ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲ್ಯಾಣ ಕರ್ನಾಟಕದ ವಿವಿಧೆಡೆ ವರ್ಷಧಾರೆ: ಹಲವು ಸೇತುವೆ ಮುಳುಗಡೆ

ಹಲವು ಸೇತುವೆ ಮುಳುಗಡೆ, ಸಂಪರ್ಕ ಕಡಿತ, ಉತ್ತರಾದಿಮಠ, ಸಂಗಮೇಶ್ವರ ದೇವಾಲಯ ಜಲಾವೃತ
Published : 1 ಸೆಪ್ಟೆಂಬರ್ 2024, 19:59 IST
Last Updated : 1 ಸೆಪ್ಟೆಂಬರ್ 2024, 19:59 IST
ಫಾಲೋ ಮಾಡಿ
Comments

ಕಲಬುರಗಿ/ಬೆಳಗಾವಿ: ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಭಾನುವಾರ ದಿನವಿಡೀ ಜೋರು ಮಳೆ ಸುರಿಯಿತು. ನದಿ– ಹಳ್ಳಗಳು ಉಕ್ಕಿ ಹರಿದಿದ್ದು,
ಹಲವು ಹಳ್ಳಿಗಳ ಸಂಪರ್ಕ ಕಡಿತ ಗೊಂಡಿದೆ. ತಗ್ಗು ಪ್ರದೇಶದ ಜಮೀನು ಹಾಗೂ ಮನೆಗಳಿಗೆ ನೀರು ನುಗ್ಗಿದೆ.

ಬೆಳಗಾವಿ ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆಯೂ ಸಾಧಾರಣ ಮಳೆ ಮುಂದುವರಿದಿದೆ. ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆ
ಯಾಗುತ್ತಿದ್ದು ಮಲಪ್ರಭಾ ನದಿ ಮೈದುಂಬಿ ಹರಿಯುತ್ತಿದೆ.

ಕಾಗಿಣಾ ನದಿ ಪ್ರವಾಹದಿಂದಾಗಿ ಸೇಡಂ ತಾಲ್ಲೂಕಿನ ಮಳಖೇಡದ ಹಳೆಯ ಸೇತುವೆ ಮುಳುಗಡೆಯಾಗಿದೆ. ರಾಜ್ಯ ಹೆದ್ದಾರಿ 10ರ ಕಲಬುರಗಿ–ರಿಬ್ಬನಪಲ್ಲಿ, ಸೇಡಂ–ಬಟಗೇರಾ, ಮಳಖೇಡ–ಸಂಗಾವಿ (ಎಂ), ಚಿತ್ತಾಪುರ–ದಂಡೋತಿ, ಚಿಂಚೋಳಿಯ ಭೂತಪೂರ– ಚಿಂತಪಳ್ಳಿ, ತಾಜಲಾಪುರ ಸೇತುವೆಗಳು ಸಹ ಮುಳುಗಡೆಯಾಗಿದ್ದು, ಸಂಚಾರ ಸಂಪೂರ್ಣ ಬಂದ್‌ ಆಗಿದೆ.

ಕಾಳಗಿಯ ಐತಿಹಾಸಿಕ ನೀಲಕಂಠ ಕಾಳೇಶ್ವರ ದೇವಸ್ಥಾನ, ಮಳಖೇಡ ಉತ್ತರಾದಿ ಮಠದ ಜಯತೀರ್ಥರ ಮೂಲ ವೃಂದಾವನ, ಸಂಗಮೇಶ್ವರ ದೇವಾಲಯ ಜಲಾವೃತವಾಗಿವೆ. ಕಲಬುರಗಿ ತಾಲ್ಲೂಕಿನ ಬೆಣ್ಣೆತೊರಾ, ಚಿಂಚೋಳಿ ತಾಲ್ಲೂಕಿನ ಚಂದ್ರಂಪಳ್ಳಿ ಮತ್ತು ನಾಗರಾಳ ಜಲಾಶಯಗಳು ಭರ್ತಿಯಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅಪಾರ ಪ್ರಮಾಣ ನೀರು ನದಿಗೆ ಹರಿಸಲಾಗುತ್ತಿದೆ.

ಚಿಂಚೋಳಿಯ ಬೆನಕನಳ್ಳಿಯಲ್ಲಿ 30 ಹಾಗೂ ಕಲ್ಲೂರು ರೋಡ್ ಗ್ರಾಮದ 15ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದೆ. ಹೊಲಗಳಲ್ಲಿ ನೀರು ನಿಂತು ಕೆರೆಗಳಾಗಿ ಮಾರ್ಪಟ್ಟಿವೆ.

ಕಲಬುರಗಿಯ ಕಿರು ಮೃಗಾಲಯದಲ್ಲಿ ಒಂದೂವರೆ ಅಡಿಗಳಷ್ಟು ನೀರು ನಿಂತಿದ್ದು, ಮೃಗಾಲಯದ ಪ್ರಾಣಿಗಳು ಪರದಾಡಿದವು. ಬೆಣ್ಣೆತೊರಾ ಜಲಾಶಯದ ನೀರು ಹರಿ ಬಿಟ್ಟಿದ್ದರಿಂದ ನದಿ ಪಾತ್ರದಲ್ಲಿನ ಸೇತುವೆಗಳು ಮುಳುಗಡೆಯಾಗಿ ಕಾಳಗಿ- ಚಿತ್ತಾಪುರ- ಸೇಡಂ ಸಂಪರ್ಕ ಕಡಿತಗೊಂಡಿತು. 

ಕೊಪ್ಪಳ ತಾಲ್ಲೂಕಿನ ಹಿರೇಸಿಂದೋಗಿ ಗ್ರಾಮದಲ್ಲಿ ಮಳೆ ಹಾಗೂ ಬಿರುಸಿನ ಗಾಳಿಗೆ ಮನೆಯ ಚಾವಣಿ ಕಿತ್ತು ಹೋಗಿದೆ. ಬೀದರ್ ಜಿಲ್ಲೆಯಲ್ಲಿ 38 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಜಿಲ್ಲಾ ರಂಗಮಂದಿರ, ಡಿಡಿಪಿಐ ಕಚೇರಿ, ನೆಹರೂ ಕ್ರೀಡಾಂಗಣ, ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಜಲಾವೃತವಾದವು. ಯಾದಗಿರಿಯ ಬಸವಸಾಗರ ಜಲಾಶಯದ 25 ಗೇಟ್‌ಗಳಿಂದ 1.02 ಲಕ್ಷ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗಿದೆ. ಶಹಾಪುರ ತಾಲ್ಲೂಕಿನ ದೋರನಹಳ್ಳಿಯಲ್ಲಿ ಮನೆಗೆ ನೀರು ನುಗ್ಗಿದೆ.

ಹೆಚ್ಚಿದ ಒಳಹರಿವು:
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಜಲಾಶಯದಲ್ಲಿ ಒಳಹರಿವಿನ ಪ್ರಮಾಣ ಏರಿಕೆಯಾಗಿದೆ. 37.73 ಟಿಎಂಸಿ ಅಡಿ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯದ ನವಿಲುತೀರ್ಥ ಜಲಾಶಯದಲ್ಲಿ 36.34 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಶನಿವಾರ 5,331 ಕ್ಯುಸೆಕ್‌ ನೀರು ಜಲಾಶಯಕ್ಕೆ ಹರಿದುಬರುತ್ತಿತ್ತು. ಭಾನುವಾರ ಈ
ಪ್ರಮಾಣ 6,342 ಕ್ಯುಸೆಕ್‌ಗೆ ಏರಿಕೆಯಾಗಿದೆ.

ಗದಗ ಜಿಲ್ಲೆಯ ವಿವಿಧೆಡೆ ನಿರಂತರವಾಗಿ ಜಿಟಿಜಿಟಿ ಮಳೆ  ಮುಂದುವರಿದಿದ್ದು ಬಹುತೇಕ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಇದೇ ರೀತಿಯ ಮಳೆ ಮುಂದುವರಿದಲ್ಲಿ ತೇವಾಂಶ ಹೆಚ್ಚಾಗಿ ವಿವಿಧ ರೋಗಗಳಿಗೆ ಬೆಳೆ ಕೊಳೆಯವ ಸ್ಥಿತಿ ಬರುವ ಆತಂಕದಲ್ಲಿ ರೈತ ಸಮುದಾಯವಿದೆ.

ಮಡಿಕೇರಿ ವರದಿ: ನಗರವೂ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಮತ್ತು ಸಂಪಾಜೆಯಲ್ಲಿ ಬಿರುಸಿನ ಮಳೆ ಮುಂದುವರಿದಿದೆ. ಶನಿವಾರ ರಾತ್ರಿ ಹಾಗೂ ಭಾನುವಾರ ನಸುಕಿನಲ್ಲಿ ಜೋರು ಮಳೆ ಬಿದ್ದಿತು. ಕೊಡಗು ಜಿಲ್ಲೆಯ ಉಳಿದ ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ.

ಭಾನುವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಸಂಪಾಜೆಯಲ್ಲಿ 5, ಮಡಿಕೇರಿ ಹಾಗೂ ಸುತ್ತಮುತ್ತ 4, ಭಾಗಮಂಡಲ ಹಾಗೂ ಶಾಂತಳ್ಳಿಯಲ್ಲಿ ತಲಾ 2 ಸೆಂ.ಮೀ. ಮಳೆಯಾಗಿದೆ.

ಹೈದರಾಬಾದ್‌/ಅಮರಾವತಿ: ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ಹಲವೆಡೆ ಭಾನುವಾರವೂ ಧಾರಾಕಾರ ಮಳೆ ಮುಂದುವರಿದಿದ್ದು, ಎರಡೂ ರಾಜ್ಯಗಳ ನೂರಾರು ಗ್ರಾಮಗಳು ಜಲಾವೃತವಾಗಿದ್ದು, ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿದೆ.

ಆಂಧ್ರಪ್ರದೇಶದಲ್ಲಿ ಎರಡು ದಿನಗಳಿಂದ ಸುರಿಯು ತ್ತಿರುವ ಮಳೆಗೆ ಸಾವಿಗೀಡಾದವರ ಸಂಖ್ಯೆ 9ಕ್ಕೆ ಏರಿದ್ದರೆ, ತೆಲಂಗಾಣದಲ್ಲಿ ಭಾನುವಾರ ಒಬ್ಬ ಮಹಿಳೆ ಮೃತಪಟ್ಟಿದ್ದಾರೆ. ಅಲ್ಲದೆ ಮೂವರು ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಅವರ ಪತ್ತೆಗೆ ಶೋಧ ನಡೆದಿದೆ.

ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಮಳೆ ಪರಿಸ್ಥಿತಿ ಮತ್ತು ಹಾನಿಯ ಕುರಿತು ಅಧಿಕಾರಿಗಳ ಜತೆ ಸಭೆ ನಡೆಸಿ ಪರಿಶೀಲಿಸಿದ್ದಾರೆ. ಹೈದರಾಬಾದ್‌ನ ವಿಮಾನ ನಿಲ್ದಾಣಕ್ಕೆ ತಂದೆಯ ಜತೆ ಭಾನುವಾರ ಬೆಳಿಗ್ಗೆ ಕಾರಿನಲ್ಲಿ ಪ್ರಯಾಣಿಸು
ತ್ತಿದ್ದ ಮಹಿಳೆಯು, ತೆಲಂಗಾಣದ ಮೆಹಬೂಬಾಬಾದ್‌ ಜಿಲ್ಲೆಯ ಮರಿಪೇಡಾ ಮಂಡಲದಲ್ಲಿ ಉಕ್ಕಿ ಹರಿಯುತ್ತಿದ್ದ ಹೊಳೆಯಲ್ಲಿ ಕೊಚ್ಚಿ ಹೋಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT