ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೂರ್ತಿ ಶರಣರ ವಿರುದ್ಧದ ಪ್ರಕರಣಗಳ ವಿಚಾರಣೆಗೆ ಹೈಕೋರ್ಟ್ ತಡೆ

Published 22 ನವೆಂಬರ್ 2023, 0:47 IST
Last Updated 22 ನವೆಂಬರ್ 2023, 0:47 IST
ಅಕ್ಷರ ಗಾತ್ರ

ಬೆಂಗಳೂರು: ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯಡಿ ಆರೋಪಿಯಾಗಿರುವ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿದೆ.

ಚಿತ್ರದುರ್ಗ ಜಿಲ್ಲಾ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರ ಮುಂದಿರುವ ಪ್ರಕರಣಗಳ ವಿಚಾರಣೆಗೆ ತಡೆ ನೀಡುವಂತೆ ಕೋರಿ ಶರಣರು ಸಲ್ಲಿಸಿದ್ದ ನಾಲ್ಕು ಅರ್ಜಿಗಳನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಚಿತ್ರದುರ್ಗ ಜಿಲ್ಲಾ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರ ಮುಂದಿರುವ ಶರಣರ ವಿರುದ್ಧದ ಪ್ರಕರಣಗಳ ಕಡತಗಳನ್ನು ತರಿಸಿಕೊಂಡು ಪರಿಶೀಲಿಸಿ ವರದಿ ಸಲ್ಲಿಸುವಂತೆ ರಿಜಿಸ್ಟ್ರಾರ್ ಜನರಲ್ ಅವರಿಗೆ ನಿರ್ದೇಶನ ನೀಡಿತು. ಅಂತೆಯೇ ಸ್ಥಳೀಯ ಪಬ್ಲಿಕ್ ಪ್ರಾಸಿಕ್ಯೂಟರ್ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಗೆ ಆದೇಶಿಸಿತು. ನಾಲ್ಕೂ ಅರ್ಜಿಗಳ ವಿಲೇವಾರಿ ಆಗುವ ತನಕ ಅವುಗಳ ಮುಂದಿನ ವಿಚಾರಣೆಗೆ ತಡೆ ನೀಡಿತು.

ವಿಚಾರಣೆ ವೇಳೆ ಶರಣರ ಪರ ಹಾಜರಾಗಿದ್ದ ಹಿರಿಯ ವಕೀಲ ಸಿ.ವಿ.ನಾಗೇಶ್, ‘ಈ ಪ್ರಕರಣದ ವಿಚಾರಣೆಯಲ್ಲಿ ಜಿಲ್ಲಾ ನ್ಯಾಯಾಧೀಶರು ಪೂರ್ವಗ್ರಹ ಪೀಡಿತ ಮನೋಭಾವದಿಂದ ವರ್ತಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಹೈಕೋರ್ಟ್ ಜಾಮೀನು ನೀಡಿದರೂ ತಕ್ಷಣವೇ ಆರೋಪಿಯ ಬಿಡುಗಡೆಗೆ ಆದೇಶಿಸಲಿಲ್ಲ. ಇದರಿಂದಾಗಿ ಶರಣರು ಮೂರು ದಿನಗಳ ಕಾಲ ಜೈಲಿನಲ್ಲಿ ಇರಬೇಕಾಯ್ತು’ ಎಂದರು.

‘ವಿಚಾರಣೆ ಮುಂದೂಡುವಂತೆ ಹೈಕೋರ್ಟ್ ಆದೇಶ ಇದ್ದರೂ ವಿಚಾರಣೆ ನಡೆಸಲಾಗಿದೆ. ಚಿತ್ರದುರ್ಗಕ್ಕೆ ಬರದಂತೆ ಹೈಕೋರ್ಟ್ ಷರತ್ತು ವಿಧಿಸಿದ್ದರೂ ವಾರಂಟ್ ಮೂಲಕ‌ ಅವರನ್ನು ಚಿತ್ರದುರ್ಗ ಜಿಲ್ಲೆಗೆ ಕರೆತರುವಂತೆ ಆದೇಶಿಸಿದ್ದಾರೆ. ಪಾಸ್ ಪೋರ್ಟ್ ವಶಕ್ಕೆ ನೀಡಿದಾಗಲೂ ಅದರ ಪರಿಶೀಲನೆಗೆ ಕಳುಹಿಸಿದ್ದಾರೆ. ಹೈಕೋರ್ಟ್ ಆದೇಶ ವಿಫಲಗೊಳಿಸಲು ಬಂಧನಕ್ಕೆ ಆದೇಶಿಸಿದ್ದಾರೆ. ಹೀಗಾಗಿ, ಸಾಕ್ಷ್ಯ ವಿಚಾರಣೆಯನ್ನು ಬೇರೆ ಕೋರ್ಟ್‌ಗೆ ವರ್ಗಾಯಿಸಲು ಆದೇಶಿಸಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಜಿಲ್ಲಾ ನ್ಯಾಯಾಧೀಶರು ಪ್ರಾಸಿಕ್ಯೂಟರ್ ಸಲ್ಲಿಸಿದ ಮೆಮೊ ಅನ್ನು ಕಣ್ಣು ಮುಚ್ಚಿ ಅಂಗೀಕರಿಸಿದ್ದಾರೆ. ಆರೋಪಿಯನ್ನು ಬಿಡುಗಡೆ ಮಾಡಿದ ಜೈಲು ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ. ಹೈಕೋರ್ಟ್ ಆದೇಶವನ್ನು ಪಾಲಿಸದೇ ಇರುವ ಅವರ ಈ ಕ್ರಮ ಸರಿಯಲ್ಲ. ಹೈಕೋರ್ಟ್ ಆದೇಶದ ಬಗ್ಗೆ ಅವರು ತಮ್ಮ ಅಜ್ಞಾನವನ್ನು ಪ್ರದರ್ಶಿಸಿದ್ದಾರೆ. ಸಾಲು ಸಾಲಾಗಿ ತಪ್ಪುಗಳನ್ನು ಮಾಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿತು.

‘ಆರೋಪಿ ಯಾರೇ ಅಗಿರಲಿ ನಮಗದು ಮುಖ್ಯವಲ್ಲ. ಆರೋಪಿಯನ್ನು ತರಾತುರಿಯಲ್ಲಿ ಬಂಧಿಸಿದ ಕ್ರಮ ಸರಿಯಲ್ಲ. ಹೈಕೋರ್ಟ್ ಆದೇಶ ನಿಷ್ಫಲಗೊಳಿಸುವ ಯತ್ನವನ್ನು ಒಪ್ಪಲಾಗುವುದಿಲ್ಲ’ ಎಂದು ನುಡಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT