ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದ ವಿವಿಧೆಡೆ ಮುಂದುವರಿದ ಮಳೆ: ನದಿಗಳಲ್ಲಿ ಹೆಚ್ಚಿದ ಹರಿವು

ಹಾರಂಗಿಗೆ ಒಳಹರಿವು ಏರಿಕೆ * ಕದ್ರಾ ಜಲಾಶಯದಿಂದ 30ಸಾವಿರ ಕ್ಯೂಸೆಕ್‌ ನೀರು ಬಿಡುಗಡೆ
Published 5 ಜುಲೈ 2024, 15:32 IST
Last Updated 5 ಜುಲೈ 2024, 15:32 IST
ಅಕ್ಷರ ಗಾತ್ರ

ಮಡಿಕೇರಿ/ಉಡುಪಿ/ಕಲಬುರಗಿ: ರಾಜ್ಯದ ವಿವಿಧೆಡೆ ಶುಕ್ರವಾರವು ವರ್ಷಧಾರೆ ಮುಂದುವರಿದಿದೆ. ಕರಾವಳಿ ಜಿಲ್ಲೆಗಳಲ್ಲಿ ನದಿಗಳಲ್ಲಿ ನೀರಿನ ಹರಿವು ಇನ್ನಷ್ಟು ಹೆಚ್ಚಿದೆ. ಉಡುಪಿ ಜಿಲ್ಲೆಯಲ್ಲಿ ಎರಡು ಮನೆಗಳು ಭಾಗಶಃ ಹಾನಿಯಾಗಿವೆ. ಕೊಡಗು ಜಿಲ್ಲೆಯಲ್ಲಿ ಮನೆಯೊಂದು ಕುಸಿದಿದೆ.

ಉಳಿದಂತೆ, ಕೊಡಗು ಜಿಲ್ಲೆಯ ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ನೀರಿನ ಹರಿವು ಏರಿಕೆ ಹಿನ್ನೆಲೆಯಲ್ಲಿ ಕದ್ರಾ ಜಲಾಶಯದಿಂದ 30 ಸಾವಿರ ಕ್ಯೂಸೆಕ್ ನೀರು ಹೊರಗೆ ಬಿಡಲಾಗುತ್ತಿದೆ.

ಮಡಿಕೇರಿ ವರದಿ: ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಹಲವೆಡೆ ಮಳೆಯ ಬಿರುಸು ಕಡಿಮೆಯಾಗಿದ್ದರೂ, ಮಡಿಕೇರಿ ನಗರದಲ್ಲಿ ಬಿರುಸಿನಿಂದ ಸುರಿಯುತ್ತಿದೆ.

ಭಾರಿ ಮಳೆ ಹಿನ್ನೆಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಸಂಪಾಜೆ ಹೋಬಳಿ ಚಂಬು ಗ್ರಾಮದಲ್ಲಿ ಮನೆಯೊಂದು ಸಂಪೂರ್ಣ ಕುಸಿದಿದೆ. ಮನೆಯಲ್ಲಿದ್ದ ವಸ್ತುಗಳೆಲ್ಲವೂ ನಾಶವಾಗಿವೆ. ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣವು 5,048 ಕ್ಯುಸೆಕ್‌ಗೆ ಏರಿದೆ.

ಉಡುಪಿ ವರದಿ: ಜಿಲ್ಲೆಯಾದ್ಯಂತ ಶುಕ್ರವಾರ ಧಾರಾಕಾರ ಮಳೆ ಮುಂದುವರಿದಿದ್ದು, ಕೆಲವೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿವೆ.

ನದಿಗಳಲ್ಲಿ ನೀರಿನ ಹರಿವು ಹೆಚ್ಚಿದೆ. ಹಿರಿಯಡ್ಕ ಪರಿಸರದಲ್ಲಿ ನದಿ ಪಾತ್ರದ ಕೃಷಿ ಭೂಮಿಗಳು ಜಲಾವೃತವಾಗುವ ಭೀತಿ ಉಂಟಾಗಿದೆ. ಕುಂದಾಪುರದಲ್ಲೂ ಮಳೆ ಬಿರುಸುಗೊಂಡಿದೆ.

ಬೈಂದೂರು ತಾಲ್ಲೂಕಿನ ಸಾಲ್ಬುಡ, ಮರವಂತೆ, ಪಡುಕೋಣೆ, ನಾವುಂದ, ಅರೆಹೊಳೆ, ಕುದ್ರು, ಚಿಕ್ಕಳ್ಳಿ ಮೊದಲಾದೆಡೆ ನೆರೆ ಕೊಂಚ ಮಟ್ಟಿಗೆ ಇಳಿಕೆಯಾದರೂ ಕೃಷಿ ಪ್ರದೇಶಗಳು ಮುಳುಗಡೆಯಾಗಿವೆ.

ಕಾರ್ಕಳ ತಾಲ್ಲೂಕಿನ ನೀರೆಯಲ್ಲಿ ಕಾಲು ಸಂಕಕ್ಕೆ ಹಾನಿಯಾಗಿದೆ. ಬೋಳ ಗ್ರಾಮದ ತಿಳಿಯೂರು ಪದವಿನಲ್ಲಿ ನಾರಾಯಣ ಎಂಬುವವರ ಮನೆಯ ಚಾವಣಿ ಕುಸಿದಿದೆ. ಕಣಜಾರು ಗ್ರಾಮದಲ್ಲಿ ಕಲ್ಯಾಣಿ ಎಂಬುವವರ ಮನೆ ಮೇಲೆ ಮರ ಬಿದ್ದು ಮನೆ ಭಾಗಶಃ ಹಾನಿಗೊಂಡಿದೆ.

ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ. ಚಿಕ್ಕಮಗಳೂರು ನಗರ ಹಾಗೂ ಜಿಲ್ಲೆಯ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ಭಾಗದಲ್ಲಿ ಮಳೆ ಸುರಿಯಿತು.

ಮಡಿಕೇರಿಯಲ್ಲಿ ಶುಕ್ರವಾರ ಮಾರುಕಟ್ಟೆ ಚಾವಣಿಯಿಂದ ಸುರಿಯುತ್ತಿದ್ದ ನೀರಿನ ನಡುವೆಯೇ ಮಹಿಳೆಯೊಬ್ಬರು ಸಾಮಗ್ರಿಗಳೊಂದಿಗೆ ಹೆಜ್ಜೆ ಹಾಕಿದರು
ಪ‍್ರಜಾವಾಣಿ ಚಿತ್ರ/ರಂಗಸ್ವಾಮಿ
ಮಡಿಕೇರಿಯಲ್ಲಿ ಶುಕ್ರವಾರ ಮಾರುಕಟ್ಟೆ ಚಾವಣಿಯಿಂದ ಸುರಿಯುತ್ತಿದ್ದ ನೀರಿನ ನಡುವೆಯೇ ಮಹಿಳೆಯೊಬ್ಬರು ಸಾಮಗ್ರಿಗಳೊಂದಿಗೆ ಹೆಜ್ಜೆ ಹಾಕಿದರು ಪ‍್ರಜಾವಾಣಿ ಚಿತ್ರ/ರಂಗಸ್ವಾಮಿ
ಕಲ್ಯಾಣ ಕರ್ನಾಟಕದ ವಿವಿಧೆಡೆ ಮಳೆ

ಕಲಬುರಗಿ: ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದೆ.

ಕಲಬುರಗಿ ನಗರ, ಜಿಲ್ಲೆಯ ಚಿತ್ತಾಪುರ, ಮುಡಬೂಳ, ಮರಗೋಳ, ದಂಡೋತಿ, ಇವಣಿ, ಮೊಗಲಾ, ಇಟಗಾ ಗ್ರಾಮಗಳಲ್ಲಿ ಮಳೆಯಾಗಿದೆ. ಅಫಜಲಪುರ ತಾಲ್ಲೂಕಿನ ರೇವೂರ್ (ಬಿ), ಸೇಡಂ ಹಾಗೂ ಕಾಳಗಿ ತಾಲ್ಲೂಕಿನಲ್ಲಿ ಮಳೆಯಾಗಿದೆ.

ಬೀದರ್‌ ನಗರದಲ್ಲಿ ಅರ್ಧಗಂಟೆ ಕಾಲ ಬಿರುಸಿನ ಮಳೆಯಾಯಿತು. ಬಸವಕಲ್ಯಾಣ, ಹುಲಸೂರ, ಹುಮನಾಬಾದ್‌, ಭಾಲ್ಕಿ ತಾಲ್ಲೂಕಿನಲ್ಲಿಯೂ ವರ್ಷಧಾರೆಯಾಗಿದೆ. ರಾಯಚೂರು, ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಯ ಕೆಲವೆಡೆ ಮಳೆಯಾಗಿದೆ.

ಮಡಿಕೇರಿ-ಚೆಟ್ಟಳ್ಳಿ ರಸ್ತೆ ಬದಿಯಲ್ಲಿರುವ ಅಬ್ಯಾಲ ಜಲಪಾತ ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದ್ದು ಪ್ರವಾಸಿಗರ ಗಮನ ಸೆಳೆಯುತ್ತಿದೆ. ಪ್ರಜಾವಾಣಿ ಚಿತ್ರ/ ರೆಜಿತ್ ಕುಮಾರ್ ಗುಹ್ಯ
ಮಡಿಕೇರಿ-ಚೆಟ್ಟಳ್ಳಿ ರಸ್ತೆ ಬದಿಯಲ್ಲಿರುವ ಅಬ್ಯಾಲ ಜಲಪಾತ ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದ್ದು ಪ್ರವಾಸಿಗರ ಗಮನ ಸೆಳೆಯುತ್ತಿದೆ. ಪ್ರಜಾವಾಣಿ ಚಿತ್ರ/ ರೆಜಿತ್ ಕುಮಾರ್ ಗುಹ್ಯ
ಕರಾವಳಿಗೆ ‘ರೆಡ್ ಅಲರ್ಟ್’

ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಶನಿವಾರವೂ ಗುಡುಗು ಸಹಿತ ಭಾರಿ ಮಳೆ ಮುಂದು ವರಿಯುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ಕರಾವಳಿಯ ಮೂರು ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಘೋಷಿಸಿದೆ. 

ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ‘ರೆಡ್ ಅಲರ್ಟ್’ ನೀಡಲಾಗಿದ್ದು, ಈ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ. ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಈ ಜಿಲ್ಲೆಗಳ ಕೆಲವೆಡೆ ಭಾರಿ ಮಳೆಯಾಗುವ ಸಂಭವವಿದೆ.

ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೊಡಗು, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಹಾಗೂ ವಿಜಯನಗರ ಜಿಲ್ಲೆಯ ಕೆಲವು ಸ್ಥಳಗಳಲ್ಲಿ 30ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಸಹಿತ ಸಾಧಾರಣ ಮಳೆಯಾಗುವ ಸಂಭವವಿದೆ.

ಸಾವೆಹಕ್ಲು: 34 ಸೆಂ.ಮೀ. ಮಳೆ

ಶಿವಮೊಗ್ಗ: ಮಲೆನಾಡಿನಲ್ಲಿ ಶುಕ್ರವಾರ ಮಳೆ ಬಿರುಸು ತುಸು ತಗಿದ್ದು, ತುಂಗಾ, ಲಿಂಗನಮಕ್ಕಿ ಜಲಾಶಯಗಳಿಗೆ ಒಳಹರಿವು ಕಡಿಮೆ ಆಗಿದೆ. ಆದರೆ ಲಕ್ಕವಳ್ಳಿ ಬಳಿ ಇರುವ ಭದ್ರಾ ಜಲಾಶಯಕ್ಕೆ ಒಳಹರಿವು ಏರಿಕೆಯಾಗಿದೆ.

ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆಗಳಲ್ಲಿ ಹೊಸನಗರ ತಾಲ್ಲೂಕಿನ ಸಾವೆಹಕ್ಲುನಲ್ಲಿ ದಾಖಲೆ ಪ್ರಮಾಣದ 34 ಸೆಂ.ಮೀ ಮಳೆ ಸುರಿದಿದೆ. ಚಕ್ರಾ 30 ಸೆಂ.ಮೀ, ಹುಲಿಕಲ್ 29, ಮಾಸ್ತಿಕಟ್ಟೆ 28, ಮಾಣಿ 22 ಹಾಗೂ ಯಡೂರಿನಲ್ಲಿ 17 ಸೆಂ.ಮೀ ಮಳೆ ಆಗಿದೆ.

ನದಿಗೆ ಹರಿದ 500 ಕ್ಯುಸೆಕ್‌ನಷ್ಟು ನೀರು: ಭದ್ರಾ ಜಲಾಶಯದ ರಿವರ್ ಸ್ಲುಯಿಸ್ ಗೇಟ್‌ನ ಕನೆಕ್ಟಿಂಗ್ ಬೀಮ್ ಮುರಿದಿದೆ. ಹೀಗಾಗಿ ಕಳೆದ ಮೂರು ದಿನಗಳಿಂದ ಜಲಾಶಯದಿಂದ 500 ಕ್ಯುಸೆಕ್‌ನಷ್ಟು ನೀರು ಸೋರಿಕೆ ಆಗಿ ಭದ್ರಾ ನದಿಗೆ ಹರಿಯುತ್ತಿದೆ.

‘ಮೂರು ತಿಂಗಳ ಹಿಂದೆಯೇ ಎರಡು ಗೇಟ್‌ಗಳ ಪೈಕಿ ಒಂದರಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಅದನ್ನು ದುರಸ್ತಿ ಮಾಡಿದ್ದೆವು. ಮಳೆ ಹೆಚ್ಚಾಗಿ ಮೂರು ದಿನಗಳ ಹಿಂದೆ ಸ್ಲುಯಿಸ್ ಗೇಟ್‌ನ ಸಂಪರ್ಕದ ಕೊಂಡಿ (ಬೀಮ್) ಮುರಿದು ಜಾಮ್ ಆಗಿದೆ. ಇದರಿಂದ ನೀರು ಸೋರಿಕೆ ಆಗುತ್ತಿದೆ’ ಎಂದು ಭದ್ರಾ ಜಲಾಶಯ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ರವಿಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಮಸ್ಯೆ ಗಮನಕ್ಕೆ ಬರುತ್ತಲೇ ದುರಸ್ತಿ ಕಾರ್ಯ ಆರಂಭಿಸಿದ್ದೇವೆ. ಶನಿವಾರ ಮಧ್ಯಾಹ್ನದ ವೇಳೆಗೆ ದುರಸ್ತಿ ಕಾರ್ಯ ಪೂರ್ಣಗೊಳ್ಳಬಹುದು. ಸಹಾಯಕ ಸಿಬ್ಬಂದಿ ಜೊತೆ  ಇಲ್ಲಿಯೇ ಬೀಡು ಬಿಟ್ಡಿದ್ದೇವೆ. ಇದರಿಂದ ಅಣೆಕಟ್ಟೆಯ ಸುರಕ್ಷತೆಗೆ ಯಾವುದೇ ತೊಂದರೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಭದ್ರಾ ಜಲಾಶಯದ ಸ್ಲುಯಿಸ್ ಗೇಟ್‌ನಲ್ಲಿ ಬಿರುಕು ದೊಡ್ಡ ಮಟ್ಟದಲ್ಲಿ ಆಗಿದೆ. 1.5 ಸಾವಿರ ಕ್ಯುಸೆಕ್‌ಗೂ ಹೆಚ್ಚು ನೀರು ನದಿಗೆ ಹರಿಯುತ್ತಿದೆ’ ಎಂಬ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಅದನ್ನು ಜಲಾಶಯದ ನಿರ್ವಹಣಾ ವಿಭಾಗದ ಖಚಿತಪಡಿಸಿಲ್ಲ.

ದಾವಣಗೆರೆ ವರದಿ: ನಗರ ಸೇರಿ ಜಿಲ್ಲೆಯ ನ್ಯಾಮತಿ, ಸಂತೇಬೆನ್ನೂರು, ಹರಿಹರ, ಮಲೇಬೆನ್ನೂರು, ಹೊನ್ನಾಳಿಯಲ್ಲಿ ಉತ್ತಮ ಮಳೆಯಾಗಿದ್ದರೆ ಚನ್ನಗಿರಿ, ಜಗಳೂರು, ಮಾಯಕೊಂಡದಲ್ಲಿ ಸಾಧಾರಣ ಮಳೆಯಾಗಿದೆ. ಕೆರೆ–ಕಟ್ಟೆಗಳು ತುಂಬಿವೆ. ಹರಿಹರ ತಾಲ್ಲೂಕಿನ ಉಕ್ಕಡಗಾತ್ರಿಯ ಗುರು ಕರಿಬಸವೇಶ್ವರ ಅಜ್ಜಯ್ಯನ ದೇವಸ್ಥಾನದ ಪಕ್ಕದಲ್ಲಿ ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದು, ಧಾರಾಕಾರ ಮಳೆಗೆ ದೇವಸ್ಥಾನದ ಸ್ನಾನ ಘಟ್ಟ ಮತ್ತು ಅಂಗಡಿಗಳು ಜಲಾವೃತಗೊಂಡಿವೆ.

ಅಘನಾಶಿನಿ, ಗಂಗಾವಳಿ ನದಿಗಳಲ್ಲಿ ತಗ್ಗಿದ ಪ್ರವಾಹ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಅಘನಾಶಿನಿ, ಗಂಗಾವಳಿ ನದಿಗಳಲ್ಲಿ ಪ್ರವಾಹ ಇಳಿಕೆಯಾಗಿದೆ. ಆದರೆ, ಕಾಳಿ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು, ಕಾರವಾರ ತಾಲ್ಲೂಕಿನ ಕದ್ರಾ ಜಲಾಶಯದಿಂದ ಅಧಿಕ ನೀರು ಹೊರಕ್ಕೆ ಬಿಡಲಾಗಿದೆ.

34.50 ಮೀಟರ್ ಗರಿಷ್ಠ ಸಾಮರ್ಥ್ಯದ ಅಣೆಕಟ್ಟೆಯಲ್ಲಿ ಸದ್ಯ 30.33 ಮೀ. ಎತ್ತರದವರೆಗೆ ನೀರು ಸಂಗ್ರಹವಾಗಿದೆ. ಜೊಯಿಡಾ, ಕೈಗಾ, ಯಲ್ಲಾಪುರ ಭಾಗದಲ್ಲಿ ನಿರಂತರ ಮಳೆ ಆಗುತ್ತಿದ್ದು, ಜಲಾಶಯಕ್ಕೆ ನೀರಿನ ಹರಿವು ಏರುತ್ತಿದೆ. 

‘ಜಲಾಶಯಕ್ಕೆ ನೀರಿನ ಒಳಹರಿವಿನ ಪ್ರಮಾಣ 19,676 ಕ್ಯುಸೆಕ್ ಇದ್ದು, ನೀರಿನ ಮಟ್ಟ ಏರಿಕೆಯಾಗುತ್ತಿದೆ.
ಮುಂಜಾಗ್ರತೆಯಾಗಿ ಪ್ರತಿ ಗೇಟ್ ಮೂಲಕ ತಲಾ 7 ಸಾವಿರ ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ’ ಎಂದು ಕೆಪಿಸಿ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಹೊಸಪೇಟೆ/ಬಳ್ಳಾರಿ ವರದಿ: ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ 15 ದಿನ ವಿರಾಮದ ಬಳಿಕ ಶುಕ್ರವಾರ ಮಳೆಯಾಗಿದೆ. ಬಳ್ಳಾರಿ ನಗರ, ತೋರಣಗಲ್‌, ಕಂಪ್ಲಿ, ಹೊಸಪೇಟೆ ನಗರ, ಕಮಲಾ ಪುರ, ಮರಿಯಮ್ಮನಹಳ್ಳಿ, ಹಗರಿ ಬೊಮ್ಮನ ಹಳ್ಳಿ, ಕೂಡ್ಲಿಗಿಯಲ್ಲಿ ಮಳೆಯಾಗಿದೆ. 

ತುಂಗಭದ್ರಾ ಜಲಾಶಯದ ಒಳಹರಿವು 18,500 ಕ್ಯುಸೆಕ್‌ಗೆ ಏರಿಕೆ ಆಗಿದೆ. ಸದ್ಯ ಜಲಾಶಯದಲ್ಲಿ 11.71 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT