ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ನಲ್ಲಿ ಹಾವೇರಿ ವಿದ್ಯಾರ್ಥಿ ಸಾವು: ನವೀನ್‌ ಮನೆಯಲ್ಲಿ ನೀರವ ಮೌನ

Last Updated 1 ಮಾರ್ಚ್ 2022, 15:54 IST
ಅಕ್ಷರ ಗಾತ್ರ

ಚಳಗೇರಿ (ಹಾವೇರಿ ಜಿಲ್ಲೆ): ಉಕ್ರೇನ್‌ನ ಕಾರ್ಕೀವ್‌ ನಗರದ ಬಳಿ ಮಂಗಳವಾರ ಬೆಳಿಗ್ಗೆ ನಡೆದ ರಷ್ಯಾ ಪಡೆಗಳ ಕ್ಷಿಪಣಿ ದಾಳಿಯಲ್ಲಿ ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮದ ಎಂಬಿಬಿಎಸ್‌ ವಿದ್ಯಾರ್ಥಿ ನವೀನ ಗ್ಯಾನಗೌಡರ್‌ (22) ಮೃತಪಟ್ಟಿದ್ದಾರೆ. ಮಗನ ಬರುವಿಕೆಗಾಗಿ ಎದುರು ನೋಡುತ್ತಿದ್ದ ತಂದೆ–ತಾಯಿಗೆ ಪುತ್ರನ ಸಾವಿನ ಸುದ್ದಿ ಬರಸಿಡಿಲು ಬಡಿದಂತಾಗಿದೆ.

ನವೀನ ಅವರು ಉಕ್ರೇನ್‍ನ ಕಾರ್ಕೀವ್‌ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ನಾಲ್ಕನೇ ವರ್ಷದ ಎಂಬಿಬಿಎಸ್‌ ವ್ಯಾಸಂಗ ಮಾಡುತ್ತಿದ್ದರು. ಅಗತ್ಯ ವಸ್ತು ಮತ್ತು ಆಹಾರವನ್ನು ತರಲು ಕಾಲೇಜಿನ ಬಂಕರ್‌ನಿಂದ ಸೂಪರ್‌ ಮಾರ್ಕೆಟ್‌ಗೆ ಹೋದ ಸಂದರ್ಭ ಕ್ಷಿಪಣಿ ದಾಳಿಗೆ ಬಲಿಯಾಗಿದ್ದಾರೆ.

ನವೀನ ಅವರ ಸ್ವಗ್ರಾಮ ಚಳಗೇರಿಯ ಮನೆಯಲ್ಲಿ ತಂದೆ ಶೇಖರಪ್ಪ ಗ್ಯಾನಗೌಡರ್‌ ಮತ್ತು ತಾಯಿ ವಿಜಯಲಕ್ಷ್ಮಿ ರೋದಿಸುತ್ತಿದ್ದ ದೃಶ್ಯ ಅಲ್ಲಿ ನೆರೆದಿದ್ದವರ ಕಣ್ಣುಗಳನ್ನು ಒದ್ದೆಯಾಗುವಂತೆ ಮಾಡಿತು. ಗ್ರಾಮಸ್ಥರು ಕೂಡ ಊರಿನ ಮಗನನ್ನು ಕಳೆದುಕೊಂಡೆವು ಎಂದು ಮಮ್ಮಲ ಮರುಗಿದರು.

ತಂದೆಗೆ ಕೊನೆಯ ಕರೆ

ಯುದ್ಧ ಘೋಷಣೆಯಾದ ನಂತರ ನವೀನ್‌ ಅವರು ಉಕ್ರೇನ್‌ನಿಂದ ಹಲವು ಬಾರಿ ತಂದೆಗೆ ಕರೆ ಮಾಡಿ ಉಕ್ರೇನ್‌ನಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಮಂಗಳವಾರ ಬೆಳಿಗ್ಗೆ ಕೂಡ ತಂದೆಗೆ ಕರೆ ಮಾಡಿದ್ದರು. ಆದರೆ, ತಂದೆ ಕಾರಣಾಂತರದಿಂದ ಕರೆ ಸ್ವೀಕರಿಸಿರಲಿಲ್ಲ. ನಂತರ ಮಗನಿಗೆ ಕರೆ ಮಾಡಿದರೆ, ಸಂಪರ್ಕ ಸಾಧ್ಯವಾಗಲಿಲ್ಲ ಎಂದು ಕುಟುಂಬಸ್ಥರು ಮಾಹಿತಿ ನೀಡಿದರು.

ನವೀನ ಅವರು ಪ್ರಾಥಮಿಕ ಶಾಲೆಯಿಂದ ಪಿಯುಸಿವರೆಗೆ ನಂಜನಗೂಡಿನ ಜೆಎಸ್‌ಎಸ್‌ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದರು. ನಂತರ ಎಂಬಿಬಿಎಸ್‌ ಓದಲು ಉಕ್ರೇನ್‌ಗೆ ನಾಲ್ಕು ವರ್ಷಗಳ ಹಿಂದೆ ತೆರಳಿದ್ದರು. ಇವರೊಂದಿಗೆ ಚಳಗೇರಿ ಗ್ರಾಮದ ಅಮಿತ್‌ ವೈಶ್ಯರ ಮತ್ತು ಸುಮನ್‌ ವೈಶ್ಯರ ಕೂಡ ಉಕ್ರೇನ್‌ಗೆ ವ್ಯಾಸಂಗಕ್ಕೆ ತೆರಳಿದ್ದಾರೆ.

ನವೀನ ಅವರ ತಂದೆ ಶೇಖರಪ್ಪ ಗ್ಯಾನಗೌಡರ್‌ ಬಿ.ಇ. ಮೆಕ್ಯಾನಿಕಲ್‌ ಓದಿದ್ದು, ಅಬುದಾಬಿಯಲ್ಲಿ 10 ವರ್ಷ ಆಯಿಲ್‌ ಇಂಡಿಯನ್‌ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ. ನಂತರ ಮೈಸೂರು ಜಿಲ್ಲೆ ನಂಜನಗೂಡಿನ ಸೌತ್‌ ಇಂಡಿಯನ್‌ ಪೇಪರ್‌ ಮಿಲ್‌ನಲ್ಲಿ 15 ವರ್ಷ ಕೆಲಸ ಮಾಡಿ, ಎರಡು ವರ್ಷಗಳ ಹಿಂದೆ ಸ್ವಗ್ರಾಮ ಚಳಗೇರಿಗೆ ಹಿಂತಿರುಗಿದ್ದರು.

ಚಳಗೇರಿಯಲ್ಲಿದ್ದ ಪಿತ್ರಾರ್ಜಿತ ಆಸ್ತಿ ಎರಡು ಎಕರೆಯ ಜೊತೆಗೆ ಮತ್ತೆರಡು ಎಕರೆ ಜಮೀನು ಖರೀದಿಸಿ, ಅಡಿಕೆ ಬೆಳೆದು ಕುಟುಂಬದೊಂದಿಗೆ ವಾಸವಾಗಿದ್ದಾರೆ. ನವೀನ ಅವರ ಅಣ್ಣ ಹರ್ಷ ಗ್ಯಾನಗೌಡರ್‌ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದಾರೆ.

ಸಂಸದ ಶಿವಕುಮಾರ ಉದಾಸಿ ಮತ್ತು ಶಾಸಕ ಅರುಣಕುಮಾರ ಪೂಜಾರ ಅವರು ನವೀನ ಅವರ ಮನೆಗೆ ಭೇಟಿ ನೀಡಿ ‘ನಾವು ನಿರಂತರವಾಗಿ ನಿಮ್ಮ ಮಕ್ಕಳ ಜತೆ ಸಂಪರ್ಕದಲ್ಲಿದ್ದೇವೆ. ಅವರನ್ನು ಭಾರತಕ್ಕೆ ಕರೆತರಲು ಪ್ರಯತ್ನಿಸುತ್ತಿದ್ದೇವೆ. ಕೇಂದ್ರ ಸರ್ಕಾರ ಕೂಡ ಅಗತ್ಯ ಕ್ರಮ ಕೈಗೊಂಡಿದೆ. ನವೀನ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ಶೀಘ್ರ ತರಲು ಕ್ರಮ ಕೈಗೊಳ್ಳಲಾಗುವುದು’ ಎಂದು ಸಾಂತ್ವನದ ನುಡಿಗಳನ್ನಾಡಿದರು.

ನಮ್ಮ ದೇಶದಲ್ಲಿ ಸೀಟು ಸಿಗಲಿಲ್ಲ

‘ನವೀನ ಗ್ಯಾನಗೌಡರ್‌ ಪಿಯುಸಿಯಲ್ಲಿ ಶೇ 97ರಷ್ಟು ಅಂಕಗಳನ್ನು ಪಡೆದಿದ್ದರೂ, ನಮ್ಮ ರಾಜ್ಯದಲ್ಲಿ ಎಂಬಿಬಿಎಸ್‌ ಸೀಟು ಸಿಗಲಿಲ್ಲ. ಹೀಗಾಗಿ ಉಕ್ರೇನ್‌ ದೇಶಕ್ಕೆ ವ್ಯಾಸಂಗಕ್ಕೆ ಕಳುಹಿಸಿ, ಮಗನನ್ನು ಕಳೆದುಕೊಳ್ಳುವ ಪರಿಸ್ಥಿತಿ ಬಂತು’ ಎಂದು ನವೀನ ಅವರ ತಂದೆ ಶೇಖರಪ್ಪ ಗ್ಯಾನಗೌಡರ್‌ ಕಣ್ಣೀರು ಸುರಿಸಿದರು.

ನಮ್ಮ ದೇಶದಲ್ಲೇ ಉನ್ನತ ಶಿಕ್ಷಣ ಬಡವರಿಗೆ ಕೈಗೆಟುಕುವ ದರದಲ್ಲಿ ಸಿಕ್ಕಿದ್ದರೆ ನಾವೇಕೆ ದೂರದ ಉಕ್ರೇನ್‌ಗೆ ಮಗನನ್ನು ಕಳುಹಿಸುತ್ತಿದ್ದೆವು ಎಂದು ಸಾಂತ್ವನ ಹೇಳಲು ಮನೆಗೆ ಬಂದಿದ್ದ ರಾಣೆಬೆನ್ನೂರು ಶಾಸಕ ಅರುಣ್‌ಕುಮಾರ್‌ ಪೂಜಾರ್‌ ಅವರಿಗೆ ಪ್ರಶ್ನಿಸಿದರು.

‘ಉಕ್ರೇನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಭಾರತದ ರಾಯಭಾರಿ ಇದುವರೆಗೂ ಸಂಪರ್ಕಿಸಿಲ್ಲ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮನೆಗೆ ಹೋಗಿ 3 ತಾಸು ಕಾದರೂ ಅವರ ಭೇಟಿ ಸಾಧ್ಯವಾಗಲಿಲ್ಲ. ಆತಂಕವಿಲ್ಲದ ಪ್ರದೇಶಗಳಿಂದ ಮಾತ್ರ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಕರೆಸುತ್ತಿದ್ದಾರೆ. ಆದರೆ, ಯುದ್ಧಪೀಡಿತ ಪ್ರದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಿದ್ಯಾರ್ಥಿಗಳ ಸುರಕ್ಷತೆಗೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಶೇಖಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ದೇವರ ಮೇಲೆ ಭಾರ ಹಾಕಿದ್ದೀವಿ

‘ನನ್ನ ಮಗ ಸುಮನ್‌ ವೈಶ್ಯರ್‌ ಮತ್ತು ತಮ್ಮನ ಮಗ ಅಮಿತ್‌ ವೈಶ್ಯರ್‌ ಇನ್ನೂ ಉಕ್ರೇನ್‌ನಲ್ಲಿಯೇ ಸಿಲುಕಿದ್ದಾರೆ. ಇವರು ನವೀನ ಗ್ಯಾನಗೌಡರ್‌ ಇದ್ದ ಬಂಕರ್‌ನಲ್ಲೇ ಸಿಲುಕಿದ್ದಾರೆ. ನಮ್ಮ ಮಕ್ಕಳ ಬಗ್ಗೆ ಆತಂಕ ಕಾಡುತ್ತಿದೆ. ದೇವರ ಮೇಲೆ ಭಾರ ಹಾಕಿದ್ದೀವಿ’ ಎಂದು ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮದ ಶ್ರೀಧರ ವೈಶ್ಯರ್‌ ನೋವಿನಿಂದ ನುಡಿದರು.

‘ನನ್ನ ಮಗ (ಸುಮನ್‌ ವೈಶ್ಯರ್‌) ಸಂಸದ ಶಿವಕುಮಾರ ಉದಾಸಿ ಅವರಿಗೆ ಕರೆ ಮಾಡಿದರೂ, ಕರೆಯನ್ನು ಸ್ವೀಕರಿಸಿಲ್ಲ. ಮೆಸೇಜ್‌ ಮಾಡಿದರೂ ಪ್ರತಿಕ್ರಿಯೆ ನೀಡಿಲ್ಲ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೂ ಮಗನನ್ನು ಸುರಕ್ಷಿತವಾಗಿ ಕರೆತರಲು ಮನವಿ ಪತ್ರ ಕೊಟ್ಟಿದ್ದೇವೆ. ಇದುವರೆಗೂ ನಮ್ಮ ಮಕ್ಕಳು ತಾಯ್ನಾಡಿಗೆ ಬಂದಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT