ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೆನ್‌ಡ್ರೈವ್ ಪ್ರಕರಣ: ಪ್ರಾಸಿಕ್ಯೂಷನ್‌ಗೆ ಹೈಕೋರ್ಟ್ ನೋಟಿಸ್‌

Published 24 ಮೇ 2024, 15:38 IST
Last Updated 24 ಮೇ 2024, 15:38 IST
ಅಕ್ಷರ ಗಾತ್ರ

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ಫೋಟೊ ಹಾಗೂ ವಿಡಿಯೊಗಳನ್ನು ಬಹಿರಂಗಗೊಳಿಸಿದ ಪೆನ್ ಡ್ರೈವ್ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ನಾಲ್ವರು ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಪ್ರಾಸಿಕ್ಯೂಷನ್‌ಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.

ಈ ಸಂಬಂಧ ಆರೋಪಿಗಳಾದ ನವೀನ್‌ ಗೌಡ ಅಲಿಯಾಸ್‌ ಎನ್‌.ಆರ್‌. ನವೀನ್‌ ಕುಮಾರ್‌, ಎನ್‌. ಕಾರ್ತಿಕ್‌, ಬಿ.ಸಿ. ಚೇತನ್ ಕುಮಾರ್‌ ಹಾಗೂ ಎಚ್‌.ವಿ. ಪುಟ್ಟರಾಜು ಸಲ್ಲಿಸಿರುವ ಅರ್ಜಿಗಳನ್ನು ರಜಾಕಾಲದ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಎಸ್‌.ರಾಚಯ್ಯ ವಿಚಾರಣೆ ನಡೆಸಿದರು.

ಪ್ರತಿವಾದಿ ರಾಜ್ಯ ಪ್ರಾಸಿಕ್ಯೂಷನ್‌ಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿ, ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿದರು.

ಪ್ರಕರಣವೇನು?: ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಹಾಗೂ ಬಿಜೆಪಿ ಚುನಾವಣಾ ಏಜೆಂಟ್‌ ಆಗಿದ್ದ ಎಂ.ಜಿ. ಪೂರ್ಣಚಂದ್ರ ತೇಜಸ್ವಿ, 2024ರ ಏಪ್ರಿಲ್ 23ರಂದು ಹಾಸನ ಸೆನ್‌ ಪೊಲೀಸ್‌ ಠಾಣೆಗೆ ಪೆನ್ ಡ್ರೈವ್ ಹಂಚಿಕೆ ಆರೋಪದಡಿ ದೂರು ನೀಡಿದ್ದರು.

‘ಹಾಸನ ಕ್ಷೇತ್ರದ ಲೋಕಸಭಾ ಚುನಾವಣೆ ಏಪ್ರಿಲ್‌ 26ರಂದು ನಿಗದಿಯಾಗಿತ್ತು. ಆರೋಪಿಗಳಾದ ನವೀನ್‌ ಗೌಡ ಹಾಗೂ ಇತರರು ಏಪ್ರಿಲ್‌ 21ರಂದು ಸಂಜೆ 6.30ರ ನಂತರ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿರುವ ಜೆಡಿಎಸ್‌ ಮತ್ತು ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರ ನಕಲಿ ಅಶ್ಲೀಲ ಭಾವಚಿತ್ರ ಮತ್ತು ವಿಡಿಯೊಗಳನ್ನು ಒಳಗೊಂಡ ಸಿ.ಡಿ ಮತ್ತು ಪೆನ್‌ ಡ್ರೈವ್‌ಗಳನ್ನು ಸಿದ್ಧಪಡಿಸಿಕೊಂಡು ಕ್ಷೇತ್ರ ವ್ಯಾಪ್ತಿಯ ಮನೆ ಮನೆಗಳಿಗೆ ತೆರಳಿ ಮತದಾರರಿಗೆ ಹಂಚಿದ್ದಾರೆ. ವಾಟ್ಸ್‌ಆ್ಯಪ್‌ ಹಾಗೂ ಮೊಬೈಲ್‌ಗಳಲ್ಲಿ ತೋರಿಸಿ ಜನರಿಗೆ ದಿಕ್ಕು ತಪ್ಪಿಸಿ ಪ್ರಜ್ವಲ್‌ ರೇವಣ್ಣ ಅವರಿಗೆ ಮತ ಹಾಕದಂತೆ ಪ್ರಚೋದಿಸುತ್ತಿದ್ದಾರೆ. ಈ ಮೂಲಕ ಚುನಾವಣೆಯಲ್ಲಿ ನ್ಯಾಯಯುತ ಮತದಾನ ನಡೆಯುವುದನ್ನು ತಪ್ಪಿಸುವ ದುಷ್ಕೃತ್ಯ ಎಸಗಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಿದ್ದರು.

ಈ ದೂರಿನ ಮೇರೆಗೆ ಪೊಲೀಸರು, ಭಾರತೀಯ ದಂಡ ಸಂಹಿತೆ-1860ರ (ಐಪಿಸಿ) ಕಲಂ 171 (ಜಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ-2000ದ ಕಲಂ 67 (ಎ) ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿದ್ದರು. ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಲು ಸುಳ್ಳು ಹೇಳಿಕೆ ಪ್ರಕಟಿಸಿದ, ವಿದ್ಯುನ್ಮಾನ ರೂಪದಲ್ಲಿ ಅಶ್ಲೀಲ ಫೋಟೊ ಹಾಗೂ ವಿಡಿಯೊ ಪ್ರಕಟಿಸಿದ ಮತ್ತು ರವಾನಿಸಿದ ಆರೋಪಗಳನ್ನು ಹೊರಿಸಲಾಗಿತ್ತು.

ಬಂಧನ ಭೀತಿ ಎದುರಾದ ಕಾರಣ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಅಂತೆಯೇ, ನಿರೀಕ್ಷಣಾ ಜಾಮೀನು ಕೋರಿ ಹಾಸನದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸೆಷನ್ಸ್ ನ್ಯಾಯಾಲಯ ಈ ಅರ್ಜಿಗಳನ್ನು ಮೇ 8ರಂದು ವಜಾಗೊಳಿಸಿ ಆದೇಶಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT