ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿಯಲ್ಲಿ ಸೀಲ್‌ಡೌನ್‌ ಇಲ್ಲ, ನಿಯಮ ಉಲ್ಲಂಘಿಸಿದರೆ ಜೈಲಿಗೆ: ಕಾರಜೋಳ

Last Updated 11 ಏಪ್ರಿಲ್ 2020, 10:05 IST
ಅಕ್ಷರ ಗಾತ್ರ

ಕಲಬುರ್ಗಿ:‘ನಗರ ಅಥವಾ ಜಿಲ್ಲೆಯನ್ನು ಸೀಲ್‌ಡೌನ್‌ ಮಾಡುವ ಕುರಿತು ರಾಜ್ಯ ಸರ್ಕಾರ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಆದರೆ, ಲಾಕ್‌ಡೌನ್ ಅನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು. ಅನವಶ್ಯಕವಾಗಿ ಮನೆಯಿಂದ ಹೊರಬಂದವರನ್ನು ಮುಲಾಜಿಲ್ಲದೇ ಜೈಲಿಗೆ ಹಾಕಲಾಗುವುದು’ ಎಂದು ಉಪಮುಖ್ಯಮಂತ್ರಿಯೂ ಆದ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಎಚ್ಚರಿಸಿದರು.

‘ಕಲಬುರ್ಗಿಯಲ್ಲಿ ನಿಗದಿತ ಪರೀಧಿಯಲ್ಲಿ ಕೊರೊನಾ ಹರಡುತ್ತಿದೆ. ಹಾಗಾಗಿ, ಸೀಲ್‌ಡೌನ್‌ ಮಾಡುವ ನಿರ್ಧಾರವನ್ನು ಸದ್ಯಕ್ಕೆ ತೆಗೆದುಕೊಂಡಿಲ್ಲ. ಏ. 14 ನಂತರ ಕೂಡ ಮತ್ತೊಂದು ವಾರ ಲಾಕ್‌ಡೌನ್‌ ಮುಂದುವರಿಸುತ್ತೇವೆ. ಅಷ್ಟರೊಳಗೆ ಪರಿಸ್ಥಿತಿ ಹತೋಟಿಗೆ ಬಂದರೆ ಒಳಿತು; ಇಲ್ಲದಿದ್ದರೆ ಕೆಲವು ‘ಅನಿವಾರ್ಯ’ ಕ್ರಮ ಕೈಗೊಳ್ಳಲು ಸರ್ಕಾರ ಹಿಂದೆ– ಮುಂದೆ ನೋಡುವುದಿಲ್ಲ’ ಎಂದು ಅವರು ನಗರದಲ್ಲಿ ಶನಿವಾರ ಮಾಧ್ಯಮದವರಿಗೆ ತಿಳಿಸಿದರು.

‘ಸದ್ಯ ಹೊರಗಿನಿಂದ ಬಂದವರು, ದೆಹಲಿಯ ತಬ್ಲೀಗ್‌ ಸಭೆಯಲ್ಲಿ ಪಾಲ್ಗೊಂಡವರು, ಸೋಂಕಿತರ ನೇರ ಸಂಪರ್ಕ ಹೊಂದಿದವರು ಯಾರೂ ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ತಪಾಸಣೆಗೆ ಒಳಗಾಗುತ್ತಿಲ್ಲ. ಜಿಲ್ಲಾಡಳಿತ ಅಧಿಕಾರಿಗಳೇ ಮನೆಮನೆಗೆ ನುಗ್ಗಿ ಹುಡುಕುವ ಅನಿವಾರ್ಯ ಬಂದಿದೆ. ಜನರು ಸಹಕಾರ ನೀಡದ ಕಾರಣಕ್ಕೆ ನಗರದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಲೂ ಕಾಲ ಮಿಂಚಿಲ್ಲ, ಪರಿಸ್ಥಿತಿ ನಿಮ್ಮ ಕೈಯಲ್ಲೇ ಇದೆ. ಸ್ವಯಂ ಪ್ರೇರಣೆಯಿಂದ ಬಂದು ಸತ್ಯ ಹೇಳಿಕೊಂಡು, ರೋಗವನ್ನು ಹೋಗಲಾಡಿಸಲು ಮುಂದಾಗಬೇಕು’ ಎಂದೂ ಅವರು ಜನರಿಗೆ ಮನವಿ ಮಾಡಿದರು.

‘ವಿದೇಶ, ಹೊರರಾಜ್ಯ, ಹೊರ ಜಿಲ್ಲೆಗಳಿಂದ ಕಲಬುರ್ಗಿ ಪ್ರವೇಶಿಸಿದ 31,518 ಮಂದಿಯನ್ನು ಈವರೆಗೂ ಪತ್ತೆ ಮಾಡಲಾಗಿದೆ. ಎಲ್ಲರ ಮೇಲೂ ನಿಗಾ ವಹಿಸಲಾಗಿದೆ. ಇಷ್ಟಾದ ಮೇಲೂ ಯಾರಾದರೂ ಸುಳ್ಳು ಹೇಳಿ, ತಪ್ಪಿಸಿಕೊಂಡು ಕುಳಿತಿದ್ದರೆ ಅವರ ಮೇಲೆ ‘ದೇಶದ್ರೋಹ’ ಪ್ರಕರಣ ದಾಖಲಿಸಬೇಕು. ಜತೆಗೆ, ಲಾಕ್‌ಡೌನ್‌ ನಿಯಮ ಮುರಿಯುವವರು ಯಾರೇ ಆಗಿದ್ದರೂ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟಬೇಕು. ಈ ನಿಮಯವನ್ನು ಏ. 14ರವರೆಗೂ ಕಾಯದೇ ಶನಿವಾರ (ಏ. 11)ದಿಂದಲೇ ಜಾರಿಗೆ ತರಬೇಕು’ ಎಂದೂ ಕಾರಜೋಳ ಅವರು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT