ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿ.ಪಂ ಕ್ಷೇತ್ರ ಪುನರ್‌ ವಿಂಗಡಣೆ: 4 ವಾರಗಳ ಅಂತಿಮ ಗಡುವು ನೀಡಿದ ಹೈಕೋರ್ಟ್

ಚುನಾವಣೆ ವಿಳಂಬ ಸರಿಯಲ್ಲ: ಹೈಕೋರ್ಟ್‌
Published : 9 ನವೆಂಬರ್ 2023, 15:23 IST
Last Updated : 9 ನವೆಂಬರ್ 2023, 15:23 IST
ಫಾಲೋ ಮಾಡಿ
Comments

ಬೆಂಗಳೂರು: ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಅಂತಿಮವಾಗಿ ನಾಲ್ಕು ವಾರಗಳ ಗಡುವು ನೀಡಿದೆ.

ಈ ಸಂಬಂಧ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ‘ಜಿ.ಪಂ-ತಾ.ಪಂ ಕ್ಷೇತ್ರಗಳ ಪುನರ್‌ವಿಂಗಡಣೆ ಹಾಗೂ ಮೀಸಲಾತಿ ನಿಗದಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದನ್ನು ಪೂರ್ಣಗೊಳಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಈ ಹಿಂದೆಯೇ, ಅಂದರೆ, 2023ರ ಜೂನ್ 28ರಂದು 10 ವಾರಗಳ ಸಮಯ ನೀಡಿದ್ದೆವಲ್ಲಾ? ಇದೀಗ ಮತ್ತೆ ನಾಲ್ಕು ವಾರಗಳ ಕಾಲಾವಕಾಶ ಕೇಳುತ್ತೀದ್ದೀರಲ್ಲಾ’ ಎಂದು ಪ್ರಶ್ನಿಸಿತು.

‘ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳು ಸಾಂವಿಧಾನಿಕ ಸಂಸ್ಥೆಗಳಾಗಿವೆ. ಚುನಾವಣೆ ನಡೆಸದೇ ಅವುಗಳನ್ನು ಖಾಲಿ ಬಿಡುವುದು ಎಷ್ಟು ಸರಿ? ನಿಮ್ಮಚ ವಿಳಂಬ ಧೋರಣೆಗೆ ಸುಪ್ರೀಂ ಕೋರ್ಟ್‌ ಕೂಡಾ ಎರಡು ಬಾರಿ ಎಚ್ಚರಿಕೆ ನೀಡಿದೆಯಲ್ಲಾ? ಹೀಗಿದ್ದರೂ ತಡ ಮಾಡುತ್ತಿರುವ ನಿಮ್ಮ ನಡೆ ಸರಿಯಲ್ಲ. ಕ್ಷೇತ್ರಗಳ ಮರು ವಿಂಗಡಣೆ ಮತ್ತು ಮೀಸಲಾತಿ ನಿಗದಿಯ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಿ’ ಎಂದು ಸರ್ಕಾರಕ್ಕೆ ಮೌಖಿಕ ಸಲಹೆ ನೀಡಿತು.

ಇದಕ್ಕೆ ಉತ್ತರಿಸಿದ ಶಶಿಕಿರಣ ಶೆಟ್ಟಿ, ‘ಸರ್ಕಾರ ತಕ್ಷಣ ಚುನಾವಣೆ ನಡೆಸಲು ಪ್ರಯತ್ನಿಸುತ್ತದೆ’ ಎಂದು ಭರವಸೆ ನೀಡಿದರು.

ಆದರೆ, ಇದನ್ನು ಒಪ್ಪದ ನ್ಯಾಯಪೀಠ, ‘ಪ್ರಯತ್ನಿಸುತ್ತೇವೆ ಎನ್ನಲಾಗದು, ಚುನಾವಣೆ ನಡೆಸಬೇಕು. ಇದೇ ಕೊನೆಯ ಬಾರಿಯ ಕಾಲಾವಕಾಶ’ ಎಂದು ಸೂಚಿಸಿ ಡಿಸೆಂಬರ್ 19ಕ್ಕೆ ವಿಚಾರಣೆ ಮುಂದೂಡಿತು.

ರಾಜ್ಯ ಚುನಾವಣಾ ಆಯೋಗದ ಪರ ಹಾಜರಿದ್ದ ಹಿರಿಯ ವಕೀಲ ಕೆ.ಎನ್‌.ಫಣೀಂದ್ರ, ‘ಈ ಅರ್ಜಿ ವಿಚಾರಣೆ 2021ರ ಮಾರ್ಚ್‌ನಿಂದಲೂ ನಡೆಯುತ್ತಿದೆ. ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರ ಈಗಾಗಲೇ ಹಲವು ಬಾರಿ ಸಮಯ ತೆಗೆದುಕೊಂಡಿದೆ’ ಎಂದು ಮತ್ತೊಮ್ಮೆ ನ್ಯಾಯಪೀಠಕ್ಕೆ ಅರುಹಿದರು.

ಏನಿದು ಅರ್ಜಿ?: ಅವಧಿ ಮುಗಿದ ಜಿ.ಪಂ. ತಾ.ಪಂ.ಗಳಿಗೆ ನಿಗದಿತ ಸಮಯದಲ್ಲಿ ಚುನಾವಣೆ ನಡೆಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಮತ್ತು ತಾ.ಪಂ. ಹಾಗೂ ಜಿ.ಪಂ. ಕ್ಷೇತ್ರ ಮರು ವಿಂಗಡಣೆಗೆ ಸೀಮಾ ನಿರ್ಣಯ ಆಯೋಗ ರಚಿಸಿರುವುದನ್ನು ಪ್ರಶ್ನಿಸಿ ಈ ಪಿಐಎಲ್ ಸಲ್ಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT