ಉಡುಪಿ: ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಹಲವು ಕಡೆಗಳಲ್ಲಿ ನೆರೆ ಸೃಷ್ಟಿಯಾಗಿದೆ. ನಗರದಲ್ಲಿ ನೂರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.

ಬಡಗುಪೇಟೆ, ಬನ್ನಂಜೆ, ಮಠದಬೆಟ್ಟು, ಕಲ್ಸಂಕ, ಗುಂಡಿಬೈಲು, ಮೂಡುಸಗ್ರಿ, ಕೊಡವೂರು, ಕಿನ್ನಿಮೂಲ್ಕಿ, ಆದಿ ಉಡುಪಿ, ಬೈಲಕೆರೆ ಪ್ರದೇಶಗಳು ದ್ವೀಪದಂತಾಗಿವೆ. ಗುಂಡಿಬೈಲು–ಕಲ್ಸಂಕ ರಸ್ತೆ ಸಂಚಾರ ಬಂದ್ ಆಗಿದೆ. 169 ಎ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಉಡುಪಿ ಮಣಿಪಾಲ್ ರಸ್ತೆಯೂ ಜಲಾವೃತವಾಗಿದ್ದು, ಏಕಮುಖ ಸಂಚಾರದ ವ್ಯವಸ್ಥೆ ಮಾಡಲಾಗಿದೆ.

ಹಲವರು ಮನೆಯಿಂದ ಹೊರಬಾರಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಬೋಟ್ಗಳಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಕೃಷ್ಣಮಠದ ರಾಜಾಂಗಣಕ್ಕೂ ನೀರು ನುಗ್ಗಿದೆ. ಮಠದ ಪಾರ್ಕಿಂಗ್ ಪ್ರದೇಶ ಕೆರೆಯಂತಾಗಿದ್ದು, ಹಲವು ವಾಹನಗಳು ಭಾಗಶಃ ಮುಳುಗಿಹೋಗಿವೆ.

ಸ್ವರ್ಣಾ ನದಿ ತುಂಬಿ ಹರಿಯುತ್ತಿದ್ದು, ಪೆರ್ಡೂರು ಪಟ್ಟಣ ಜಲಾವೃತವಾಗಿದೆ. ಪುತ್ತಿಗೆ ವಿದ್ಯಾಪೀಠದ ಬಳಿ ನೀರಿನ ಮಟ್ಟ ಏರಿಕೆಯಾಗಿದೆ. ಕಾರ್ಕಳ ತಾಲ್ಲೂಕಿನ ಎಣ್ಣಹೊಳೆ, ಹೆರ್ಮುಂಡೆಯಲ್ಲಿ ಹಲವು ಮನೆಗಳು ಸಂಪೂರ್ಣ ಮುಳುಗಡೆಯಾಗಿವೆ ರಾಜ್ಯ ಹೆದ್ದಾರಿ 1 ಕಾರ್ಕಳ ಅಜೆಕಾರು ರಸ್ತೆ ಸಂಪರ್ಕ ಕಡಿತಗೊಂಡಿದೆ.

ಮಲ್ಪೆಯಲ್ಲಿ ದೋಣಿಗಳು ಮುಳಗಡೆ

ಭಾರಿ ಮಳೆಗೆ ಮಲ್ಪೆಯಲ್ಲಿ ಮೂರು ಬೋಟ್ಗಳು ಮುಳುಗಡೆಯಾಗಿವೆ. ಮೀನುಗಾರರು ಕಲ್ಲುಬಂಡೆಗಳ ಮೇಲೆ ಆಶ್ರಯ ಪಡೆದು ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳೂರಿನಿಂದ ಎನ್ಡಿಆರ್ಎಫ್ ತಂಡ ಕಳುಹಿಸುವಂತೆ ಮಂಗಳೂರು ಜಿಲ್ಲಾಧಿಕಾರಿಗೆ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದ ತಂಡ ನೆರೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುತ್ತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.