ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಳೆಗೆ ತಂಪೆರೆದ ಮಳೆ!

Published 20 ಮೇ 2024, 0:17 IST
Last Updated 20 ಮೇ 2024, 0:17 IST
ಅಕ್ಷರ ಗಾತ್ರ

ಮೈಸೂರು/ಹುಬ್ಬಳ್ಳಿ: ರಾಜ್ಯದ ವಿವಿಧಡೆ ಭಾನುವಾರ ಧಾರಾಕಾರ ಮಳೆಯಾಗಿದೆ. ಮೈಸೂರು ನಗರದಲ್ಲಿ ಮುಂಜಾನೆ ಸಾಧಾರಣ ಮಳೆಯಾಯಿತು. ಮಧ್ಯಾಹ್ನದ ನಂತರ ಗುಡುಗು ಸಹಿತ ಜೋರು ಮಳೆ ಸುರಿಯಿತು. ಕೊಡಗು ಜಿಲ್ಲೆಯ ಕೇರಳ ಗಡಿ ಭಾಗ ಕುಟ್ಟ ಗ್ರಾಮದ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗಿದೆ.  

ಹುಬ್ಬಳ್ಳಿಯಲ್ಲಿ ನಗರ ಹಾಗೂ ಧಾರವಾಡ ಜಿಲ್ಲೆಯ ಕೆಲವೆಡೆ ಶನಿವಾರ ತಡರಾತ್ರಿ ಹಾಗೂ ಭಾನುವಾರ ನಸುಕಿನಲ್ಲಿ ಗುಡುಗು ಸಹಿತ ರಭಸದ ಮಳೆಯಾಗಿದೆ. ವಿಜಯಪುರ, ಬಾಗಲಕೋಟೆ, ಬಳ್ಳಾರಿ, ಉತ್ತರ ಕನ್ನಡ ಜಿಲ್ಲೆಗಳಲ್ಲೂ ವರ್ಷಧಾರೆಯಾಗಿದೆ.

ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಶನಿವಾರ ರಾತ್ರಿಯಿಂದ ಭಾನುವಾರ ಬೆಳಗಿನ ಜಾವದವರೆಗೆ ಧಾರಾಕಾರ ಮಳೆ ಸುರಿದಿದೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನಾದ್ಯಂತ ಶನಿವಾರ ರಾತ್ರಿ ಭರ್ಜರಿ ಮಳೆಯಾಗಿದೆ. ರಾತ್ರಿ 8 ಗಂಟೆಗೆ ಆರಂಭವಾದ ಮಳೆ ಮಧ್ಯರಾತ್ರಿಯವರೆಗೂ ಒಂದೇಸಮನೆ ಸುರಿಯಿತು. ಕೆರೆ, ಕಟ್ಟೆ, ಜಮೀನುಗಳಲ್ಲಿ ನೀರು ನಿಂತಿದೆ. ಬರದಿಂದ ತತ್ತರಿಸಿದ್ದ ಜನರಲ್ಲಿ ಮುಂಗಾರುಪೂರ್ವ ಮಳೆ ಸಂತಸ ಉಂಟುಮಾಡಿದೆ.

ಹಲವು ಹಳ್ಳ, ಕೊಳ್ಳಗಳು ತುಂಬಿವೆ. ಎಂ.ಜಿ. ದಿಬ್ಬದಲ್ಲಿನ ಕೆರೆಯ ಏರಿ ಬಿರುಕು ಬಿಟ್ಟಿದೆ.

ಶಿವಮೊಗ್ಗ ವರದಿ: ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಳೆಯ ಆರ್ಭಟ ಮುಂದುವರಿದಿದೆ. ಭಾನುವಾರ ಬೆಳಿಗ್ಗೆ ಭದ್ರಾ ಜಲಾಶಯದ ಒಳಹರಿವು 1,150 ಕ್ಯುಸೆಕ್‌ಗೆ ಏರಿಕೆಯಾಗಿತ್ತು. ಈ ವರ್ಷ ಇದೇ ಮೊದಲ ಬಾರಿಗೆ ಒಳಹರಿವು 1,000 ಕ್ಯುಸೆಕ್‌ ದಾಟಿದೆ. ಶನಿವಾರ ಬೆಳಿಗ್ಗೆ ಒಳಹರಿವಿನ ಪ್ರಮಾಣ 571 ಕ್ಯುಸೆಕ್ ಇತ್ತು. 24 ಗಂಟೆಯ ಅವಧಿಯಲ್ಲಿ ಜಲಾಶಯಕ್ಕೆ ಹರಿದುಬರುತ್ತಿರುವ ನೀರಿನ ಪ್ರಮಾಣ ದುಪ್ಪಟ್ಟಾಗಿದೆ.

ತುಮಕೂರು ವರದಿ: ಜಿಲ್ಲೆಯ ವಿವಿಧೆಡೆ ಎರಡು–ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಮಧುಗಿರಿ ಭಾಗದಲ್ಲಿಯೂ ಉತ್ತಮ ಮಳೆ ಸುರಿದಿದೆ. ಬಿತ್ತನೆ ಕಾರ್ಯವೂ ಚುರುಕುಗೊಂಡಿದೆ. ನಿರಂತರ ಮಳೆ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ತುಮಕೂರು ಬಳಿಯ ರಾಷ್ತ್ರೀಯ ಹೆದ್ದಾರಿ 48ರಲ್ಲಿ ನಡೆಯುತ್ತಿರುವ ಕಾಮಗಾರಿ ಸ್ಥಳದ ಸಮೀಪ 5 ಕಿ.ಮೀವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಚೋಳೇನಹಳ್ಳಿ ಕೆರೆ, ಹೊಸಕೆರೆ, ರೆಡ್ಡಿಹಳ್ಳಿ ಹಾಗೂ ಹನುಮಂತಪುರ ಕೆರೆ ಸೇರಿದಂತೆ ಹಲವು ಕೆರೆಗಳಿಗೆ ನೀರು ಹರಿದಿದೆ.

ಕೊಪ್ಪಳ: ಸಿಡಿಲು ಬಡಿದು ರೈತ ಸಾವು ಕೊಪ್ಪಳ: ಜಿಲ್ಲೆಯಲ್ಲಿ ಹಲವು ದಿನಗಳಿಂದ ಮಳೆಯಾಗುತ್ತಿದ್ದು, ರೈತರು ಕೃಷಿ ಚಟುವಟಿಕೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಭಾನುವಾರವೂ ಕೊಪ್ಪಳ, ಹನುಮಸಾಗರ, ಕುಷ್ಟಗಿ ಸೇರಿದಂತೆ ಹಲವು ಕಡೆ ಮಳೆಯಾಗಿದೆ. ಕುಷ್ಟಗಿ ತಾಲ್ಲೂಕಿನ ಬಚನಾಳ ಗ್ರಾಮದಲ್ಲಿ ಹೊಲದಲ್ಲಿ ಕೆಲಸದಲ್ಲಿ ನಿರತನಾಗಿದ್ದ ರೈತ ಈಶಪ್ಪ ಕಳಮಳ್ಳಿ (33) ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ರಾಯಚೂರು ಜಿಲ್ಲೆಯ ಸಿಂಧನೂರು ಹಾಗೂ ಕವಿತಾಳದಲ್ಲಿ ಸಾಧಾರಣ ಮಳೆಯಾಗಿದೆ. ಬಿಸಿಲಿನ ಧಗೆ ಕಡಿಮೆಯಾಗಿದೆ. 

ಬೆಂಗಳೂರಿನಲ್ಲಿ ಧಾರಾಕಾರ ಮಳೆ

ಬೆಂಗಳೂರು: ನಗರದ ಹಲವೆಡೆ ಒಂದು ವಾರದಿಂದ ಸಂಜೆ, ರಾತ್ರಿ ವೇಳೆ ಧಾರಾಕಾರ ಮಳೆಯಾಗುತ್ತಿದೆ. ಮಳೆಯಾಗದೆ ಉಷ್ಣಾಂಶ ಏರಿಕೆಯಾಗಿ ಜನರು ಬಸವಳಿಯುವ ಸ್ಥಿತಿ ನಿರ್ಮಾಣವಾಗಿತ್ತು. ಕುಡಿಯುವ ನೀರಿಗೆ ಗಂಭೀರ ಸಮಸ್ಯೆ ಎದುರಾಗಿತ್ತು. ದುಬಾರಿ ಹಣ ನೀಡಿ ಜನರು ಟ್ಯಾಂಕರ್‌ನ ನೀರು ಖರೀದಿಸುತ್ತಿದ್ದರು.

ವಾರದಿಂದ ಸುರಿಯುತ್ತಿರುವ ಮಳೆ ವಾತಾವರಣ ತಂಪಾಗಿಸುವ ಜೊತೆಗೆ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗುವಂತಾಗಿದೆ.

ಶನಿವಾರ ತಡರಾತ್ರಿ ಹಾಗೂ ಭಾನುವಾರ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ನಗರದ ಹಲವೆಡೆ ಧಾರಾಕಾರ ಮಳೆಯಾಗಿದೆ. ಹೆಸರಘಟ್ಟದಲ್ಲಿ 9 ಸೆಂ.ಮೀ ಹಾಗೂ ಯಲಹಂಕದಲ್ಲಿ 8 ಸೆಂ.ಮೀ ಮಳೆ ಸುರಿದಿದೆ. ಯಲಹಂಕದ ನಾರ್ತ್‌ಹುಡ್‌ ಅಪಾರ್ಟ್‌ಮೆಂಟ್‌ ಒಳಗೆ ನೀರು ನುಗ್ಗಿತ್ತು. ರಸ್ತೆಗಳು ಜಲಾವೃತ್ತಗೊಂಡು ಜನರು ಪರದಾಡಿದರು.

ಕೇರಳದ ಹಲವೆಡೆ ವರ್ಷಧಾರೆ

ತಿರುವನಂತಪುರ: ಕೇರಳದ ಹಲವು ಭಾಗಗಳಲ್ಲಿ ಶನಿವಾರ ರಾತ್ರಿಯಿಂದಲೇ ಭಾರಿ ಮಳೆಯಾಗುತ್ತಿದ್ದು, ಗುಡ್ಡಗಾಡು ಮತ್ತು ಕರಾವಳಿ ಪ್ರದೇಶಗಳ ಜನರಿಗೆ ಹೆಚ್ಚು ಜಾಗರೂಕವಾಗಿರುವಂತೆ ಅಧಿಕಾರಿಗಳು ಭಾನುವಾರ ಸೂಚನೆ ನೀಡಿದ್ದಾರೆ. 

ಹವಾಮಾನ ಇಲಾಖೆಯು, ಪತ್ತನಂತಿಟ್ಟ, ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಿಗೆ ಸೋಮವಾರವು ‘ರೆಡ್ ಅಲರ್ಟ್’ ಘೋಷಿಸಿದ್ದು, ತಿರುವನಂತಪುರ, ಕೊಲ್ಲಂ, ಆಲಪ್ಪುಳ ಮತ್ತು ಎರ್ನಾಕುಳ ಸೇರಿ ಇತರ ನಾಲ್ಕು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಿದೆ.

ತಿರುವನಂತಪುರದಲ್ಲಿ ಶನಿವಾರ ರಾತ್ರಿ ಭಾರಿ ಮಳೆಯಾಗಿದೆ. ನಗರ ಮತ್ತು ಅದರ ಉಪನಗರಗಳ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಕೆಲವೆಡೆ ಮನೆ, ಅಂಗಡಿಗಳು ಜಲಾವೃತಗೊಂಡಿವೆ. 

ಯಾದಗಿರಿ ತಾಲ್ಲೂಕಿನ ಬಂದಳ್ಳಿಯಲ್ಲಿ ಭೂಮಿ ಹದಗೊಳಿಸುತ್ತಿರುವ ರೈತ

ಯಾದಗಿರಿ ತಾಲ್ಲೂಕಿನ ಬಂದಳ್ಳಿಯಲ್ಲಿ ಭೂಮಿ ಹದಗೊಳಿಸುತ್ತಿರುವ ರೈತ


ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT