ಗೋವಾ–ತಮ್ನಾರ್ ಯೋಜನೆಯು ರಾಷ್ಟ್ರೀಯ ವಿತರಣಾ ಜಾಲದ ಯೋಜನೆಯಾಗಿದ್ದು, ಇದಕ್ಕೆ ಸಹಕಾರ ನೀಡಬೇಕು ಎಂದು ಪ್ರಧಾನಿಯವರು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದರು. ಮಹದಾಯಿ ಯೋಜನೆಗೆ ಅನುಮೋದನೆ ಕೊಟ್ಟರೆ ಗೋವಾ–ತಮ್ನಾರ್‌ಗೆ ಸಹಕಾರ ನೀಡುವುದಾಗಿ ಮುಖ್ಯಮಂತ್ರಿಯವರು ಪತ್ರ ಬರೆದು ಸ್ಪಷ್ಟಪಡಿಸಿದ್ದರು. ನಮ್ಮ ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ.ಈಶ್ವರ ಖಂಡ್ರೆ, ಅರಣ್ಯ ಸಚಿವ
ತಿರಸ್ಕೃತಗೊಂಡಿರುವ ಪ್ರಸ್ತಾವನೆಯು ಪರಿಶೀಲನೆ ಹೆಸರಿನಲ್ಲಿ ಮತ್ತೆ ಮತ್ತೆ ಮುನ್ನೆಲೆಗೆ ಬರುತ್ತಿರುವುದು ಕಳವಳಕಾರಿ. ಈಗಿರುವ ಪ್ರಸ್ತಾವನೆ ಪ್ರಕಾರ ಉದ್ದೇಶಿತ ಮಾರ್ಗವು ಹುಲಿ ಕಾರಿಡಾರ್, ಕಾಳಿ ಹುಲಿ ಮೀಸಲಿನ ಪರಿಸರ ಸೂಕ್ಷ್ಮ ಪ್ರದೇಶ, ದಾಂಡೇಲಿ ಅಭಯಾರಣ್ಯ ಹಾಗೂ ದಾಂಡೇಲಿ ಆನೆಧಾಮದ ಮೂಲಕ ಹಾದುಹೋಗಲಿದ್ದು 72000 ಕ್ಕೂ ಹೆಚ್ಚಿನ ಮರಗಳನ್ನು ಕಡಿಯಬೇಕಾಗುತ್ತದೆ. ಯೋಜನೆಯಿಂದ ಪಶ್ಚಿಮ ಘಟ್ಟದ ಜೀವಸಂಕುಲಕ್ಕೆ ಭಾರಿ ಹಾನಿಯಾಗಲಿದೆ. ಅರಣ್ಯ ಇಲಾಖೆ ಗುರುವಾರ ಬಿಡುಗಡೆ ಮಾಡಿರುವ ವರದಿ ಪ್ರಕಾರ, ರಾಜ್ಯದಲ್ಲಿ ಕಾಳಿ ಸೇರಿದಂತೆ ವಿವಿಧ ಹುಲಿ ಮೀಸಲು ಅರಣ್ಯಗಳಲ್ಲಿ ಹುಲಿಗಳ ಸಂಖ್ಯೆ ಕುಸಿತವಾಗಿದೆ. ಇಂತಹ ಸನ್ನಿವೇಶದಲ್ಲಿ ಯೋಜನೆಗೆ ಅನುಮತಿ ನೀಡಿದಲ್ಲಿ ಹುಲಿಗಳಿಗೆ ಅತ್ತ್ಯುತ್ತಮ ಆವಾಸಸ್ಥಾನಗಳಾಗಲು ಎಲ್ಲ ಅವಕಾಶ ಇರುವ ಬೆಳಗಾವಿ ಹಾಗೂ ಹಳಿಯಾಳ ವಿಭಾಗದ ಅರಣ್ಯ ಪ್ರದೇಶಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಯೋಜನೆಯನ್ನು ಈ ಕೂಡಲೇ ತಿರಸ್ಕರಿಸಬೇಕು.ಗಿರಿಧರ ಕುಲಕರ್ಣಿ, ವನ್ಯಜೀವಿ ಸಂರಕ್ಷಣಾವಾದಿ
ತಲೆಮಾರುಗಳಿಂದ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ವನವಾಸಿಗಳಿಗೆ ಅನುಕೂಲವಾಗುವ ಮೊಬೈಲ್ ಟವರ್, ರಸ್ತೆ ಬದಿ ಭೂಗರ್ಭದಲ್ಲಿ ಒಎಫ್‌ಸಿ ಕೇಬಲ್ ಅಳವಡಿಕೆ, ರಸ್ತೆ, ಕುಡಿಯುವ ನೀರಿನ ಚಿಕ್ಕ ಪುಟ್ಟ ಯೋಜನೆಗಳಿಗೆ ಸಲ್ಲಿಸುವ ಪ್ರಸ್ತಾವನೆಗಳನ್ನು ಅರಣ್ಯ ನಾಶದ ನೆಪ ಹೇಳಿ ಅರಣ್ಯ ಇಲಾಖೆ ತಿರಸ್ಕಾರ ಮಾಡುತ್ತದೆ. ವನವಾಸಿಗಳನ್ನು ಪುನರ್ವಸತಿ ನೆಪದಲ್ಲಿ ಸ್ಥಳಾಂತರ ಮಾಡಲಾಗುತ್ತದೆ. ನಂತರ ಇದನ್ನೇ ದೊಡ್ಡ ಸಾಧನೆ ಎಂಬಂತೆ ಅರಣ್ಯ ಇಲಾಖೆ ಬಿಂಬಿಸಿಕೊಳ್ಳುತ್ತದೆ. ಆದರೆ, ಅರಣ್ಯ ಪ್ರದೇಶಗಳಿಗೆ ಶಾಶ್ವತ ಹಾನಿ ಮಾಡುವ ಗಣಿಗಾರಿಕೆ, ಹೆದ್ದಾರಿ, ಜಲ ವಿದ್ಯುತ್ ಅಂತಹ ದೊಡ್ಡ ದೊಡ್ಡ ಯೋಜನೆಗಳಿಗೆ ಇದೇ ಅರಣ್ಯ ಇಲಾಖೆ ಒಪ್ಪಿಗೆ ನೀಡುತ್ತದೆ. ಕರ್ನಾಟಕದಲ್ಲಂತೂ ಇತ್ತೀಚೆಗೆ ಇದು ಮಿತಿ ಮೀರಿದೆ. ಮುಖ್ಯಮಂತ್ರಿಗಳು ಈ ಕೂಡಲೇ ಮಧ್ಯಪ್ರವೇಶ ಮಾಡಿ ವನವಾಸಿಗಳ ಸ್ಥಳಾಂತರ ಪ್ರಕ್ರಿಯೆಯನ್ನು ಕೈಬಿಡಲು ಸೂಚಿಸಬೇಕು ಹಾಗೂ ಅರಣ್ಯಕ್ಕೆ ಹಾನಿ ಉಂಟು ಮಾಡುವ ಯೋಜನೆಗಳನ್ನು ತಿರಸ್ಕರಿಸಲು ಕ್ರಮ ವಹಿಸಬೇಕು. ವನವಾಸಿಗಳಿಗೆ ಮೂಲಸೌಕರ್ಯ ಒದಗಿಸಲು ಅರಣ್ಯ ಇಲಾಖೆಗೆ ಸೂಚನೆ ನೀಡಬೇಕು.ರಾಘವೇಂದ್ರ, ಆರ್‌ಟಿಐ ಕಾರ್ಯಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.