ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಅಪಘಾತ: ವಿಮಾ ಪರಿಹಾರ ಹೆಚ್ಚಿಸಿದ ಹೈಕೋರ್ಟ್‌

Published 8 ಮೇ 2023, 19:31 IST
Last Updated 8 ಮೇ 2023, 19:31 IST
ಅಕ್ಷರ ಗಾತ್ರ

ಬೆಂಗಳೂರು: ರಸ್ತೆ ಅಪಘಾತದಲ್ಲಿ ಒಂದು ಕಣ್ಣು ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರ ಮೇಲ್ಮನವಿಯನ್ನು ಪುರಸ್ಕರಿಸಿರುವ ಹೈಕೋರ್ಟ್, ಪರಿಹಾರದ ಮೊತ್ತವನ್ನು ₹ 77 ಸಾವಿರದಿಂದ ₹ 5.03 ಲಕ್ಷಕ್ಕೆ ಹೆಚ್ಚಿಸಿ ಆದೇಶಿಸಿದೆ.

ಈ ಸಂಬಂಧ ಬಾಗಲಕೋಟೆ ಜಿಲ್ಲೆಯ ಬಿಸಲದಿನ್ನಿ ಗ್ರಾಮದ ಪರಸಪ್ಪ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದೆ.

’ಕಣ್ಣು ಎಂಬುದು ಅತ್ಯಂತ ಸೂಕ್ಷ್ಮ ಅಂಗ. ಅರ್ಜಿದಾರರು ಅಪಘಾತದಲ್ಲಿ ತಮ್ಮ ಒಂದು ಕಣ್ಣು ಕಳೆದುಕೊಂಡಿರುವ ಕಾರಣ ಇದು ಅವರ ಬದುಕಿನ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ. ಹೀಗಾಗಿ, ಅರ್ಜಿದಾರರಿಗೆ ಬಾಗಲಕೋಟೆ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಮಂಡಳಿ ನಿಗದಿಪಡಿಸಿರುವ ₹ 77,500 ಪರಿಹಾರದ ಮೊತ್ತವನ್ನು ₹ 5,03,600ಕ್ಕೆ ಹೆಚ್ಚಳ ಮಾಡಲಾಗಿದೆ. ಸಂತ್ರಸ್ತ  ಅರ್ಜಿದಾರರಿಗೆ ರಾಯಲ್ ಸುಂದರಂ ವಿಮಾ ಕಂಪನಿ ನಿಯಮಿತ ಶೇ 6ರ ಬಡ್ಡಿಯಂತೆ ಪರಿಹಾರದ ಮೊತ್ತವನ್ನು ಪಾವತಿಸಬೇಕು‘ ಎಂದು ಆದೇಶಿಸಿದೆ.

ಪ್ರಕರಣವೇನು?: ಪರಸಪ್ಪ ಅವರು 2008ರ ಡಿಸೆಂಬರ್ 2ರಂದು ಮೋಟಾರ್ ಬೈಕ್‌ನಲ್ಲಿ ತೆರಳುತ್ತಿದ್ದಾಗ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದರಲ್ಲದೆ, ತಮ್ಮ ಬಲಗಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದರು. ಮೋಟಾರು ವಾಹನ ಅಪಘಾತ ನ್ಯಾಯಮಂಡಳಿ ₹ 77,500 ಪರಿಹಾರವನ್ನು ನಿಗದಿಪಡಿಸಿತ್ತು. ಇದನ್ನು ಪ್ರಶ್ನಿಸಿದ್ದ ಅವರು ಪರಿಹಾರದ ಮೊತ್ತವನ್ನು ಹೆಚ್ಚಿಸುವಂತೆ ಕೋರಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. 

ಸಂತ್ರಸ್ತರನ್ನು ಸಾಕ್ಷಿಗಳನ್ನಾಗಿ ಪರಿಗಣಿಸಿ: ಹೈಕೋರ್ಟ್‌

ಬೆಂಗಳೂರು: ’ಮಹಿಳೆಯರ ವಿರುದ್ಧದ ಅತ್ಯಾಚಾರ ಅಥವಾ ದೌರ್ಜನ್ಯ ಪ್ರಕರಣಗಳಲ್ಲಿ ಬದುಕುಳಿದ ಸಂತ್ರಸ್ತರನ್ನು ಸಾಕ್ಷಿಗಳನ್ನಾಗಿ ಪರಿಗಣಿಸಬೇಕು’ ಎಂದು ಆದೇಶಿಸಿರುವ ಹೈಕೋರ್ಟ್‌, ‘ಒಂದು ವೇಳೆ ಬದುಕುಳಿದವರನ್ನು ಸಾಕ್ಷಿಗಳನ್ನಾಗಿ ಪರಿಗಣಿಸದೇ ಹೋದಲ್ಲಿ, ಅಂತಹ ಪ್ರಕರಣವು ತನ್ನ ಮಹತ್ವ
ಕಳೆದುಕೊಳ್ಳುತ್ತದೆ‘ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

‘ನನ್ನ ಪತ್ನಿಯನ್ನು ಬಸವಕಲ್ಯಾಣಕ್ಕೆ ಮೋಟಾರ್ ಬೈಕ್‌ನಲ್ಲಿ ಕರೆದೊಯ್ಯುತ್ತಿದ್ದಾಗ ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಅಳವಾಯಿ ಗ್ರಾಮದ ನಿವಾಸಿಯೊಬ್ಬರು ಆಕೆಯನ್ನು ಬಲವಂತವಾಗಿ ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ‘ ಎಂದು ವ್ಯಕ್ತಿಯೊಬ್ಬರು 2016ರ ಮಾರ್ಚ್ 19ರಂದು ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆದರೆ, ’ದೋಷಾರೋಪ ಪಟ್ಟಿಯಲ್ಲಿ ಸಂತ್ರಸ್ತೆಯನ್ನು ಸಾಕ್ಷಿಯನ್ನಾಗಿ ಹೆಸರಿಸಿಲ್ಲ’ ಎಂಬ ಅಂಶದ ಆಧಾರದಲ್ಲಿ ಆರೋಪಿಯು, ಜಾಮೀನು ಮಂಜೂರು ಮಾಡುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಕುರಿತ ಅರ್ಜಿಯನ್ನು ಕಲಬುರಗಿ ಪೀಠದಲ್ಲಿನ ನ್ಯಾಯಮೂರ್ತಿ ಎಸ್.ರಾಚಯ್ಯ ಅವರು ವಿಚಾರಣೆ ನಡೆಸಿ, ಆರೋಪಿ ಅರ್ಜಿದಾರನಿಗೆ ಜಾಮೀನು ಮಂಜೂರು ಮಾಡಿದ್ದಾರೆ. ಅಂತೆಯೇ, ’ತನಿಖಾಧಿಕಾರಿಯು, ಪ್ರಕರಣದ ಸಂತ್ರಸ್ತೆಯನ್ನು ಸಾಕ್ಷಿಯನ್ನಾಗಿ ಪರಿಗಣಿಸದೆ ತಪ್ಪೆಸಗಿದ್ದಾರೆ. ಈ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶಿಸಿದ್ದಾರೆ.

ಗನ್‌ ತಯಾರಿಸಿ ಮಾರಾಟ ಆರೋಪ: ಜಾಮೀನು ಮಂಜೂರು

ಬೆಂಗಳೂರು: ಅಕ್ರಮವಾಗಿ ಗನ್‌ ತಯಾರಿಸಿ ಮಾರಾಟ ಮಾಡಿದ ಮತ್ತು ಸ್ಫೋಟಕಗಳನ್ನು ಸಂಗ್ರಹಿಸಿದ ಆರೋಪಿಯೊಬ್ಬರಿಗೆ ಹೈಕೋರ್ಟ್, ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಈ ಸಂಬಂಧ ಜಾಮೀನು ಕೋರಿ ತುಮಕೂರು ಜಿಲ್ಲೆ ಊರ್ಡಿಗೆರೆ ಹೋಬಳಿ ದುರ್ಗದಹಳ್ಳಿಯ ಕೃಷ್ಣಪ್ಪ (43) ಎಂಬುವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದೆ.

’ಆರೋಪಿಯು ₹ 2 ಲಕ್ಷ  ಮೊತ್ತದ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತೆ ಒದಗಿಸಬೇಕು. ಸಾಕ್ಷ್ಯ ಗಳ ನಾಶಕ್ಕೆ ಯತ್ನಿಸಬಾರದು. ಯಾವುದೇ ವಿಳಂಬವಿಲ್ಲದೆ ಪ್ರಕರಣದ ವಿಚಾರಣೆ ಎದುರಿಸಬೇಕು. ನ್ಯಾಯಾಲಯದ ಅನುಮತಿ ಇಲ್ಲದೆ ವ್ಯಾಪ್ತಿ ಪ್ರದೇಶ ಬಿಟ್ಟು ತೆರಳಬಾರದು’ ಎಂದು ಷರತ್ತುಗಳನ್ನು ನ್ಯಾಯಪೀಠ ವಿಧಿಸಿದೆ.

ಪ್ರಕರಣವೇನು?: ’ಅರ್ಜಿದಾರ ಹಾಗೂ ಮತ್ತೊಬ್ಬ ವ್ಯಕ್ತಿಯು ಅಕ್ರಮವಾಗಿ ಗನ್‌ಗಳ ತಯಾರಿಕೆ, ಮಾರಾಟ ಹಾಗೂ ಸ್ಫೋಟಕ ವಸ್ತುಗಳ ಸಂಗ್ರಹಣೆಯಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ‘ ಎಂಬ ಮಾಹಿತಿ ಆಧರಿಸಿ ಕ್ಯಾತ್ಸಂದ್ರ ಠಾಣೆಯ ಪೊಲೀಸರು, 2022ರ ಜನವರಿ 12ರಂದು ಅರ್ಜಿದಾರನ ನಿವಾಸದ ಮೇಲೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಪರವಾನಗಿ ಇಲ್ಲದ ಗನ್‌ಗಳು ಹಾಗೂ ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿತ್ತು. ಆರೋಪಿ ತಯಾರಿಸಿದ್ದ ಗನ್‌ಗಳನ್ನು ಪ್ರಕರಣದ 2ರಿಂದ 9ನೇ ಆರೋಪಿಗಳಿಗೆ ಮಾರಾಟ ಮಾಡಿದ್ದ ಹಿನ್ನೆಲೆಯಲ್ಲಿ ಅದೇ ದಿನ ಎಲ್ಲ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇತರ ಆರೋಪಿಗಳು ಜಾಮೀನು ಪಡೆದಿದ್ದರು. ಆದರೆ, ಪ್ರಕರಣದ ಮೊದಲ ಆರೋಪಿಯಾದ ಕೃಷ್ಣಪ್ಪ ಅವರಿಗೆ ಜಾಮೀನು ನೀಡಲು ವಿಚಾರಣಾ ನ್ಯಾಯಾಲಯ ನಿರಾಕರಿಸಿತ್ತು.

ಹೈಕೋರ್ಟ್ ಮೆಟ್ಟಿಲೇರಿದ್ದ ಕೃಷ್ಣಪ್ಪ, ’ನಾನು 1 ವರ್ಷ 3 ತಿಂಗಳಿನಿಂದ ಜೈಲಿನಲ್ಲಿದ್ದೇನೆ. ಈಗಾಗಲೇ ತನಿಖೆ ಪೂರ್ಣಗೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಆದ್ದರಿಂದ, ಜಾಮೀನು ಮಂಜೂರು ಮಾಡಬೇಕು‘ ಎಂದು ಕೋರಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ‘ವೃತ್ತಿಯಲ್ಲಿ ಬಡಗಿಯಾಗಿರುವ ಅರ್ಜಿದಾರನ ವಿರುದ್ಧ ಸಿಂಗಲ್ ಬ್ಯಾರೆಲ್ ಗನ್‌ಗಳನ್ನು ತಯಾರಿಸಿ, ಪರವಾನಗಿ ಹೊಂದಿರದ ವ್ಯಕ್ತಿಗಳಿಗೆ (ಪ್ರಕರಣದ ಇತರ ಆರೋಪಿಗಳು) ಮಾರಾಟ ಮಾಡಿದ ಆರೋಪವಿದೆ. ಪೊಲೀಸರು, ಆರೋಪಿಯಿಂದ ಕೆಲವು ಗನ್‌ಗಳು ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯು 2022ರ ಜನವರಿ 12ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈಗಾಗಲೇ ತನಿಖೆ ಪೂರ್ಣಗೊಂಡಿದ್ದು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಹೀಗಾಗಿ, ವಿಚಾರಣೆಗಾಗಿ ಅರ್ಜಿದಾರನನ್ನು ನ್ಯಾಯಾಂಗ
ಬಂಧನದಲ್ಲಿ ಇರಿಸುವ ಅವಶ್ಯಕತೆ ಕಂಡುಬರುತ್ತಿಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT