ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿಯಲ್ಲಿ ಸಮತಾ ಪಕ್ಷದ ಮೇಯರ್ ಮಾಡಿದ್ದಕ್ಕೆ ಖುಷಿಯಾಗಿದ್ದರು

Last Updated 29 ಜನವರಿ 2019, 20:21 IST
ಅಕ್ಷರ ಗಾತ್ರ

ಅದು 1996ನೇ ಇಸವಿ. ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ಮುಸ್ಲಿಂ ಲೀಗ್‌ನ 18, ಸಮತಾ ಪಕ್ಷದ 8 ಮಂದಿ ಸದಸ್ಯರು ಇದ್ದರು. ಮುಸ್ಲಿಂ ಲೀಗ್‌ನ ಎಲ್ಲರೂ ಸಮತಾ ಪಕ್ಷ ಸೇರಿದ್ದರು. ಹೀಗಾಗಿ ನಮ್ಮ ಪಕ್ಷದ ಗಂಗೂಬಾಯಿ ವಳಕೇರಿ ಅವರನ್ನು ಮೇಯರ್ ಮಾಡಿದ್ದೆವು. ಇಡೀ ದೇಶದಲ್ಲಿ ಸಮತಾ ಪಕ್ಷದ ಮೇಯರ್ ಕಲಬುರ್ಗಿ
ಯಲ್ಲಿ ಮಾತ್ರ ಇದ್ದಾರೆ ಎಂದು ಜಾರ್ಜ್‌ ಫರ್ನಾಂಡಿಸ್‌ ತುಂಬಾ ಖುಷಿಪಟ್ಟಿದ್ದರು. ಆ ಕ್ಷಣವನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ.

1967ರಿಂದಲೂ ಅವರೊಂದಿಗೆ ಒಡನಾಟವಿತ್ತು. 1970ರಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಬಡವರಿಗೆ ಭೂಮಿ ಹಂಚುವ ಉದ್ದೇಶದಿಂದ ಎಂ.ವೈ.ಘೋರ್ಪಡೆ ಅವರ ವಿರುದ್ಧ ಪ್ರತಿಭಟನೆ ಮಾಡಿದ್ದೆವು. ಆಗ ನಮ್ಮನ್ನು ಬಂಧಿಸಿ, ಬಿಡುಗಡೆ ಮಾಡಲಾಗಿತ್ತು. ಹೀಗೆ ನೇರವಾಗಿ ಅವರೊಂದಿಗೆ ಹೋರಾಟಕ್ಕೂ ಹೋಗುತ್ತಿದ್ದೆ.

1980ರಲ್ಲಿ ಪುಣೆ ಸಮೀಪದ ಲೋನಾವಾಳದಲ್ಲಿ ಮೂರು ದಿನ ಅಧ್ಯಯನ ಶಿಬಿರವನ್ನು ಹಮ್ಮಿಕೊಂಡಿದ್ದೆವು. ಆಗ ಅವರೊಂದಿಗೆ ಕಳೆದ ಕ್ಷಣಗಳು ಆಪ್ತವಾಗಿದ್ದವು.

ಕಲಬುರ್ಗಿಗೆ ಅವರು ಅನೇಕ ಬಾರಿ ಬಂದಿದ್ದರು. ಬಹುತೇಕ ಕಾರಿನಲ್ಲೇ ನಿದ್ರಿಸುತ್ತಿದ್ದರು! ದಾರಿ ಮಧ್ಯೆ ಸಿಗುವ ಹೋಟೆಲ್‌ನಲ್ಲಿ ಊಟ ಮಾಡುತ್ತಿದ್ದರು. ಅವರ ಜೀವನಶೈಲಿ, ಉಡುಪು, ಆಹಾರ ಅತ್ಯಂತ ಸರಳವಾಗಿದ್ದವು. ಅವರ ಸರಳ ಜೀವನ, ಬಡವರು, ಕಾರ್ಮಿಕರು, ದಮನಿತರ ಪರ ಹೋರಾಟ ನನ್ನ ಮೇಲೆ ಅಗಾಧವಾದ ಪರಿಣಾಮ ಬೀರಿದ್ದವು. 1996ರಲ್ಲಿ ಸಮತಾ ಪಕ್ಷದಿಂದ ಕಲಬುರ್ಗಿ ಮತಕ್ಷೇತ್ರದಿಂದ ಸ್ಪರ್ಧಿಸಿದ್ದೆ. ಆಗ ನನ್ನ ಪರವಾಗಿ ಪ್ರಚಾರ ಮಾಡಿದ್ದರು. ಆದರೆ, ಆ ಚುನಾವಣೆಯಲ್ಲಿ ಪರಾಭವಗೊಂಡೆ.

ಒಂದು ದಿನ ಶಿವಮೊಗ್ಗ ಜಿಲ್ಲೆಯ ಸಾಗರದ ಅತಿಥಿಗೃಹದಲ್ಲಿ ತಂಗಿದ್ದೆವು. ಆಗ ಕಾಗೋಡು ತಿಮ್ಮಪ್ಪನವರು ಸಚಿವರಾಗಿದ್ದರು. ಅವರು ಅತಿಥಿಗೃಹಕ್ಕೆ ಬರುತ್ತಿದ್ದಾರೆ ಎಂಬ ವಿಷಯ ತಿಳಿಯಿತು. ಆಗ ನನ್ನನ್ನು ಕರೆದ ಜಾರ್ಜ್, ‘ಮಂತ್ರಿಗಳು ಬರುತ್ತಿದ್ದಾರೆ. ತಕ್ಷಣ ಈ ಕೋಣೆಯನ್ನು ಖಾಲಿ ಮಾಡಿ ಬೇರೆ ಕಡೆಗೆ ಹೋಗೋಣ’ ಎಂದು ಹೇಳಿದ್ದರು. ಈ ಮಾತನ್ನು ಅತಿಥಿಗೃಹದ ಮೇಲ್ವಿಚಾರಕ ಕೇಳಿಸಿಕೊಂಡು ಕಾಗೋಡು ತಿಮ್ಮಪ್ಪ ಅವರಿಗೆ ಮುಟ್ಟಿಸಿದ್ದನು.

‘ತಾವು ಅತಿಥಿಗೃಹಕ್ಕೆ ಬರುವುದರಿಂದ ಜಾರ್ಜ್ ಅವರು ಕೋಣೆ ಖಾಲಿ ಮಾಡುವುದಾದರೆ ಅಲ್ಲಿಗೆ ಹೋಗುವುದೇ ಇಲ್ಲ, ಅವರೇ ಇರಲಿ’ ಎಂದು ಕಾಗೋಡು ತಿಮ್ಮಪ್ಪ ಅವರು ಮೇಲ್ವಿಚಾರಕನ ಬಳಿ ಹೇಳಿದ್ದರು. ಹೀಗೆ ಜಾರ್ಜ್ ಬಗ್ಗೆ ಎಲ್ಲರಿಗೂ ಅಪಾರ ಗೌರವವಿತ್ತು.

ಇಂದಿರಾಗಾಂಧಿ ಅವರು ಜಾರ್ಜ್ ಅವರಿಗೆ ಬಹಳಷ್ಟು ಕಿರುಕುಳ ನೀಡಿದರು. ಅವರು ಕೊಟ್ಟಷ್ಟು ಕಿರುಕುಳವನ್ನು ಇನ್ನಾರೂ ಕೊಟ್ಟಿಲ್ಲ. ಅವರನ್ನು ಬಂಧಿಸಿ ಜೈಲಿಗೆ ಅಟ್ಟಿದರು.ಆರೇಳು ವರ್ಷಗಳ ಹಿಂದೆ ನವದೆಹಲಿಗೆ ಹೋಗಿ ಆರೋಗ್ಯ ವಿಚಾರಿಸಿಕೊಂಡು ಬಂದಿದ್ದೆ. ಅದಾದ ಬಳಿಕ ಅವರ ಸಂಪರ್ಕವನ್ನು ಮಾಡಿರಲಿಲ್ಲ. ನಾನು ಹೋಗುತ್ತ, ಬರುತ್ತ ಇರಬೇಕಿತ್ತು ಅನಿಸುತ್ತಿದೆ. ಸ್ಥಳೀಯ ವಿಷಯಗಳಿಗೆ ಸೀಮಿತವಾಗುವುದು ಮತ್ತು ಬಹಳ ವರ್ಷಗಳವರೆಗೆ ಯಾರೊಂದಿಗೂ ಸಂಪರ್ಕ ಇಟ್ಟುಕೊಳ್ಳದಿರುವುದು ನನ್ನ ಮಧುರ ದೌರ್ಬಲ್ಯ. ನನ್ನನ್ನು ತುಂಬಾ ಪ್ರೀತಿಸುತ್ತಿದ್ದ ಅವರ ಅಗಲಿಕೆ ಅತ್ಯಂತ ನೋವು ತಂದಿದೆ.

(ಲೇಖಕ: ಕಾರ್ಮಿಕ ಪರ ಹೋರಾಟಗಾರ, ಮಾಜಿ ಸಚಿವ)

ನಿರೂಪಣೆ: ಸುಭಾಸ ಎಸ್‌.ಮಂಗಳೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT