ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ಪರೀಕ್ಷೆಯ ಅಭ್ಯರ್ಥಿಗಳು ಆತಂಕಪಡುವುದು ಬೇಡ: ಸಚಿವ ಜಿ. ಪರಮೇಶ್ವರ

Published 20 ಜನವರಿ 2024, 7:46 IST
Last Updated 20 ಜನವರಿ 2024, 7:46 IST
ಅಕ್ಷರ ಗಾತ್ರ

ಬೆಂಗಳೂರು: ‘ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಮರು ಪರೀಕ್ಷೆಗೆ ಸಂಬಂಧಿಸಿದಂತೆ ಗುಪ್ತದಳದ (ಇಂಟಲಿಜೆನ್ಸ್) ಪರಿಶೀಲನೆ ವೇಳೆ ಮಾಹಿತಿ ಹೊರಬಿದ್ದಿದ್ದು, ಸಿಸಿಬಿ ಪೊಲೀಸರು ಕೂಲಂಕಷವಾಗಿ ವಿಚಾರಣೆ ನಡೆಸುತ್ತಿದ್ದಾರೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ  ಹೇಳಿದರು.

ಪಿಎಸ್‌ಐ ಮತ್ತು ವಾಣಿಜ್ಯ ತೆರಿಗೆ ಇನ್‌ಸ್ಪೆಕ್ಟರ್‌ (ಸಿಟಿಐ) ನೇಮಕಾತಿಗೆ ನಡೆಯಲಿರುವ ಪರೀಕ್ಷೆಯ ಪ್ರಶ್ನೆಪತ್ರಿಕೆ ನೀಡುವುದಾಗಿ ಗುಪ್ತದಳದ ಪಿಎಸ್‌ಐ ಒಬ್ಬರು ಆಮಿಷ ಒಡ್ಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿ ಕೆಲವು ಪರೀಕ್ಷಾರ್ಥಿಗಳು ಶುಕ್ರವಾರ ರಾತ್ರಿ ನೀಡಿದ್ದ ದೂರಿನ ಆಧಾರದಲ್ಲಿ ಸಿಸಿಬಿ ಪೊಲೀಸರು ಪಿಎಸ್‌ಐ ಅನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಈ ಬಗ್ಗೆ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಪರಮೇಶ್ವರ, ‘ಆರೋಪದ ಹಿನ್ನೆಲೆಯಲ್ಲಿ ಸಿಸಿಬಿಯವರು ಪಿಎಸ್‌ಐ ಅನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ಅಕ್ರಮದ ಬಗ್ಗೆ ಮಾಹಿತಿ ಸಂಗ್ರಹಿಸಲು ನಕಲಿ ಕರೆ ಮಾಡಿರುವುದಾಗಿ ಆರೋಪಿತ ಹೇಳಿಕೆ ನೀಡಿದ್ದಾನೆ. ಸತ್ಯಾಸತ್ಯತೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಸುರಕ್ಷಿತವಾಗಿ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳು ಆತಂಕಪಡುವುದು ಬೇಡ’ ಎಂದರು.

ಒಳ ಸಂಚು, ಪಿತೂರಿ ನಡೆಸುತ್ತಿಲ್ಲ: ‘ಬಿ.ಕೆ. ಹರಿಪ್ರಸಾದ್ ನೀಡಿದ್ದ ಹೇಳಿಕೆಗೆ ಸಂಬಂಧಿಸಿದ ಸುದ್ದಿ ರಾಜ್ಯಪಾಲರ ಗಮನಕ್ಕೆ ಬಂದಿತ್ತು. ಈ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಅವರು ಸೂಚಿಸಿದ್ದರು. ಅದರನ್ವಯ ಕಾನೂನು ಚೌಕಟ್ಟಿನಲ್ಲಿ ಏನು ಕೆಲಸ ಮಾಡಬೇಕು ಅದನ್ನು ಪೊಲೀಸರು ಮಾಡಿದ್ದಾರೆ. ಹರಿಪ್ರಾದ್ ಅವರ ವಿರುದ್ಧ ಯಾರು ಒಳ ಸಂಚು, ಪಿತೂರಿ ನಡೆಸುತ್ತಿಲ್ಲ. ಅವರಿಗೆ ತೊಂದರೆ ಮಾಡಬೇಕು ಎಂಬ ಉದ್ದೇಶ ಯಾರಿಗೂ ಇಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚು ಪ್ರತಿಕ್ರಿಯಿಸಲು ಹೋಗುವುದಿಲ್ಲ‌’ ಎಂದು ತಿಳಿಸಿದರು.

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಕಾರ್ಯಕರ್ತರು ತೆರಳುವ ಸಂದರ್ಭದಲ್ಲಿ ಗೋದ್ರಾ ಮಾದರಿ ಹತ್ಯಾಕಾಂಡ ನಡೆಯಬಹುದು. ಈ‌ ನಿಟ್ಟಿನಲ್ಲಿ ಸರ್ಕಾರ ರಕ್ಷಣೆ‌ ಕೊಡಬೇಕು ಎಂದು ಇತ್ತೀಚೆಗೆ ಬಿ.ಕೆ ಹರಿಪ್ರಸಾದ್ ಹೇಳಿದ್ದರು.  

‘ಸಂಸದ ಅನಂತ್ ಕುಮಾರ್ ಹೆಗಡೆ ಅವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಲ್ಲಡ್ಕ ಪ್ರಭಾಕರ್ ಭಟ್ ಅವರ ಪ್ರಕರಣದ ತನಿಖೆ ಮುಂದುವರಿದಿದೆ. ನ್ಯಾಯಾಲಯಕ್ಕೆ ದೋಷರೋಪಣಾಪಟ್ಟಿ ಸಲ್ಲಿಸಲಾಗುತ್ತಿದೆ’ ಎಂದರು.

ಒಳಮೀಸಲಾತಿ ವಿಚಾರದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಒಳ ಮೀಸಲಾತಿಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರಕ್ಕೆ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ಅವರು ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ 341 (3) ಸಂವಿಧಾನಿಕ ತಿದ್ದುಪಡಿ ತಂದು ಒಳ ಮೀಸಲಾತಿಗೆ ಅವಕಾಶ ಮಾಡಿಕೊಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದೇವೆ. ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದರೆ ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT