ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರಕ್ಕೆ ಮೋದಿ: ಅಡುಗೆ ಅನಿಲ ಪೂರೈಕೆಯೂ ಸ್ಥಗಿತ!

ಸಫಾರಿ, ರೆಸಾರ್ಟ್‌, ಹೋಂ ಸ್ಟೇಗಳು ಬಂದ್‌, ಪ್ರವಾಸಿಗರಿಗೆ ನಿರಾಸೆ, ಆದಾಯಕ್ಕೂ ಹೊಡೆತ
Last Updated 7 ಏಪ್ರಿಲ್ 2023, 21:44 IST
ಅಕ್ಷರ ಗಾತ್ರ

ಚಾಮರಾಜನಗರ/ಗುಂಡ್ಲುಪೇಟೆ: ಹುಲಿ ಯೋಜನೆಯ ಸುವರ್ಣ ಮಹೋತ್ಸವದ ಅಂಗವಾಗಿ ಭಾನುವಾರ (ಏ.9) ಪ್ರಧಾನಿ ನರೇಂದ್ರ ಮೋದಿ ಅವರು ಬಂಡೀಪುರಕ್ಕೆ ಭೇಟಿ ನೀಡುತ್ತಿರುವ ಕಾರಣಕ್ಕೆ ಭದ್ರತೆಯ ದೃಷ್ಟಿಯಿಂದ ಬಂಡೀಪುರ ವ್ಯಾಪ್ತಿಯಲ್ಲಿ ಸಫಾರಿ, ರೆಸಾರ್ಟ್‌, ಹೋಂಸ್ಟೇಗಳು ಬಂದ್‌ ಆಗಿರುವುದರಿಂದ ಪ್ರವಾಸಿಗರು ನಿರಾಸೆ ಅನುಭವಿಸಿರುವುದರ ಜೊತೆಗೆ, ರೆಸಾರ್ಟ್‌, ಹೋಂ ಸ್ಟೇ ಮಾಲೀಕರಿಗೂ ಆದಾಯ ಖೋತಾ ಆಗಿದೆ.

‍ಪ್ರಧಾನಿ ಮೋದಿ ಅವರ ಹೆಲಿಕಾಪ್ಟರ್‌ ಇಳಿಯಲು ಹೆಲಿಪ್ಯಾಡ್‌ ನಿರ್ಮಿಸಲಾಗಿರುವ ಮೇಲುಕಾಮನಹಳ್ಳಿ ಗ್ರಾಮದಲ್ಲಿ 'ನಮ್ಮ ಸಂಘ’ದ ಅಡುಗೆ ಅನಿಲ ಸಿಲಿಂಡರ್‌ ಪೂರೈಕೆ ಏಜೆನ್ಸಿ ಇದ್ದು, ಭದ್ರತೆಯ ದೃಷ್ಟಿಯಿಂದ ಏಜೆನ್ಸಿಯನ್ನೂ ಮುಚ್ಚಿಸಲಾಗಿದೆ. ಶುಕ್ರವಾರದಿಂದ ಕಾಡಂಚಿನ, ಪೋಡುಗಳ ಗ್ರಾಹಕರಿಗೆ ಅಡುಗೆ ಅನಿಲ ಸಿಲಿಂಡರ್‌ ಪೂರೈಕೆ ಸ್ಥಗಿತಗೊಂಡಿದೆ.

ಅನಿಲ ತುಂಬಿರುವ ಸಿಲಿಂಡರ್‌ ಹಾಗೂ ಖಾಲಿ ಸಿಲಿಂಡರ್‌ಗಳನ್ನೂ ಬೇರೆಡೆಗೆ ಸ್ಥಳಾಂತರಿಸುವಂತೆ ಏಜೆನ್ಸಿಯವರಿಗೆ ಪೊಲೀಸರು ಸೂಚಿಸಿದ್ದು, ಸಿಬ್ಬಂದಿ ಎಲ್ಲ ಸಿಲಿಂಡರ್‌ಗಳನ್ನು ಸರಗೂರು ತಾಲ್ಲೂಕಿನ ಬಿ.ಮಟಕೆರೆಯಲ್ಲಿರುವ ‘ನಮ್ಮ ಸಂಘ’ದ ಇನ್ನೊಂದು ಏಜೆನ್ಸಿಗೆ ರವಾನಿಸಿದ್ದಾರೆ.

ಬಂಡೀಪುರ ವ್ಯಾಪ್ತಿಯ 110 ಹಳ್ಳಿಗಳಿಗೆ ಸಮ್ಮ ಸಂಘವು ಅಡುಗೆ ಅನಿಲ ಸಿಲಿಂಡರ್‌ ಪೂರೈಸುತ್ತಿದೆ. ಗಿರಿಜನರ ಪೋಡುಗಳು, ಕಾಡಂಚಿನ ಗ್ರಾಮಗಳೇ ಇಲ್ಲಿ ಹೆಚ್ಚಾಗಿವೆ. ಅಂದಾಜು 40 ಸಾವಿರದಷ್ಟು ಗ್ರಾಹಕರಿದ್ದಾರೆ. ಬಂಡೀಪುರ ವ್ಯಾಪ್ತಿಯಲ್ಲೇ 20 ಸಾವಿರದಷ್ಟು ಸಂಪರ್ಕಗಳಿವೆ. ಪ್ರತಿ ದಿನ ಕನಿಷ್ಠ 300 ಸಿಲಿಂಡರ್‌ಗಳನ್ನು ಗ್ರಾಹಕರಿಗೆ ಪೂರೈಸಲಾಗುತ್ತದೆ. ಶುಕ್ರವಾರ ಬೆಳಿಗ್ಗೆಯಿಂದ ಏಜೆನ್ಸಿ ಕಾರ್ಯನಿರ್ವಹಣೆ ಸ್ಥಗಿತಗೊಳಿಸಿದೆ. ಮೂರು ದಿನಗಳ ಕಾಲ ಸಿಲಿಂಡರ್‌ ಪೂರೈಕೆ ಸ್ಥಗಿತಗೊಂಡಿದೆ.

‘ಪೊಲೀಸರ ಸೂಚನೆ ಮೇರೆಗೆ ಏಜೆನ್ಸಿ ಕಾರ್ಯನಿರ್ವಹಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ. ಗುರುವಾರ ಬೆಳಿಗ್ಗೆಯೇ ಗ್ರಾಹಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇವೆ. ಕೆಲವು ಗ್ರಾಹಕರು ಒಂದೇ ಸಿಲಿಂಡರ್‌ ಹೊಂದಿದ್ದಾರೆ. ಮೂರು ದಿನ ಪೂರೈಕೆ ಇಲ್ಲದಿರುವುದರಿಂದ ಸಿಲಿಂಡರ್‌ನಲ್ಲಿ ಸ್ವಲ್ಪ ಅನಿಲ ಇದ್ದರೂ, ಹೊಸ ಸಿಲಿಂಡರ್‌ ಪಡೆಯುವಂತೆ ಹೇಳಿದ್ದೆವು. ಅದರಂತೆ ಕೆಲವು ಕಡೆ ಪೂರೈಕೆ ಮಾಡಿದ್ದೇವೆ. ನಮ್ಮ ದಾಸ್ತಾನು ಕೊಠಡಿಯಲ್ಲಿದ್ದ ತುಂಬಿದ ಮತ್ತು ಖಾಲಿ ಸಿಲಿಂಡರ್‌ಗಳನ್ನು 70 ಕಿ.ಮೀ ದೂರದಲ್ಲಿರುವ ನಮ್ಮ ಇನ್ನೊಂದು ಕೇಂದ್ರದಲ್ಲಿ ಇರಿಸಿದ್ದೇವೆ’ ನಮ್ಮ ಸಂಘದ ಕಾರ್ಯದರ್ಶಿ ಕೃಪಾಕರ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಆದಾಯ ನಷ್ಟ: ಬೇಸಿಗೆ ರಜೆ ಆರಂಭವಾಗುತ್ತಿರುವುದರಿಂದ ಈ ಸಮಯದಲ್ಲಿ ಬಂಡೀಪುರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚು. ಬಂಡೀಪುರದಲ್ಲಿ ಸಫಾರಿ ಅಲ್ಲದೆ, ಅರಣ್ಯ ಇಲಾಖೆಯ ವಸತಿ ಗೃಹಗಳಿವೆ. ಮೇಲುಕಾಮನಹಳ್ಳಿ, ಮಂಗಲ ಗ್ರಾಮಗಳ ವ್ಯಾಪ್ತಿಯಲ್ಲಿ ರೆಸಾರ್ಟ್‌ಗಳು, ಹೋಂ ಸ್ಟೇಗಳು ಇವೆ. ಪ್ರಧಾನಿಯವರ ಭೇಟಿಯ ಕಾರಣದಿಂದ ಬಂಡೀಪುರ ವ್ಯಾಪ್ತಿಯಲ್ಲಿ ಗುರುವಾರದಿಂದ ಸಫಾರಿಯನ್ನು ಹಾಗೂ ರೆಸಾರ್ಟ್‌, ಹೋಂ ಸ್ಟೇ, ಲಾಡ್ಜ್‌ಗಳಲ್ಲಿ ಕೊಠಡಿ ಕಾಯ್ದಿರಿಸುವಿಕೆ, ತಂಗುವಿಕೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಗುರುವಾರದಿಂದಲೇ ಎಲ್ಲವೂ ಬಂದ್‌ ಆಗಿವೆ. ಆನ್‌ಲೈನ್‌ ಮೂಲಕ ಟಿಕೆಟ್‌ ಕಾಯ್ದಿಸಿದ್ದವರಿಗೆ ರೆಸಾರ್ಟ್‌, ಹೋಂ ಸ್ಟೇಗಳ ಮಾಲೀಕರು ಹಣ ವಾಪಸ್‌ ಮಾಡಿದ್ದಾರೆ.

ಶುಕ್ರವಾರದಿಂದ ಮೂರು ದಿನಗಳ ಸರಣಿ ರಜೆ ಇತ್ತು. ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಬಿಟ್ಟು ಉಳಿದ ತರಗತಿಗಳ ಪರೀಕ್ಷೆ ಮುಗಿದು ಬೇಸಿಗೆ ರಜೆಯೂ ಆರಂಭವಾಗಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ ಬಂಡೀಪುರದಲ್ಲಿ ರೆಸಾರ್ಟ್‌, ಹೋಂ ಸ್ಟೇಗಳು ಭರ್ತಿಯಾಗುತ್ತವೆ. ಸಫಾರಿಗೂ ಭಾರಿ ಸಂಖ್ಯೆಯಲ್ಲಿ ಜನರು ಬರುತ್ತಾರೆ. ಭಾನುವಾರದವರೆಗೆ ಎಲ್ಲವೂ ಬಂದ್‌ ಆಗಿರುವುದರಿಂದ ಎಲ್ಲರಿಗೂ ಆದಾಯ ಖೋತಾ ಆಗಲಿದೆ.

‘ಪ್ರಧಾನಿ ಭೇಟಿ ಸಮಯದಲ್ಲಿ ಯಾರಿಗೂ ಕೊಠಡಿಗಳನ್ನು ಕೊಡದಿರಿ, ಆನ್‌ಲೈನಲ್ಲೂ ಕಾಯ್ದಿರಿಸುವುದಕ್ಕೆ ಅವಕಾಶ ನೀಡಬೇಡಿ ಎಂದು ಪೊಲೀಸರು ವಾರದ ಆರಂಭದಲ್ಲೇ ಹೇಳಿದ್ದರು. ತಿಂಗಳ ಹಿಂದೆಯೇ ಕಾಯ್ದಿರಿಸಿದವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇವೆ. ಜಿಲ್ಲಾಡಳಿತದ ಆದೇಶವನ್ನು ನಾವು ಪಾಲಿಸುವುದು ಅನಿವಾರ್ಯ’ ಎಂದು ರೆಸಾರ್ಟ್‌ನ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಅಧಿಕಾರಿಗಳು, ಸಿಬ್ಬಂದಿಗೆ ಕೋವಿಡ್‌ ಪರೀಕ್ಷೆ

ಪ್ರಧಾನಿ ನರೇಂದ್ರ ಮೋದಿ ಭೇಟಿಗೂ ಮುಂಚಿತವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಶುಕ್ರವಾರ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡರು.

ಗುಂಡ್ಲುಪೇಟೆ ಭಾಗದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಬಂಡೀಪುರ ಕ್ಯಾಂಪಸ್‌ಗೆ ಭೇಟಿ ನೀಡಲಿರುವ ಪ್ರಧಾನಿ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಮೇಲುಕಾಮನಹಳ್ಳಿಯಲ್ಲಿ ನಿರ್ಮಿಸಲಾಗಿರುವ ಹೆಲಿಪ್ಯಾಡ್‌ನಲ್ಲಿ ಸೇನಾ ಹೆಲಿಕಾಪ್ಟರ್‌ ಶುಕ್ರವಾರ ಬಂದಿಳಿಯಿತು. ಅಧಿಕಾರಿಗಳು ಹಾಗೂ ಭದ್ರತಾ ಪಡೆಯ ಸಿಬ್ಬಂದಿ ಹೆಲಿಕಾಪ್ಟರ್‌ ಇಳಿಸುವ ತಾಲೀಮು ನಡೆಸಿದರು.

ಹೆಲಿಪ್ಯಾಡ್‌ನಿಂದ ಬಂಡೀಪುರದ ಕೇಂದ್ರ ಕಚೇರಿವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ ತಪಾಸಣೆ ನಡೆಸಿದರು.

ರಸ್ತೆ ಬದಿ ಗ್ರಿಲ್‌: ಮೋದಿ ಅವರು ಹೆಲಿಕಾಪ್ಟರ್‌ನಿಂದ ಇಳಿದು ಕಾರಿನಲ್ಲಿ ಬಂಡೀಪುರದತ್ತ ಸಾಗುವ ರಸ್ತೆಯ ಎರಡೂ ಕಡೆಗಳಲ್ಲಿ ಭದ್ರತಾ ದೃಷ್ಟಿಯಿಂದ ಗ್ರಿಲ್‌ಗಳನ್ನು ಅಳವಡಿಸಲಾಗಿದ್ದು, ಜಾನುವಾರುಗಳ ಓಡಾಟಕ್ಕೆ ತೊಂದರೆಯಾಯಿತು.

ಪ್ರಧಾನಿ ಭದ್ರತೆಗಾಗಿ ತಮಿಳುನಾಡು ಹಾಗೂ ಕರ್ನಾಟಕದ 2000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಬಿಗಿ ತಪಾಸಣೆ; ಸಾಲು ಗಟ್ಟಿನಿಂತ ವಾಹನಗಳು

ಮೂರು ದಿನಗಳ ಕಾಲ ರಜೆ ಇದ್ದ ಕಾರಣದಿಂದ ತಮಿಳುನಾಡಿನ ಊಟಿಗೆ ಸಾವಿರಾರು ಪ್ರವಾಸಿಗರು ತೆರಳುತ್ತಿದ್ದು, ಮೇಲುಕಾಮನಹಳ್ಳಿಯಿಂದ ಮಧುಮಲೆ ರಸ್ತೆವರೆಗೂ ಬಿಗಿ ಭದ್ರತೆ ಕೈಗೊಳ್ಳಲಾಗಿರುವುದರಿಂದ ಶುಕ್ರವಾರ ಪ್ರವಾಸಿಗರ ವಾಹನಗಳು ಕಿ.ಮೀ ಗಟ್ಟಲೆ ‌ದೂರಕ್ಕೆ ಸಾಲುಗಟ್ಟಿ ನಿಂತಿದ್ದವು.

ಪೊಲೀಸರು ಹಾಗೂ ಎಸ್‌ಪಿಜಿ ಸಿಬ್ಬಂದಿ ಎಲ್ಲ ವಾಹನಗಳನ್ನು ತಪಾಸಣೆ ಮಾಡುತ್ತಿದ್ದುದರಿಂದ ರಜೆಯ ಮಜಾ ಅನುಭವಿಸಲು ಹೊರಟವರು ವಾಹನ ದಟ್ಟಣೆಯಲ್ಲಿ ಸಿಲುಕಿದರು.

ವಿಶೇಷ ಭದ್ರತಾ ಪಡೆಯ ಸೂಚನೆಯಂತೆ ಚುನಾವಣಾ ತಪಾಸಣೆ ಚೆಕ್‌ಪೋಸ್ಟ್‌ಗಳಲ್ಲೂ ತಪಾಸಣೆ ಮಾಡಲಾಗುತ್ತಿದೆ.

‘ಮೂರು ದಿನಗಳ ಕಾಲ ರಜೆ ಇರುವುದರಿಂದ ಹೆಚ್ಚಿನ ಪ್ರವಾಸಿಗರು ಊಟಿಯ ಕಡೆಗೆ ತೆರಳುತ್ತಿದ್ದಾರೆ ಕರ್ನಾಟಕ - ತಮಿಳುನಾಡಿನ ಗಡಿಭಾಗದ ಚೆಕ್‌ಪೋಸ್ಟ್‌ಗಳಲ್ಲಿ ವಾಹನ ತಪಾಸಣೆ ಮಾಡುತ್ತಿದ್ದರಿಂದ ಕಾಡಿನೊಳಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು’ ಎಂದು ಪೊಲೀಸರು ತಿಳಿಸಿದರು.

ವಾಹನಗಳಿಗೆ ನಿರ್ಬಂಧ: ಈ ಮಧ್ಯೆ, ತಮಿಳುನಾಡಿನ ಕಡೆಗೆ ಸಂಚರಿಸುವ ಭಾರಿ ವಾಹನಗಳ ಸಂಚಾರವನ್ನು ಶುಕ್ರವಾರ ಸಂಜೆ 4ರಿಂದ ನಿರ್ಬಂಧಿಸಲಾಗಿದೆ. ಉಳಿದೆಲ್ಲ ಖಾಸಗಿ ವಾಹನಗಳ ಸಂಚಾರವನ್ನು ಶನಿವಾರ ಸಂಜೆ 4ರಿಂದ ಜಿಲ್ಲಾಡಳಿತ ನಿರ್ಬಂಧಿಸಲಿದೆ. ಊಟಿ ಕಡೆಗೆ ಹೋಗುವವರು ಕೇರಳದ ಸುಲ್ತಾನ್‌ ಬತ್ತೇರಿ ಮೂಲಕ ಗೂಡಲೂರಿಗೆ ತೆರಳಿ ನಂತರ ಸಾಗಬೇಕು. ಅಂದಾಜು 80 ಕಿ.ಮೀಗಳಷ್ಟು ಸುತ್ತು ಹಾಕಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT