ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ವರ್ಷದಿಂದ ಬೈಸಿಕಲ್‌ ವಿತರಣೆಗೆ ಪ್ರಯತ್ನ: ಮಧು ಬಂಗಾರಪ್ಪ

Published 7 ಡಿಸೆಂಬರ್ 2023, 16:21 IST
Last Updated 7 ಡಿಸೆಂಬರ್ 2023, 16:21 IST
ಅಕ್ಷರ ಗಾತ್ರ

ವಿಧಾನಸಭೆ: ‘ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಉಚಿತವಾಗಿ ಬೈಸಿಕಲ್‌ ವಿತರಿಸಲು ಪ್ರಯತ್ನ ಮಾಡಲಾಗುವುದು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.

ಕಾಂಗ್ರೆಸ್‌ನ ಪ್ರದೀಪ್‌ ಈಶ್ವರ್ ಪ್ರಶ್ನೆಗೆ ಗುರುವಾರ ಉತ್ತರಿಸಿದ ಅವರು, ‘2019–2020ನೇ ಸಾಲಿನವರೆಗೂ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಬೈಸಿಕಲ್‌ ವಿತರಿಸಲಾಗಿತ್ತು. ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರ ಈ ಯೋಜನೆಯನ್ನು ಸ್ಥಗಿತಗೊಳಿಸಿತ್ತು. ಈ ಶೈಕ್ಷಣಿಕ ವರ್ಷದಲ್ಲಿ ಬೈಸಿಕಲ್‌ ವಿತರಣೆಗೆ ಅನುದಾನ ಒದಗಿಸಿಲ್ಲ’ ಎಂದರು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್‌ಗಳ ಮೂಲಕ ಶಾಲೆಗಳಿಗೆ ಹೋಗಲು ಉಚಿತ ಪಾಸ್‌ ವಿತರಿಸಲಾಗುತ್ತಿದೆ. ದೂರದ ಊರುಗಳ ಶಾಲೆಗಳಿಗೆ ತೆರಳುವ ಮಕ್ಕಳಿಗೆ ಕೇಂದ್ರ ಸರ್ಕಾರದ ಪ್ರಾಯೋಜಿತ ‘ಸಮಗ್ರ ಶಿಕ್ಷಣ ಕರ್ನಾಟಕ’ ಯೋಜನೆಯಡಿ ಆರು ತಿಂಗಳ ಅವಧಿಗೆ ಪ್ರತಿ ತಿಂಗಳಿಗೆ ₹600 ಸಾರಿಗೆ ಭತ್ಯೆ ನೀಡಲಾಗುತ್ತಿದೆ ಎಂದು ತಿಳಿಸಿದರು.

‘ಹಲವು ಹಳ್ಳಿಗಳಿಗೆ ಸರ್ಕಾರಿ ಬಸ್‌ಗಳ ಸೌಲಭ್ಯವೇ ಇಲ್ಲ. ಅಂತಹ ಹಳ್ಳಿಗಳ ಮಕ್ಕಳು ಶಾಲೆಗೆ ಹೋಗುವುದಕ್ಕೆ ಕಷ್ಟವಾಗುತ್ತಿದ್ದು, ಬೈಸಿಕಲ್‌ ವಿತರಣೆ ಯೋಜನೆಯನ್ನು ಪುನರಾರಂಭ ಮಾಡಬೇಕು’ ಎಂದು ಪ್ರದೀಪ್ ಈಶ್ವರ್‌ ಆಗ್ರಹಿಸಿದರು.

ಬೇಡಿಕೆಗೆ ದನಿಗೂಡಿಸಿದ ವಿರೋಧ ಪಕ್ಷದ ನಾಯಕ ಆರ್‌. ಅಶೋಕ, ‘ಬಸ್ಸಿನ ಕೊರತೆಯಿಂದ ಮಕ್ಕಳು ಶಾಲೆಯಿಂದ ಹೊರಗುಳಿಯುವುದನ್ನು ತಪ್ಪಿಸಲು ಉಚಿತವಾಗಿ ಬೈಸಿಕಲ್‌ ವಿತರಣೆ ಯೋಜನೆ ಜಾರಿಗೊಳಿಸಲಾಗಿತ್ತು. ಈಗ ಪುನರಾರಂಭ ಮಾಡಿದರೆ ಮಕ್ಕಳ ಸಮಸ್ಯೆ ಪರಿಹಾರವಾಗುತ್ತದೆ’ ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ನಮ್ಮ ಸರ್ಕಾರದ ಮೊದಲ ಬಜೆಟ್‌ನಲ್ಲಿ ಈ ಯೋಜನೆಗೆ ಅನುದಾನ ಮೀಸಲಿಟ್ಟಿಲ್ಲ. ಮುಂದಿನ ವರ್ಷ ಅನುದಾನ ಒದಗಿಸಿ, ಬೈಸಿಕಲ್‌ ವಿತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಚರ್ಚಿಸುತ್ತೇನೆ’ ಎಂದು ತಿಳಿಸಿದರು.

ಕೊಠಡಿ ನಿರ್ಮಾಣಕ್ಕೆ ₹500 ಕೋಟಿ: ಕಾಂಗ್ರೆಸ್‌ನ ಯು.ಬಿ. ಬಣಕಾರ್‌ ಪ್ರಶ್ನೆಗೆ ಉತ್ತರಿಸಿದ ಮಧು ಬಂಗಾರಪ್ಪ, ‘2020–21ರಿಂದ 2022–23ರವರೆಗೆ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 9,604 ಕೊಠಡಿಗಳ ನಿರ್ಮಾಣಕ್ಕೆ ₹1,297.68 ಕೋಟಿ ಒದಗಿಸಲಾಗಿತ್ತು. ಈವರೆಗೆ 894.50 ಕೋಟಿ ವೆಚ್ಚ ಮಾಡಲಾಗಿದೆ’ ಎಂದರು.

ಪ್ರಸಕ್ತ ವರ್ಷ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ₹500 ಕೋಟಿ ಒದಗಿಸಲು ಮುಖ್ಯಮಂತ್ರಿಯವರು ಒಪ್ಪಿಕೊಂಡಿದ್ದಾರೆ. ಅನುದಾನ ಲಭ್ಯವಾದ ಬಳಿಕ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT