ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಹರೀಶ್‌ ಪೂಂಜ ವರ್ತನೆಗೆ ಹೈಕೋರ್ಟ್‌ ಆಕ್ರೋಶ

Published 31 ಮೇ 2024, 17:05 IST
Last Updated 31 ಮೇ 2024, 17:05 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ ಗಣಿಗಾರಿಕೆ ಹಾಗೂ ಸ್ಫೋಟಕಗಳ ಅಕ್ರಮ ದಾಸ್ತಾನು ಮಾಡಿದ ಆರೋಪ ಎದುರಿಸುತ್ತಿದ್ದ ವ್ಯಕ್ತಿಯ ಬಂಧನ ಖಂಡಿಸಿ ಪೊಲೀಸ್ ಠಾಣೆ ಮುಂದೆ ಪ್ರತಿಭಟಿಸಿ, ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಎದುರಿಸುತ್ತಿರುವ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜ ನಡೆಗೆ ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ತಮ್ಮ ವಿರುದ್ಧ ದಾಖಲಾಗಿರುವ ಎರಡು ಎಫ್‌ಐಆರ್‌ಗಳನ್ನು ಪ್ರಶ್ನಿಸಿ ಹರೀಶ್ ಪೂಂಜ ಸಲ್ಲಿಸಿದ್ದ ಅರ್ಜಿಗಳನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್ ಶುಕ್ರವಾರ ವಿಚಾರಣೆ ನಡೆಸಿದರು.

ಅರ್ಜಿದಾರರ ಪರ ವಕೀಲರ ವಿವರಣೆ ಆಲಿಸಿದ ನಂತರ ಪೂಂಜ ವರ್ತನೆಯನ್ನು ಕಠಿಣ ಪದಗಳಲ್ಲಿ ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿ ದೀಕ್ಷಿತ್‌, ‘ಜನಪ್ರತಿನಿಧಿ ಎಂದ ಮಾತ್ರಕ್ಕೆ ಪೊಲೀಸ್ ಠಾಣೆಗೆ ಹೋಗಿ ಪ್ರತಿಭಟನೆ ನಡೆಸುವುದು ಎಷ್ಟು ಸರಿ?, ಶಾಸಕರ ಜಾಗ ಏನಿದ್ದರೂ ವಿಧಾನಸೌಧ. ಅವರು ಅಲ್ಲಿ ಕುಳಿತು ಶಾಸನ ರೂಪಿಸುವ ಕೆಲಸ ಮಾಡಬೇಕು. ಅದು ಬಿಟ್ಟು ಪೊಲೀಸ್‌ ಠಾಣೆಗೆ ಬಂದು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಅವರೆಲ್ಲಾ ನಿರ್ಭಯದಿಂದ, ಒತ್ತಡರಹಿತವಾಗಿ ತನಿಖೆ ಮಾಡಲು ಹೇಗೆ ಸಾಧ್ಯ’ ಎಂದು ಕಿಡಿ ಕಾರಿದರು.

‘ಪೊಲೀಸರು ಭಯೋತ್ಪಾದಕನನ್ನು ಬಂಧಿಸಿದಾಗ, ಅವನ ಪತ್ನಿ ಬಂದು; ನನ್ನ ಪತಿ ಭಾಳಾ ಒಳ್ಳೆಯ ವ್ಯಕ್ತಿ. ಪೊಲೀಸರು ಬಂಧಿಸಿದ್ದಾರೆ ಎಂದರೆ ಜನಪ್ರತಿನಿಧಿ ಪೊಲೀಸ್ ಠಾಣೆಗೆ ಹೋಗಲು ಸಾಧ್ಯವೇ? ಎಂದು ಪ್ರಶ್ನಿಸಿದ ನ್ಯಾಯಮೂರ್ತಿಯವರು, ‘ಇತ್ತೀಚಿನ ದಿನಗಳಲ್ಲಿ ಪೊಲೀಸರ ವಿರುದ್ಧ ಧರಣಿ ನಡೆಸುವುದು, ಕಲ್ಲು ಎಸೆಯುವುದು, ಅವರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಸಾಮಾನ್ಯವಾಗಿ ಹೋಗಿದೆ. ಯಾವುದೋ ಒಂದು ಪ್ರಕರಣದಲ್ಲಿ ಪೊಲೀಸರಿಂದ ಒಬ್ಬರಿಗೆ ತೊಂದರೆ ಆಗಬಹುದು. ಹಾಗೆಂದ ಮಾತ್ರಕ್ಕೆ ಶಾಸಕರು ಕೋರ್ಟ್‌ ಮಾಡುವ ಕೆಲಸವನ್ನು ಮಾಡಿದರೆ ಹೇಗೆ? ಶಾಸಕರು ಠಾಣೆಗೆ ಹೋಗಬಾರದಿತ್ತು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಈ ರೀತಿಯ ಪ್ರಕರಣದಲ್ಲಿ ದೇಶದ ಯಾವುದೇ ನ್ಯಾಯಾಲಯ ಆರೋಪಿತರ ಪರವಾಗಿ ಆದೇಶಿಸಿದ್ದರೆ ಅಥವಾ ವಿದೇಶಿ ನ್ಯಾಯಾಲಯಗಳು ಒಂದೇ ಒಂದು ಆದೇಶ ನೀಡಿದ್ದರೆ ಅಂತಹ ಪೂರ್ವನಿದರ್ಶನಗಳನ್ನು ಕೋರ್ಟ್‌ಗೆ ಸಲ್ಲಿಸಿ’ ಎಂದು ಅರ್ಜಿದಾರರ ಪರ ವಕೀಲರಿಗೆ ತಾಕೀತು ಮಾಡಿದ ನ್ಯಾಯಮೂರ್ತಿಗಳು ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT