ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ತನಿಖೆಗೆ ಮಂಜೂರಾತಿ ನೀಡಿರುವ ರಾಜ್ಯಪಾಲರ ಕ್ರಮ ವಿವೇಚನಾ ಯುಕ್ತವಾಗಿಯೇ ಇದೆ ಮತ್ತು ಈ ಪ್ರಕರಣದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನೀಡಿರುವ ಸಲಹೆಯನ್ನು ರಾಜ್ಯಪಾಲರು ಪರಿಗಣಿಸಬೇಕಾಗಿಲ್ಲ’ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೈಕೋರ್ಟ್‌ನಲ್ಲಿ ಪ್ರಬಲವಾಗಿ ಪ್ರತಿಪಾದಿಸಿದರು.
ಪ್ರಕರಣದ ತನಿಖೆಗೆ ರಾಜ್ಯಪಾಲರು ನೀಡಿರುವ ಆದೇಶವನ್ನು ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆಯನ್ನು, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಶನಿವಾರ ಮುಂದುವರಿಸಿದರು.
ವಿಚಾರಣೆ ವೇಳೆ ರಾಜ್ಯಪಾಲರ ಪರ ಸುದೀರ್ಘ ವಾದ ಮಂಡಿಸಿದ ಮೆಹ್ತಾ ಅವರು, ‘ರಾಜ್ಯಪಾಲರ ನಿರ್ಧಾರವು ವಾಸ್ತವಿಕ ಅಂಶಗಳನ್ನು ಆಧರಿಸಿದ, ಅಳೆದೂ ತೂಗಿ ಕೈಗೊಂಡ ನಿರ್ಧಾರವಾಗಿದೆ. ಮತ್ತು ತನಿಖೆಗೆ ಮಂಜೂರಾತಿ ನೀಡಬಾರದು ಎಂದು ಶಿಫಾರಸು ಮಾಡಿದ್ದ ಸಂಪುಟದ ತೀರ್ಮಾನವನ್ನು ತಿರಸ್ಕರಿಸಿರುವುದಕ್ಕೆ ರಾಜ್ಯಪಾಲರು ಸಕಾರಣ ನೀಡಿರುವುದು ಗಮನಾರ್ಹ’ ಎಂದರು.
‘ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ 17ಎ ಕಲಂ ಎಲ್ಲಾ ಸರ್ಕಾರಿ ಸೇವಕರಿಗೆ ಅನ್ವಯಿಸುತ್ತದೆ. ಪ್ರಕರಣದಲ್ಲಿನ ದೂರುದಾರರೂ ಆದ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ನೀಡಿದ ದೂರನ್ನು ರಾಜ್ಯಪಾಲರು ಸಂಪೂರ್ಣ ಅಧ್ಯಯನ ಮಾಡಿದ್ದಾರೆ. ಬಳಿಕವೇ, ಈ ಪ್ರಕರಣದಲ್ಲಿ ಅಧಿಕಾರ ದುರ್ಬಳಕೆ ಆಗಿದೆ ಎಂಬುದನ್ನು ಮನಗಂಡು ಮುಖ್ಯಮಂತ್ರಿಗೆ ಷೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ’ ಎಂದರು.
‘ಮುಖ್ಯ ಕಾರ್ಯದರ್ಶಿ ಪ್ರಕರಣದ ಕುರಿತು ವಿವರ ನೀಡಿದ್ದು, ಈ ವಿವರಣೆಯನ್ನು ಅಡ್ವೊಕೇಟ್ ಜನರಲ್ ಅವರಿಗೆ ರವಾನಿಸಲಾಗಿದ್ದು, ಅಡ್ವೊಕೇಟ್ ಜನರಲ್ ಅವರು ತಮ್ಮ ಅಭಿಪ್ರಾಯ ಮತ್ತು ತೀರ್ಪನ್ನು ಇದರಲ್ಲಿ ಅಡಕಗೊಳಿಸಿದ್ದು... ಹೀಗೆ ಈ ಎಲ್ಲಾ ಸುತ್ತುಗಳ ನಂತರವೇ ಪ್ರಕರಣವನ್ನು ಸಚಿವ ಸಂಪುಟದ ಮುಂದೆ ಇರಿಸಿಕೊಂಡು ಸುದೀರ್ಘವಾದ 90 ಪುಟಗಳ ಕಡತ ಸಿದ್ಧ ಮಾಡಿರುವುದನ್ನು ನೋಡಿದರೆ, ಬಹುಶಃ ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ಗಾತ್ರದ ಸಂಪುಟ ನಿರ್ಣಯದ ಕಡತ ಇದೇ ಇರಬೇಕು’ ಎಂದು ತುಷಾರ್ ಮೆಹ್ತಾ ವ್ಯಂಗ್ಯವಾಡಿದರು.
‘ರಾಜ್ಯಪಾಲರು ತನಿಖೆಗೆ ಅಸ್ತು ಎಂದಿರುವ ಆರು ಪುಟಗಳ ಆದೇಶದಲ್ಲಿ ಎಲ್ಲವನ್ನೂ ಕೂಲಂಕಷವಾಗಿ ಪರಿಗಣಿಸಲಾಗಿದೆ. ಅದೊಂದು ವಿವೇಚನಾಯುತ ನಿರ್ಧಾರ ಎಂಬುದರಲ್ಲಿ ಅನುಮಾನ ಬೇಡ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಕಲಂ 17ಎಗೆ ಪ್ರದತ್ತವಾದ ಅಧಿಕಾರ ಎಂದರೆ ಆಡಳಿತಾತ್ಮಕ ಜಾರಿ ಅದರ ಮುಖ್ಯ ಲಕ್ಷ್ಯ. ಹೀಗಾಗಿ, ಈ ಕಲಂನ ಅಡಿಯಲ್ಲಿ ಅನುಮತಿ ನೀಡುವಾಗ ಆರೋಪಿಯ ವಾದವನ್ನು ಆಲಿಸಬೇಕಿಲ್ಲ. ಅಂತೆಯೇ, 17ಎ ಮತ್ತು 19ರ ಹಂತದಲ್ಲಿ ಸ್ವಾಭಾವಿಕ ನ್ಯಾಯತತ್ವ ಪರಿಪಾಲನೆ ಅನ್ವಯ ಅಗತ್ಯವೇ ಇಲ್ಲ’ ಎಂದರು.
‘ಫಿರ್ಯಾದುದಾರರಾದ ಟಿ.ಜೆ.ಅಬ್ರಹಾಂ, ಸ್ನೇಹಮಯಿ ಕೃಷ್ಣ ಮತ್ತು ಪ್ರದೀಪ್ ಕುಮಾರ್ ಅವರ ದೂರುಗಳ ವಿಚಾರವನ್ನು ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಕ್ಕೆ ತಂದಿಲ್ಲ ಎಂಬ ಅಂಶವನ್ನು ಪೂರ್ವಗ್ರಹಪೀಡಿತ ಭಾವನೆಯಿಂದ ನೋಡಲು ಸಾಧ್ಯವಿಲ್ಲ’ಎಂದ ಮೆಹ್ತಾ ಅವರು, ‘ಮುಖ್ಯಮಂತ್ರಿಯನ್ನು ಹೊರಗಿರಿಸಿ ಉಪ ಮುಖ್ಯಮಂತ್ರಿ ನೇತೃತ್ವದಲ್ಲಿ ಕೈಗೊಂಡ ಸಂಪುಟ ಸಭೆಯ ನಿರ್ಣಯ ಮತ್ತು ಸಲಹೆ ಯಾವ ಕಾರಣಕ್ಕಾಗಿ ಪಕ್ಷಪಾತದಿಂದ ಕೂಡಿದೆ ಎಂಬುದಕ್ಕೆ ರಾಜ್ಯಪಾಲರು ತಕ್ಕುದಾದ ಟಿಪ್ಪಣಿ ಕಾಣಿಸಿದ್ದಾರೆ’ ಎಂದು ರಾಜ್ಯಪಾಲರ ನಡೆಯನ್ನು ಬಲವಾಗಿ ಸಮರ್ಥಿಸಿಕೊಂಡರು.
‘ಮುಖ್ಯಮಂತ್ರಿ ಸಲ್ಲಿಸಿರುವ ಆಕ್ಷೇಪಣೆಯಲ್ಲಿ ಮುಖ್ಯ ಕಾರ್ಯದರ್ಶಿ, ಅಡ್ವೊಕೇಟ್ ಜನರಲ್ ಮತ್ತು ಸಂಪುಟದಲ್ಲಿನ ಅಂಶಗಳನ್ನು ನಕಲು ಮಾಡಿ ಅಡಕಗೊಳಿಸಲಾಗಿದೆ. ಈಗ ನ್ಯಾಯಾಲಯಕ್ಕೆ ಸಲ್ಲಿಸಿರುವ ಈ ಅರ್ಜಿಯಲ್ಲಿಯೂ ಅದೇ ಪುಟಗಳು, ಅದೇ ಖಂಡಿಕೆಗಳನ್ನು ಯಥಾವತ್ ಸೇರ್ಪಡೆ ಮಾಡಲಾಗಿದೆ’ ಎಂಬ ಅಂಶವನ್ನು ತುಷಾರ್ ಮೆಹ್ತಾ ನ್ಯಾಯಪೀಠದ ಗಮನಕ್ಕೆ ತಂದರು.
ಮಣಿಂದರ್ ಸಿಂಗ್ ವಾದ: ‘ಮುಡಾ ಅಭಿವೃದ್ಧಿಪಡಿಸಲು ವಶಪಡಿಸಿಕೊಂಡಿರುವ ಭೂಮಿಯು ಪುನಃ ಕೃಷಿ ಭೂಮಿಯಾಗಿರುವುದೇ ಒಂದು ಮಂತ್ರವಿದ್ಯೆಯಂತಿದೆ’ ಎಂದು ಸ್ನೇಹಮಯಿ ಕೃಷ್ಣ ಪರ ವಾದ ಮಂಡಿಸಿದ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಮಣಿಂದರ್ ಸಿಂಗ್ ಕಟಕಿಯಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.