ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಚನೆ ಪ್ರಕರಣಗಳ ಸಮಗ್ರ ಮಾಹಿತಿ ಸಲ್ಲಿಕೆಗೆ ಹೈಕೋರ್ಟ್‌ ನಿರ್ದೇಶನ

Published 15 ಏಪ್ರಿಲ್ 2024, 15:58 IST
Last Updated 15 ಏಪ್ರಿಲ್ 2024, 15:58 IST
ಅಕ್ಷರ ಗಾತ್ರ

ಬೆಂಗಳೂರು: ‘ಐ ಮಾನಿಟರಿ ಅಡ್ವೈಸರಿ (ಐಎಂಎ) ಕಂಪನಿಯ ಬಹುಕೋಟಿ ವಂಚನೆಯೂ ಸೇರಿದಂತೆ ಇನ್ನಿತರ ವಂಚನೆ ಪ್ರಕರಣಗಳಲ್ಲಿ ಸಕ್ಷಮ ಪ್ರಾಧಿಕಾರಗಳಿಂದ ಎಷ್ಟು ಆಸ್ತಿ ವಶಪಡಿಸಿಕೊಂಡು ಹರಾಜು ಮಾಡಲಾಗಿದೆ ಹಾಗೂ ಎಷ್ಟು ಠೇವಣಿದಾರಿಗೆ ಹಣ ಹಿಂತಿರುಗಿಸಲಾಗಿದೆ ಎಂಬುದರ ಅಂಕಿ-ಅಂಶಗಳನ್ನು ಒಳಗೊಂಡ ಸಮಗ್ರ ವರದಿ ಸಲ್ಲಿಸಿ’ ಎಂದು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

'ಠೇವಣಿದಾರರಿಗೆ ಶೀಘ್ರವೇ ಪರಿಹಾರ ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ನರೇಂದ್ರ ಕುಮಾರ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರು, ‘ಐಎಂಎ ಸೇರಿದಂತೆ 20 ಕಂಪನಿಗಳಿಂದ ಸುಮಾರು ಒಂದು ಲಕ್ಷ ಠೇವಣಿದಾರರಿಗೆ ವಂಚನೆಯಾಗಿದೆ. ಹಣ ಕಳೆದುಕೊಂಡಿರುವವರು ಸಂಕಷ್ಟದಲ್ಲಿ ಇದ್ದಾರೆ. ಐಎಂಎ ಪ್ರಕರಣದಲ್ಲಿ ಮಾತ್ರವೇ ಒಂದಷ್ಟು ಸಂತ್ರಸ್ತರಿಗೆ ಹಣ ಹಿಂತಿರುಗಿಸಲಾಗಿದೆ. ಆದರೆ, ಉಳಿದ ಕಂಪನಿಗಳ ವಿಚಾರದಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಆಸ್ತಿಗಳನ್ನು ವಶಪಡಿಸಿಕೊಂಡಿರುವ ಹಾಗೂ ಠೇವಣಿದಾರರಿಂದ ಮರು ಪಾವತಿ ಕ್ಲೇಮು ಸ್ವೀಕರಿಸಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ’ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಇದಕ್ಕೆ ಪ್ರತಿಯಾಗಿ ಸಕ್ಷಮ ಪ್ರಾಧಿಕಾರಗಳ ಪರ ವಕೀಲರು, ಐಎಂಎ ಸೇರಿದಂತೆ 20 ವಂಚನೆ ಪ್ರಕರಣಗಳಲ್ಲಿ ರಚಿಸಲಾಗಿರುವ ಸಕ್ಷಮ ಪ್ರಾಧಿಕಾರಗಳು, ಆಸ್ತಿ ಮುಟ್ಟುಗೋಲು, ಹರಾಜು ಹಾಗೂ ಠೇವಣಿದಾರರಿಗೆ ಹಣ ಮರುಪಾವತಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳನ್ನು ನ್ಯಾಯಪೀಠಕ್ಕೆ ವಿವರಿಸಿದರು.

ಇದನ್ನು ಆಲಿಸಿದ ನ್ಯಾಯಪೀಠ, ‘ಠೇವಣಿದಾರರು ಕಷ್ಟಪಟ್ಟು ದುಡಿದ ಹಣವನ್ನು ಕಂಪನಿಗಳಲ್ಲಿ ತೊಡಗಿಸಿರುತ್ತಾರೆ. ಕಂಪನಿಗಳ ವಂಚನೆಯಿಂದ ಅವರೆಲ್ಲಾ ತೊಳಲಾಡುತ್ತಿದ್ದಾರೆ. ಸಕ್ಷಮ ಪ್ರಾಧಿಕಾರಗಳ ಆದ್ಯತೆ ಠೇವಣಿದಾರರ ಹಿತ ರಕ್ಷಿಸುವಂತಿರಬೇಕು. ಠೇವಣಿದಾರರಿಗೆ ಶೀಘ್ರ ಹಣ ಮರುಪಾವತಿಯಾಗಬೇಕು. ಯಾವುದೇ ಕಾರಣಕ್ಕೂ ವಿಳಂಬವಾಗಬಾರದು. ಅದಕ್ಕಾಗಿ ಪ್ರಾಧಿಕಾರಗಳು ತುರ್ತಾಗಿ ಎಲ್ಲಾ ಕ್ರಮ ಕೈಗೊಳ್ಳಬೇಕು’ ಎಂದು ತಾಕೀತು ಮಾಡಿತು.

‘ಸಕ್ಷಮ ಪ್ರಾಧಿಕಾರಗಳು ಐಎಂಎ ಸೇರಿದಂತೆ ಇನ್ನಿತರ ಕಂಪನಿಗಳಿಂದ ಈವರೆಗೂ ಎಷ್ಟು ಆಸ್ತಿ ವಶಪಡಿಸಿಕೊಂಡಿವೆ. ಅದರಲ್ಲಿ ಎಷ್ಟನ್ನು ಹರಾಜು ಮಾಡಿ, ಎಷ್ಟು ಠೇವಣಿದಾರಿಗೆ ಹಣ ಹಿಂತಿರುಗಿಸಲಾಗಿದೆ. ಎಷ್ಟು ಠೇವಣಿದಾರರಿಗೆ ಹಣ ಪಾವತಿಸಬೇಕಿದೆ ಎಂಬೆಲ್ಲಾ ಅಂಶಗಳು ಕುರಿತು ಸಮಗ್ರ ವರದಿ ಸಲ್ಲಿಸಿ’ ಎಂದು ಸಕ್ಷಮ ಪ್ರಾಧಿಕಾರದ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಇದೇ 23ಕ್ಕೆ ಮುಂದೂಡಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT