ ಹಾಗೂ ಯುವ ಕಾಂಗ್ರೆಸ್‌ ಸಮಿತಿ ಚುನಾವಣಾ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌ ಉಪಸ್ಥಿತಿಯಲ್ಲಿ ಮಂಗಳವಾರ ರಾತ್ರಿ ಕೆಪಿಸಿಸಿ ಕಚೇರಿಯಲ್ಲಿ ಇಬ್ಬರ ನಡುವೆ ಸಂಧಾನ ಸಭೆ ನಡೆಸಲಾಯಿತು.

‘ಇಬ್ಬರಿಗೂ ತಲಾ 18 ತಿಂಗಳ ಕಾಲ ಅಧ್ಯಕ್ಷ ಸ್ಥಾನ ನೀಡುವಂತೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ್ದರು. ಬಿ.ವಿ. ಶ್ರೀನಿವಾಸ್‌ ಕೂಡ ಈ ಕುರಿತು ಸಿದ್ದರಾಮಯ್ಯ ಜತೆ ಚರ್ಚಿಸಿದ್ದರು. ಆದರೆ, ಚುನಾವಣಾ ಪ್ರಕ್ರಿಯೆಯಲ್ಲಿ ಅತ್ಯಧಿಕ ಮತ ಪಡೆದಿರುವುದರಿಂದ ತನಗೇ ಹುದ್ದೆ ನೀಡುವಂತೆ ನಲಪಾಡ್‌ ಪಟ್ಟು ಹಿಡಿದರು. ಅವರ ಒತ್ತಾಯಕ್ಕೆ ಮಣಿದು ಜನವರಿಯಿಂದ ಹುದ್ದೆ ನೀಡಲು ತೀರ್ಮಾನಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಈಗ ಅಧ್ಯಕ್ಷರಾಗಿರುವ ರಕ್ಷಾ ರಾಮಯ್ಯ ಅವರನ್ನು ಡಿಸೆಂಬರ್‌ ಅಂತ್ಯದವರೆಗೂ ಹುದ್ದೆಯಲ್ಲಿ ಮುಂದುವರಿಸಲಾಗುತ್ತದೆ. ನಂತರದ ಅವಧಿಯನ್ನು ಮೊಹಮ್ಮದ್ ನಲಪಾಡ್‌ ಅವರಿಗೆ ನೀಡಲಾಗುತ್ತದೆ. ಪಕ್ಷದ ಮುಖಂಡರು ಬುಧವಾರ ಅಧಿಕೃತವಾಗಿ ಈ ವಿಷಯವನ್ನು ಪ್ರಕಟಿಸಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಮಂಗಳವಾರ ರಾತ್ರಿಯವರೆಗೂ ಕೆಪಿಸಿಸಿ ಕಚೇರಿಯಲ್ಲಿ ಸಂಧಾನ ಸಭೆ ನಡೆದಿತ್ತು. ಸಭೆ ಕೊನೆಯ ಹಂತದಲ್ಲಿ ಇರುವಾಗಲೇ ರಕ್ಷಾ ರಾಮಯ್ಯ ಹೊರ ನಡೆದರು. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT