ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಲ ಗರ್ಭಿಣಿಯರ ಪ್ರಕರಣ ತಡೆಗೆ ಸರ್ಕಾರ ಕ್ರಮ: ಸಚಿವ ಎಚ್‌.ಕೆ.ಪಾಟೀಲ

Published 22 ಆಗಸ್ಟ್ 2024, 16:08 IST
Last Updated 22 ಆಗಸ್ಟ್ 2024, 16:08 IST
ಅಕ್ಷರ ಗಾತ್ರ

ಬೆಂಗಳೂರು: ಬಾಲಕಿಯರು ಗರ್ಭಧರಿಸುವುದನ್ನು ತಡೆಗಟ್ಟಲು ವಿವಿಧ ಇಲಾಖೆಗಳಿಗೆ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿಗದಿಪಡಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

ಬಾಲ ಗರ್ಭಿಣಿಯರ ಪ್ರಕರಣಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸಂಬಂಧ ಚರ್ಚೆ ನಡೆಸಲಾಯಿತು. ಇದಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳಿಗೆ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿಗದಿಪಡಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು ಎಂದರು.

18 ವರ್ಷಗಳ ಒಳಗಿನ ಬಾಲಕಿಯರು ಗರ್ಭಧರಿಸಿದಾಗ ಅವರ ರಕ್ಷಣೆ, ವೈದ್ಯಕೀಯ ನೆರವು ಮತ್ತು ಮನೋಸ್ಥೈರ್ಯ ಹೆಚ್ಚಿಸಲು ಮತ್ತು ಕಾನೂನಾತ್ಮಕ ಕ್ರಮ ಜರುಗಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಮಧ್ಯೆ ಸಮನ್ವಯದ ಅಗತ್ಯವೂ ಇದೆ. ಇದಕ್ಕಾಗಿ ನಿಯಮಾವಳಿ ರೂಪಿಸಲಾಗುವುದು ಎಂದು ಹೇಳಿದರು.

ಗ್ರಾಮಗಳಿಗೆ ಸೌರ ಬೀದಿ ದೀಪ:

‘ಹೊಂಬೆಳಕು’ ಯೋಜನೆಯಡಿ 50 ಗ್ರಾಮಗಳಲ್ಲಿ ₹25 ಕೋಟಿ ವೆಚ್ಚದಲ್ಲಿ ಸೌರ ಬೀದಿ ದೀಪ ಅಳವಡಿಸಲು ಒಪ್ಪಿಗೆ ನೀಡಲಾಗಿದೆ. ಈ ವರ್ಷ ₹10 ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದರು.

ಕ್ರಯಪತ್ರ ಕಾಲಾವಧಿ ಇಳಿಕೆ:

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ವತಿಯಿಂದ ಲೀಸ್‌ ಕಂ ಸೇಲ್‌ ಆಧಾರದಲ್ಲಿ ಹಂಚಿಕೆಯಾದ ಮಳಿಗೆ ಮತ್ತು ನಿವೇಶನಗಳ ಕ್ರಯಪತ್ರ ನೀಡುವ ಕನಿಷ್ಠ ಕಾಲಾವಧಿ 10 ವರ್ಷಗಳಿಂದ 2 ವರ್ಷಗಳಿಗೆ ಇಳಿಸಲು ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದರು.

ಹಣಕಾಸು ಆಯೋಗಕ್ಕೆ ಜ್ಞಾಪನ ಪತ್ರ:

16 ನೇ ಕೇಂದ್ರ ಹಣಕಾಸು ಆಯೋಗಕ್ಕೆ ಜ್ಞಾಪನ ಪತ್ರವನ್ನು ಸಲ್ಲಿಸಲು ತೀರ್ಮಾನಿಸಲಾಗಿದ್ದು. ಜ್ಞಾಪನ ಪತ್ರವನ್ನು ಅಂತಿಮಗೊಳಿಸಲು ಮುಖ್ಯಮಂತ್ರಿಯರಿಗೆ ಅಧಿಕಾರ ನೀಡಲಾಗಿದೆ ಎಂದು ಪಾಟೀಲ ತಿಳಿಸಿದರು.

ಪ್ರಮುಖ ತೀರ್ಮಾನಗಳು

  • ₹85 ಕೋಟಿ ವೆಚ್ಚದಲ್ಲಿ 592 ಅಂಗನವಾಡಿ ಕೇಂದ್ರಗಳು ನಿರ್ಮಾಣ

  • ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದ ವಸತಿ ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳಿಗೆ ಆಹಾರ ಪೂರೈಕೆ ಮಾಡಲು ಜಿಲ್ಲಾವಾರು ಟೆಂಡರ್‌ ಆಹ್ವಾನಿಸಲು ಒಪ್ಪಿಗೆ

  • ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಚಿಕ್ಕಲಪರ್ವಿ ಗ್ರಾಮದ ಹತ್ತಿರ ತುಂಗಭದ್ರಾ ನದಿಗೆ ಅಡ್ಡಲಾಗಿ ₹397.50 ಕೋಟಿ ವೆಚ್ಚದಲ್ಲಿ ಬ್ರಿಡ್ಜ್‌ ಕಂ ಬ್ಯಾರೇಜ್‌ ನಿರ್ಮಿಸಲು ಒಪ್ಪಿಗೆ

  • ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕಾರ್ಯಕ್ಷಮತೆ ಹೆಚ್ಚಿಸುವ ಮತ್ತು ವೇಗಗೊಳಿಸುವ ಕೇಂದ್ರ ಸರ್ಕಾರದ(ಆರ್‌ಎಎಂಪಿ) ಕಾರ್ಯಕ್ರಮವನ್ನು ಜಾರಿಗೊಳಿಸಲು ಅನುಮೋದನೆ. ಇದರಲ್ಲಿ ಕೇಂದ್ರದ ಪಾಲು ₹118.72 ಕೋಟಿ ಮತ್ತು ರಾಜ್ಯದ ಪಾಲು ₹147.87 ಕೋಟಿ

  • ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರ 5 ಹುದ್ದೆಗಳನ್ನು ಇಲಾಖೆಯ ಹೆಚ್ಚುವರಿ ನಿರ್ದೇಶಕರೆಂದು ಉನ್ನತೀಕರಿಸಿ ಹೆಚ್ಚುವರಿ ನಿರ್ದೇಶಕರ ವೃಂದ ಬಲವನ್ನು 13 ರಿಂದ 18 ಕ್ಕೆ ಹೆಚ್ಚಿಸಲು ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಸೇವೆ(ತಿದ್ದುಪಡಿ) ನಿಯಮಗಳು 2024ಕ್ಕೆ ಅನುಮೋದನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT