ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರಿನಲ್ಲಿ ಅಧಿಕ ಮಳೆ: ಅಪಾರ ಬೆಳೆ ನಾಶ

ಕೊಪ್ಪಳ ಜಿಲ್ಲೆಯ ಹಿರೇಹಳ್ಳಕ್ಕೆ ಹರಿದು ಬಂದ ನೀರು
Last Updated 26 ಸೆಪ್ಟೆಂಬರ್ 2019, 20:08 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆ ಆರ್ಭಟ ಮುಂದುವರೆದಿದೆ. ಆದರೆ ಕರಾವಳಿ, ಮಲೆನಾಡು ಹಾಗೂ ಒಳನಾಡಿನಲ್ಲಿ ಕಡಿಮೆಯಾಗಿದೆ.

ರಾಯಚೂರು, ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಜತೆಗೆ ನಾರಾಯಣಪುರ ಜಲಾಶಯದಿಂದ ಕೃಷ್ಣಾನದಿಗೆ 1.68 ಲಕ್ಷ ಕ್ಯುಸೆಕ್‌ ನೀರು ಹೊರಬಿಡಲಾಗುತ್ತಿದ್ದು, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ನದಿ ತೀರದ ಗ್ರಾಮಸ್ಥರಿಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.

ರಾಯಚೂರು ಜಿಲ್ಲೆಯ ಗವಿಗಟ್ಟ ಹಾಗೂ ಅಲ್ದಾಳ ಗ್ರಾಮಗಳ ನಡುವಿನ ಸೇತುವೆ ಕಿತ್ತು ಹೋಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಮುಂಗಾರು ಹಂಗಾಮಿನಲ್ಲಿ ಬೆಳೆದಿದ್ದ ಬೆಳೆಗಳು ಸಂಪೂರ್ಣ ನಾಶವಾಗಿವೆ. ಮಸ್ಕಿ ಜಲಾಶಯದ ಒಳ ಹರಿವು ಹೆಚ್ಚಿದೆ.

ಕೊಪ್ಪಳ ಜಿಲ್ಲೆಯಾದ್ಯಂತ ಬುಧವಾರ ರಾತ್ರಿಯಿಂದ ಬೆಳಗಿನ ಜಾವದವರೆಗೆ ಮಳೆ ಸುರಿಯಿತು. ಜಿಲ್ಲೆಯಲ್ಲಿ ಒಟ್ಟು 107 ಮಿ.ಮೀ ಮಳೆಯಾಗಿದೆ. ತಾಲ್ಲೂಕಿನ ಕುಣಕೇರಿ ತಾಂಡಾದಲ್ಲಿ ಮಳೆಯಿಂದ 5 ಮನೆಗಳ ಶೀಟ್‌ಗಳು ಹಾರಿ ಹೋಗಿದ್ದು, ಒಂದು ಮನೆಯ ಗೋಡೆ ಕುಸಿದಿದೆ. 26 ಕಿ.ಮೀ ಉದ್ದದ ಹಿರೇಹಳ್ಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದೆ.

ಯಾದಗಿರಿ ಜಿಲ್ಲೆಯ ವಡಗೇರಾದಲ್ಲಿ ಸುರಿದ ಸತತ ಮಳೆಯಿಂದಾಗಿ, ಶಿಥಿಲಗೊಂಡ ಮಸೀದಿಯೊಂದು ಕುಸಿದು ಬಿದ್ದಿದೆ. ಶಹಾಪುರ, ಯಾದಗಿರಿ ಹಾಗೂ ಕೆಂಭಾವಿಯಲ್ಲಿ ಜಿಟಿ ಜಿಟಿ ಮಳೆಯಾಗಿದೆ.

ಧಾರವಾಡ, ಬೆಳಗಾವಿ, ವಿಜಯಪುರ, ಬಳ್ಳಾರಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಬುಧವಾರ ಮಧ್ಯರಾತ್ರಿ ಹಾಗೂ ಗುರುವಾರ ಬೆಳಿಗ್ಗೆ ಬಿರುಸಿನ ಮಳೆಯಾಗಿದೆ. ಕೆಲವೆಡೆ ಮನೆಗಳಿಗೆ ಹಾನಿಯಾಗಿದೆ. ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಬಿರುಸಿನ ಮಳೆಯಾಗಿದ್ದು, ತಾಳಿಕೋಟೆ ತಾಲ್ಲೂಕಿನ ಎರಡು ಕಡೆ ಹಳ್ಳ ಉಕ್ಕಿ, ಸೇತುವೆ ಮೇಲೆ ನೀರು ಹರಿದು ಬಸ್ ಸಂಚಾರ ಸ್ಥಗಿತಗೊಂಡಿದೆ.

ಬಾಗಲಕೋಟೆ ಜಿಲ್ಲೆಯಾದ್ಯಂತ ಬೆಳಿಗ್ಗೆ ಎರಡು ತಾಸು ಧಾರಾಕಾರ ಮಳೆಯಾಗಿದ್ದು ಕೆಲವೆಡೆ ಮನೆಗಳಿಗೆ ಹಾನಿಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ. ಮಹಾರಾಷ್ಟ್ರದಲ್ಲಿ ಮಳೆಯಾದ ಪರಿಣಾಮ ರಾಜಾಪುರ ಬ್ಯಾರೇಜ್‌ ಮೂಲಕ ಕೃಷ್ಣಾ ನದಿಗೆ 76 ಸಾವಿರ ಕ್ಯುಸೆಕ್‌ ನೀರು ಹರಿದುಬಂದಿದೆ. ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ– ಯಡೂರು ಸೇತುವೆ ಜಲಾವೃತವಾಗಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಸಂಡೂರು ಸುತ್ತಮುತ್ತ ಮಳೆಯಿಂದಾಗಿ ನಾಲ್ಕು ಮನೆಗಳು ಹಾನಿಗೀಡಾಗಿವೆ. ಹೊಸಪೇಟೆ ತಾಲ್ಲೂಕಿನ ಹಂಪಿಯಲ್ಲಿ ಬಿರುಸಿನ ಮಳೆಯಾಗಿದ್ದರಿಂದ ವಿರೂಪಾಕ್ಷೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಮೊಣಕಾಲುದ್ದ ನೀರು ನಿಂತಿತ್ತು. ನಾಲ್ಕೈದು ದಿನಗಳಿಂದ ಬಳ್ಳಾರಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದ ಮೂರು ಸಾವಿರ ಹೆಕ್ಟೇರ್ ಬೆಳೆ ನಷ್ಟವಾಗಿದೆ. ಇದರಿಂದ ₹4.3 ಕೋಟಿ ನಷ್ಟ ಆಗಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.

ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT