ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

53 ಸಾವಿರ ಮಂದಿಗೆ ಒಲಿಯದ ಗೃಹಲಕ್ಷ್ಮಿ ಹಣ

ತಾಂತ್ರಿಕ ಕಾರಣದಿಂದ ಹಣ ಪಾವತಿಗೆ ಅಡ್ಡಿ; ಬ್ಯಾಂಕು, ಸೇವಾ ಕೇಂದ್ರಗಳಿಗೆ ಜನರ ಅಲೆದಾಟ
Published 23 ಸೆಪ್ಟೆಂಬರ್ 2023, 20:24 IST
Last Updated 23 ಸೆಪ್ಟೆಂಬರ್ 2023, 20:24 IST
ಅಕ್ಷರ ಗಾತ್ರ

ಹಾವೇರಿ: ರಾಜ್ಯ ಸರ್ಕಾರದ ‘ಗೃಹಲಕ್ಷ್ಮಿ’ ಯೋಜನೆಗೆ ನೋಂದಣಿ ಮಾಡಿಕೊಂಡ 53 ಸಾವಿರ ಫಲಾನುಭವಿಗಳ ಖಾತೆಗೆ ಹಣ ಸಂದಾಯವಾಗಿಲ್ಲ. ಹೀಗಾಗಿ, ಸೌಲಭ್ಯ ವಂಚಿತ ಜನ ಬ್ಯಾಂಕು, ಸೇವಾ ಕೇಂದ್ರಗಳಿಗೆ ನಿತ್ಯ ಅಲೆದಾಡುವಂತಾಗಿದೆ.

ರಾಜ್ಯದಲ್ಲಿ 1.33 ಕೋಟಿ ಪಡಿತರ ಚೀಟಿದಾರರಿದ್ದು, ‘ಗೃಹಲಕ್ಷ್ಮಿ’ಗೆ ಈವರೆಗೆ 1.14 ಕೋಟಿ (ಶೇ 85) ಜನರ ನೋಂದಣಿ ಆಗಿದೆ. ಹಾವೇರಿ (ಶೇ 90.10), ಮಂಡ್ಯ (ಶೇ 89.71) ಮತ್ತು ಚಾಮರಾಜನಗರ (ಶೇ 89.49) ಜಿಲ್ಲೆಗಳು ನೋಂದಣಿಯಲ್ಲಿ ಮುಂಚೂಣಿಯಲ್ಲಿವೆ.

‘ಯಾವ ಕಾರಣಕ್ಕೆ ಹಣ ಬಂದಿಲ್ಲ ಎಂಬುದು ತಿಳಿಯುತ್ತಿಲ್ಲ. ದುಡಿಮೆ ಬಿಟ್ಟು ನಿತ್ಯ ಬ್ಯಾಂಕು, ಸೇವಾ ಕೇಂದ್ರ, ಸಿಡಿಪಿಒ ಕಚೇರಿಗೆ ಅಲೆದಾಡಿ ಕಾಲು ಬಿದ್ದು ಹೋಗಿವೆ. ತಾಂತ್ರಿಕ ಸಮಸ್ಯೆಯಿಂದ ಹಣ ಬಂದಿಲ್ಲ ಎಂದು ಸೇವಾ ಕೇಂದ್ರದ ಸಿಬ್ಬಂದಿ ಹೇಳುತ್ತಾರೆ’ ಎಂದು ಹಾವನೂರು ಗ್ರಾಮದ ದುರ್ಗವ್ವ ಬನ್ನಿಮಟ್ಟಿ ಮತ್ತು ಹೊನ್ನವ್ವ ಕೆಂಗನಿಂಗಪ್ಪನವರ ಸಮಸ್ಯೆ ತೋಡಿಕೊಂಡರು.

ತಾಂತ್ರಿಕ ಕಾರಣ:

‘ಬ್ಯಾಂಕ್‌ ಖಾತೆ ಸಂಖ್ಯೆ ತಪ್ಪಾಗಿದ್ದರೆ, ಆಧಾರ್‌ ಸಂಖ್ಯೆ ಮತ್ತು ಮೊಬೈಲ್‌ ಸಂಖ್ಯೆ ಜೋಡಣೆ ಆಗಿರದಿದ್ದರೆ, ಬ್ಯಾಂಕ್‌ ಖಾತೆ ನಿಷ್ಕ್ರಿಯವಾಗಿದ್ದರೆ ಮತ್ತು ಬೇರೆ ಬೇರೆ ತಾಂತ್ರಿಕ ಕಾರಣಗಳಿಂದ ಹಣ ಪಾವತಿ ಆಗುವುದಿಲ್ಲ. ಹಣ ಸಿಗದಿರುವ ಜನರು ತಮ್ಮ ಬ್ಯಾಂಕ್‌ ಖಾತೆ ಮತ್ತು ದಾಖಲೆಗಳನ್ನು ಪುನರ್‌ ಪರಿಶೀಲಿಸಿಕೊಳ್ಳಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ತಿಳಿಸಿದರು. 

‘ಹಾವೇರಿ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 3.55 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದು, 2.87 ಲಕ್ಷ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲು ಕ್ರಮ ಕೈಗೊಂಡಿದ್ದೇವೆ. ‘ಅಕೌಂಟ್‌ ಸೀಡಿಂಗ್‌’ ಆಗಿರದ 14 ಸಾವಿರ ಫಲಾನುಭವಿಗಳಲ್ಲಿ ಶೇ 50ರಷ್ಟು ಮಂದಿಯ ಖಾತೆಗಳನ್ನು ಈಗಾಗಲೇ ಅಪ್‌ಡೇಟ್‌ ಮಾಡಿಸಿದ್ದೇವೆ. ಉಳಿದವರಿಗೂ ಹಂತ–ಹಂತವಾಗಿ ಹಣ ಪಾವತಿಯಾಗಲಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ ತಿಳಿಸಿದರು. 

ಹಣ ಪಾವತಿಯಾಗದೇ ಇರುವ ಫಲಾನುಭವಿಗಳು ಸಿಡಿಪಿಒ ಕಚೇರಿ ಸಂಪರ್ಕಿಸಿ ನಿರ್ದಿಷ್ಟ ಕಾರಣ ತಿಳಿಯಬಹುದು. ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಲಾಗುವುದು

-ರಘುನಂದನ ಮೂರ್ತಿ ಜಿಲ್ಲಾಧಿಕಾರಿ ಹಾವೇರಿ

ಎರಡು ವರ್ಷಗಳ ಹಿಂದೆ ನಮ್ಮ ಅತ್ತೆ ತೀರಿಹೋಗಿದ್ದು ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಿಸಿದ್ದೇನೆ. ಆದರೆ ‘ಗೃಹಲಕ್ಷ್ಮಿ’ಗೆ ಅರ್ಜಿ ಸಲ್ಲಿಸಲು ತಾಂತ್ರಿಕ ಕಾರಣ ಅಡ್ಡಿಯಾಗಿದೆ

-ನಿರ್ಮಲಾ ದೊಡ್ಡಮನಿ ದೂಪದಹಳ್ಳಿ ಹಿರೇಕೆರೂರು ತಾಲ್ಲೂಕು

ಪಡಿತರ ಚೀಟಿ ತಿದ್ದುಪಡಿಯಿಂದ ಸಮಸ್ಯೆ ‘ಮೃತರ ಹೆಸರು ತೆಗೆದುಹಾಕಲು ಹೊಸದಾಗಿ ಮದುವೆಯಾದವರ ಹೆಸರು ಸೇರಿಸಲು ಅತ್ತೆ ಬದಲು ಸೊಸೆಯನ್ನು ಪತಿಯ ಬದಲು ಪತ್ನಿಯನ್ನು ‘ಯಜಮಾನಿ’ ಎಂದು ನಮೂದಿಸಲು ಪಡಿತರ ಚೀಟಿಯಲ್ಲಿ ಸಾವಿರಾರು ಜನರು ತಿದ್ದುಪಡಿ ಮಾಡಿಸಿದ್ದಾರೆ. ಇಂಥವರಿಗೆ ಗೃಹಲಕ್ಷ್ಮಿ ಯೋಜನೆಗಾಗಿ ‘ಸೇವಾಸಿಂಧು’ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಪಡಿತರ ಚೀಟಿಯ ತಿದ್ದುಪಡಿ ಪೋರ್ಟಲ್‌ನಲ್ಲಿ ಅಪ್‌ಡೇಟ್‌ ಆಗದಿರುವುದೇ ಸಮಸ್ಯೆಗೆ ಕಾರಣ’ ಎಂದು ‘ಗ್ರಾಮ ಒನ್‌’ ಸೇವಾ ಕೇಂದ್ರದ ಸಿಬ್ಬಂದಿ ತಿಳಿಸಿದರು.

ಗೃಹಲಕ್ಷ್ಮಿ ಯೋಜನೆಯ ಅಂಕಿಅಂಶ 1.33 ಕೋಟಿ

– ಒಟ್ಟು ಪಡಿತರ ಚೀಟಿದಾರರು 1.14 ಕೋಟಿ–

ನೋಂದಣಿ ಮಾಡಿಕೊಂಡವರು 94.79 ಲಕ್ಷ –

ಮಂಜೂರಾತಿ ಪಡೆದ ಫಲಾನುಭವಿಗಳು 89.71 ಲಕ್ಷ –

ಫಲಾನುಭವಿಗಳ ಖಾತೆಗೆ ಹಣ ಜಮೆ ಆಗಿದೆ 53106– ಫಲಾನುಭವಿಗಳ ಖಾತೆಗೆ ಹಣ ಜಮೆ ಆಗಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT