ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಶ್ರೀಶಾನಂದ ಹೇಳಿಕೆಗೆ ಕೆರಳಿದ ಸುಪ್ರೀಂ ಕೋರ್ಟ್

Published : 20 ಸೆಪ್ಟೆಂಬರ್ 2024, 19:29 IST
Last Updated : 20 ಸೆಪ್ಟೆಂಬರ್ 2024, 19:29 IST
ಫಾಲೋ ಮಾಡಿ
Comments

ನವದೆಹಲಿ: ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಕರಣಗಳ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿ ವೇದವ್ಯಾಸಾಚಾರ್‌ ಶ್ರೀಶಾನಂದ ನೀಡಿರುವ ‘ಆಕ್ಷೇಪಾರ್ಹ ಹೇಳಿಕೆ’ಗಳನ್ನು ಸುಪ್ರೀಂ ಕೋರ್ಟ್‌ ಗಂಭೀರವಾಗಿ ಪರಿಗಣಿಸಿ ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿದೆ. ಈ ಸಂಬಂಧ ಎರಡು ದಿನಗಳಲ್ಲಿ ವಿಸ್ತೃತ ವರದಿ ಸಲ್ಲಿಸುವಂತೆ ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್ ಅವರಿಗೆ ನಿರ್ದೇಶನ ನೀಡಿದೆ. 

ಶ್ರೀಶಾನಂದ ಅವರ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ವ್ಯಾಪಕ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್. ಗವಾಯಿ, ಸೂರ್ಯಕಾಂತ್ ಮತ್ತು ಹೃಷಿಕೇಶ್ ರಾಯ್ ಅವರನ್ನೊಳಗೊಂಡ ಪೀಠವು, ‘ಸಾಮಾಜಿಕ ಮಾಧ್ಯಮಗಳ ಈ ಯುಗದಲ್ಲಿ ನ್ಯಾಯಾಲಯವು ಕೆಲವೊಂದು ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ’ ಎಂದು ಇಂಗಿತ ವ್ಯಕ್ತಪಡಿಸಿತು.

‘ನ್ಯಾಯಾಂಗದ ‍‍‍ಪ್ರಕ್ರಿಯೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ ಹಾಗೂ ಅದಕ್ಕೆ ಅನುಗುಣವಾಗಿ ನಾವು ಕಾರ್ಯನಿರ್ವಹಿಸಬೇಕು’ ಎಂದು ಅಭಿಪ್ರಾಯಪಟ್ಟಿತು. 

‘ನ್ಯಾಯಾಲಯದ ಕಲಾಪದ ಸಂದರ್ಭದಲ್ಲಿ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿಂದ ಬಂದಿರುವ ಕೆಲವು ಪ್ರತಿಕ್ರಿಯೆಗಳ ಬಗ್ಗೆ ಮಾಧ್ಯಮ ವರದಿಗಳ ಮೂಲಕ ನಮ್ಮ ಗಮನ ಸೆಳೆಯಲಾಗಿದೆ’ ಎಂದು ಪೀಠ ಹೇಳಿತು. ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ನೆರವು ನೀಡುವಂತೆ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಪೀಠ ಸೂಚಿಸಿತು. ಈ ವೇಳೆ ಅವರಿಬ್ಬರು ನ್ಯಾಯಾಲಯದಲ್ಲಿ ಹಾಜರಿದ್ದರು. 

ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರೊಂದಿಗೆ ಸಮಾಲೋಚಿಸಿ ರಿಜಿಸ್ಟ್ರಾರ್‌ ಜನರಲ್‌ ಎರಡು ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ಪೀಠ ನಿರ್ದೇಶನ ನೀಡಿತು. ಪ್ರಕರಣದ ವಿಚಾರಣೆಯನ್ನು ಬುಧವಾರಕ್ಕೆ (ಸೆ.25) ಮುಂದೂಡಲಾಗಿದೆ. 

ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ವೀಡಿಯೊವನ್ನು ಪೋಸ್ಟ್‌ ಮಾಡಿ, ‘ಈ ನ್ಯಾಯಮೂರ್ತಿಯವರ ವಿರುದ್ಧ ಮುಖ್ಯ ನ್ಯಾಯಮೂರ್ತಿ ಅವರು ಸ್ವಯಂಪ್ರೇರಿತ ಕ್ರಮ ಕೈಗೊಳ್ಳಬೇಕು, ಲಿಂಗ ಸಂವೇದನೆ ತರಬೇತಿಗಾಗಿ ಅವರನ್ನು ಕಳುಹಿಸಬೇಕು’ ಎಂದು ಒತ್ತಾಯಿಸಿದ್ದರು. 

ನ್ಯಾಯಮೂರ್ತಿ ಶ್ರೀಶಾನಂದ ಹೇಳಿದ್ದೇನು?

‘ಗೋರಿಪಾಳ್ಯ ಮಿನಿ ಪಾಕಿಸ್ತಾನ’

ಬೆಂಗಳೂರು: ‘ಮುಸ್ಲಿಂ ಬಾಹುಳ್ಯ ಪ್ರದೇಶವಾದ ಗೋರಿ ಪಾಳ್ಯದ ಕ್ರಿಮಿನಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಹೆದರುತ್ತಾರೆ. ಅದೊಂದು ಮಿನಿ ಪಾಕಿಸ್ತಾನವಾಗಿ ಮಾರ್ಪಟ್ಟಿದೆ...’

ಬಾಡಿಗೆ ನಿಯಂತ್ರಣ ಕಾಯ್ದೆಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರು ಆಗಸ್ಟ್‌ 28ರಂದು ಮುಕ್ತ ನ್ಯಾಯಾಲಯದಲ್ಲಿ ಆಡಿದ ಮಾತು ಇದು. ಅವರ ಹೇಳಿಕೆಗಳು ಹೀಗಿದ್ದವು.

‘ಬೆಂಗಳೂರಿನ ಪಶ್ಚಿಮ ಭಾಗದ ಮೈಸೂರು ರಸ್ತೆಯ ಮೇಲ್ಸೇತುವೆಗೆ ಹೋಗಿ ನೋಡಿ. ಅಲ್ಲಿ ಸಂಚರಿಸುವ ಪ್ರತಿಯೊಂದು ಆಟೊ ರಿಕ್ಷಾದಲ್ಲೂ 10 ಜನರನ್ನು ತುಂಬಿಕೊಂಡಿರಲಾಗುತ್ತದೆ. ಮೈಸೂರು ರಸ್ತೆಯ ಮೇಲ್ಸೇತುವೆಯಿಂದ ಸಾಗುವಾಗ ಬದಿಯಲ್ಲಿನ ಗೋರಿಪಾಳ್ಯದಿಂದ ಹೂವಿನ ಮಾರುಕಟ್ಟೆಯ ತನಕದ ಪ್ರದೇಶ ಭಾರತದಲ್ಲಿ ಇಲ್ಲ. ಅದೊಂದು ಮಿನಿ ಪಾಕಿಸ್ತಾನ. ಇದು ವಾಸ್ತವ... ಇದು ವಾಸ್ತವ... ಎಂತಹುದೇ ಕಟ್ಟುನಿಟ್ಟಿನ, ದಕ್ಷ ಪೊಲೀಸ್ ಅಧಿಕಾರಿಯನ್ನು ಅಲ್ಲಿಗೆ ಕರ್ತವ್ಯಕ್ಕೆ ನಿಯೋಜನೆ ಮಾಡಿದರೂ ಅವರನ್ನು ತದಕಲಾಗುತ್ತದೆ. ಆಟೊದಲ್ಲಿ ಕೂತು ಎಷ್ಟು ಜನರು ಪ್ರಯಾಣಿಸಬೇಕು ಎಂಬ ಕಾನೂನೇ ಇಲ್ಲಿ ಅನ್ವಯವಾಗುವುದಿಲ್ಲ...’ 

ಮುಜುಗರದ ಪದ ಬಳಕೆ

‘ನಿಮ್ಮ ಅರ್ಜಿದಾರರು ತೆರಿಗೆ ಪಾವತಿದಾರರೇ’ ಎಂದು ನ್ಯಾಯಮೂರ್ತಿ ಶ್ರೀಶಾನಂದ ಅವರು ಮತ್ತೊಂದು ಪ್ರಕರಣದಲ್ಲಿ ಪ್ರತಿವಾದಿ ಪರ ವಕೀಲರೊಬ್ಬರನ್ನು, ಪ್ರಶ್ನಿಸುತ್ತಾರೆ. ಆಗ ಪ್ರತಿವಾದಿ ಪರ ವಕೀಲರು ಉತ್ತರಿಸಲು ಮುಂದಾಗುತ್ತಿದ್ದಂತೆಯೇ, ಅರ್ಜಿದಾರರ ಪರ ಹಾಜರಿದ್ದ ಯುವ ವಕೀಲೆ, ‘ಹೌದು, ಅವರು ತೆರಿಗೆ ಪಾವತಿದಾರರು’ ಎಂದು ಸ್ಪಷ್ಟನೆ ನೀಡುತ್ತಾರೆ. ಕೂಡಲೇ ಈ ಮಾತಿಗೆ ತಡೆ ಒಡ್ಡುವ ನ್ಯಾಯಮೂರ್ತಿಯವರು ‘ತಾಳಮ್ಮಾ, ನಿನಗೆ ಅವರದ್ದೆಲ್ಲಾ ಪೂರ್ತಿ ಗೊತ್ತಿದೆ. ನಾಳೆ ಬೆಳಿಗ್ಗೆ ಕೇಳಿದರೆ ಇನ್ನೇನಾದರೂ ಹೇಳ್ತೀರಿ. ಅವರು ಯಾವ ಬಣ್ಣದ ಒಳಉಡುಪು ಧರಿಸುತ್ತಾರೆ ಎಂಬುದನ್ನೂ ಹೇಳಿಬಿಡುತ್ತೀರಿ’ ಎನ್ನುತ್ತಾರೆ.

ಲೈವ್‌ ಸ್ಟ್ರೀಮ್‌ಗೆ ನಿರ್ಬಂಧ

ಹೈಕೋರ್ಟ್‌ನ ತೆರೆದ ಕಲಾಪದ ವಿಡಿಯೊಗಳು ವೈರಲ್‌ ಆಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್‌ ಪೂರ್ವಾನುಮತಿ ಪಡೆಯದೇ ವಿಡಿಯೊ ರೆಕಾರ್ಡಿಂಗ್‌ ಹಂಚಿಕೆ ಮಾಡದಂತೆ ಎಚ್ಚರಿಸಿ ವೀಕ್ಷಕರಿಗೆ ತಿಳಿವಳಿಕೆ ನೋಟಿಸ್‌ ಹೊರಡಿಸಿದೆ.

ಈ ಸಂಬಂಧ ‘ಕರ್ನಾಟಕ ನ್ಯಾಯಾಲಯ ಕಲಾಪಗಳ ನೇರ ಪ್ರಸಾರ (ಲೈವ್‌ ಸ್ಟ್ರೀಮ್‌) ಮತ್ತು ರೆಕಾರ್ಡಿಂಗ್‌ ನಿಯಮಗಳು–2021’ ಅನ್ನು ಜಾರಿಗೊಳಿಸಲಾಗಿದೆ. ಇದರ ಅನುಸಾರ ಪೂರ್ವಾನುಮತಿ ಪಡೆಯದೆ ಲೈವ್‌ ಸ್ಟ್ರೀಮಿಂಗ್‌ನ ಮರು ಪ್ರಸಾರ ವರ್ಗಾವಣೆ ಅಪ್‌ಲೋಡ್‌ ಮಾಡುವುದು ಪೋಸ್ಟ್‌ ಮಾಡುವುದು ಮಾರ್ಪಾಡು ಮಾಡುವುದು ಪ್ರಸಾರ ಅಥವಾ ಮರು ಪ್ರಸಾರ ಮಾಡುವಂತಿಲ್ಲ.

‘ಅನುಮತಿ ಪಡೆದಿರುವ ವ್ಯಕ್ತಿ ಅಥವಾ ಸಂಸ್ಥೆಯನ್ನು ಹೊರತುಪಡಿಸಿ ಬೇರಾವುದೇ ವ್ಯಕ್ತಿ ಅಥವಾ ಸಂಸ್ಥೆ (ಮುದ್ರಣ ವಿದ್ಯುನ್ಮಾನ ಮತ್ತು ಸಾಮಾಜಿಕ ಜಾಲತಾಣಗಳು) ಮುಕ್ತ ಕಲಾಪದ ಲೈವ್‌ ಸ್ಟ್ರೀಮಿಂಗ್‌ ಅಥವಾ ಹೈಕೋರ್ಟ್‌ ಯೂ–ಟ್ಯೂಬ್‌ ಚಾನಲ್‌ನಲ್ಲಿನ ವಿಡಿಯೊಗಳನ್ನು ರೆಕಾರ್ಡ್‌ ಅಥವಾ ಹಂಚಿಕೆ ಮಾಡುವಂತಿಲ್ಲ. ಈ ನಿರ್ಬಂಧವು ಎಲ್ಲಾ ಸಂದೇಶ ಮತ್ತು ಅಪ್ಲಿಕೇಶನ್‌ಗಳಿಗೂ ಅನ್ವಯಿಸಲಿದೆ’ ಎಂದು ನೋಟಿಸ್‌ನಲ್ಲಿ ಸ್ಪಷ್ಟಪಡಿಸಲಾಗಿದೆ.

‘ನ್ಯಾಯಾಲಯದ ಕಲಾಪವನ್ನು ರೆಕಾರ್ಡ್‌ ಮಾಡಲು ಅಥವಾ ಅದರ ನಿರೂಪಣೆಗೆ ಯಾವುದೇ ವ್ಯಕ್ತಿಗೆ ಅನುಮತಿ ನೀಡಲಾಗಿಲ್ಲ. ನ್ಯಾಯಾಲಯದ ಕಲಾಪಗಳ ರೆಕಾರ್ಡಿಂಗ್‌ ಮತ್ತು ಸಂಗ್ರಹ (ಆರ್ಕ್ವೈವ್‌) ದತ್ತಾಂಶದ ಮೇಲೆ ನ್ಯಾಯಾಲಯಕ್ಕೆ ವಿಶೇಷ ಹಕ್ಕುಸ್ವಾಮ್ಯ ಇದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಅಂತಹ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಕಾನೂನಿನಡಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ.

ಸಿಜೆಗೆ ವಕೀಲರ ಸಂಘದ ಪತ್ರ

‘ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರು ನ್ಯಾಯಾಲಯದ ತೆರೆದ ಕಲಾಪದಲ್ಲಿ ಕಿರಿಯ ವಕೀಲರನ್ನು ನಿರುತ್ಸಾಹಗೊಳಿಸುವ ಮತ್ತು ಮಹಿಳಾ ವಕೀಲರನ್ನು ಮುಜುಗರಕ್ಕೆ ಈಡುಮಾಡಿದ ಪ್ರಸಂಗಗಳ ಬಗ್ಗೆ ದೂರುಗಳು ಬರುತ್ತಿವೆ’ ಎಂದು ಬೆಂಗಳೂರು ವಕೀಲರ ಸಂಘ ಆತಂಕ ವ್ಯಕ್ತಪಡಿಸಿದೆ.

ಈ ಕುರಿತಂತೆ ಮುಖ್ಯ ನ್ಯಾಯಮೂರ್ತಿ (ಸಿಜೆ) ಎನ್‌.ವಿ.ಅಂಜಾರಿಯಾ ಅವರಿಗೆ ಶುಕ್ರವಾರ ಪತ್ರ ಬರೆದಿರುವ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ಪ್ರಧಾನ ಕಾರ್ಯದರ್ಶಿ ಟಿ.ಜಿ.ರವಿ ಮತ್ತು ಖಜಾಂಚಿ ಎಂ.ಟಿ.ಹರೀಶ್‌ ಅವರು ‘ಕೆಲವು ದಿನಗಳವರೆಗೆ ಹೈಕೋರ್ಟ್‌ ಲೈವ್‌ ಸ್ಟ್ರೀಮಿಂಗ್‌ ಅನ್ನು ನಿರ್ಬಂಧಿಸಬೇಕು’ ಎಂದು ಕೋರಿದ್ದಾರೆ.

ನ್ಯಾಯಮೂರ್ತಿ ಶ್ರೀಶಾನಂದ ಅವರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಗಂಭೀರ ವಿವಾದ ಸೃಷ್ಟಿಸಿವೆ. ಅವರ ಹೇಳಿಕೆಗಳು ವೈರಲ್‌ ಆಗಿವೆ. ಇದರಿಂದ ವಕೀಲಿ ವೃತ್ತಿಯನ್ನು ಪರಿಶುದ್ಧ ಎಂದು ಪರಿಗಣಿಸಿರುವ ಎಲ್ಲ ವಕೀಲರ ಭಾವನೆಗಳಿಗೆ ನೋವುಂಟಾಗಿದೆ’ ಎಂಬ ಅಂಶವನ್ನು ಪತ್ರದಲ್ಲಿ ಕಾಣಿಸಲಾಗಿದೆ.

‘ನ್ಯಾಯಮೂರ್ತಿ ಶ್ರೀಶಾನಂದ ಅವರು ಕೆಲವು ಸಂದರ್ಭಗಳಲ್ಲಿ ಆ ಕ್ಷಣಕ್ಕೆ ವ್ಯಕ್ತಪಡಿಸಿರುವ ಅಭಿಪ್ರಾಯ ಮತ್ತು ಮೂದಲಿಕೆಗಳು ಅಪ್ರಸ್ತುತವಾಗಿವೆ. ಆದರೆ ಅವರು ಪ್ರಾಮಾಣಿಕತೆಗೆ ಹೆಸರಾಗಿದ್ದಾರೆ. ಉತ್ತಮ ತೀರ್ಪುಗಳನ್ನು ನೀಡಿದ್ದಾರೆ. ಆಕ್ಷೇಪಾರ್ಹ ಹೇಳಿಕೆಗಳಿಂದ ಅವರು ಮಾಡಿರುವ ಉತ್ತಮ ಕೆಲಸಗಳಿಗೆ ಅಪಚಾರ ಉಂಟಾಗುತ್ತಿದೆ’ ಎಂದು ವಿವರಿಸಲಾಗಿದೆ.

‘ನ್ಯಾಯಾಲಯಗಳ ಲೈವ್‌ ಸ್ಟ್ರೀಮಿಂಗ್‌ ಅನ್ನು ಸಂಪೂರ್ಣ ನಿರ್ಬಂಧಿಸದೇ ಹೋದರೆ ಪರಿಸ್ಥಿತಿ ಕೈಮೀರಲಿದೆ. ಸಾರ್ವಜನಿಕರ ಮನಸ್ಸಿನಲ್ಲಿ ನ್ಯಾಯಾಲಯಗಳ ವರ್ಚಸ್ಸಿಗೆ ಧಕ್ಕೆಯಾಗಲಿದೆ. ಈ ಕುರಿತು ತಾವು ತುರ್ತು ಕ್ರಮ ಕೈಗೊಳ್ಳುತ್ತೀರಿ ಎಂಬ ಆಶಾಭಾವನೆ ಹೊಂದಿದ್ದೇವೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಸ್ವಾಗತ: ‘ಹೈಕೋರ್ಟ್‌ ಕಲಾಪಗಳ ನೇರ ಪ್ರಸಾರದಿಂದ ಆಗುತ್ತಿರುವ ಪರಿಣಾಮಗಳನ್ನು ಅರಿತು ಸುಪ್ರೀಂ ಕೋರ್ಟ್‌ ಈ ದಿಸೆಯಲ್ಲಿ ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ಮುಂದಾಗಿರುವುದು ಸ್ವಾಗತಾರ್ಹ’ ಎಂದು ಸಂಘವು ಹೇಳಿದೆ.

‘ಅನೇಕ ಯೂ–ಟ್ಯೂಬ್‌ ಚಾನಲ್‌ನವರು ಕಾನೂನು ವ್ಯಾಖ್ಯೆಗಳು ವಕೀಲರು ಹಾಗೂ ನ್ಯಾಯಮೂರ್ತಿಗಳ ವಿವರಣೆಗಳನ್ನು ತಿರುಚಿ ಪ್ರಸಾರ ಮಾಡುತ್ತಿರುವುದರಿಂದ ವಕೀಲರು ಮತ್ತು ನ್ಯಾಯಮೂರ್ತಿಗಳ ಮಧ್ಯೆ ಗಂಭೀರ ಪರಿಣಾಮಕ್ಕೆ ಎಡೆ ಮಾಡಿದೆ. ಆದ್ದರಿಂದ ವಕೀಲರಿಗಿಂತಲೂ ಹೆಚ್ಚಾಗಿ ನ್ಯಾಯಮೂರ್ತಿಗಳು ತಾವು ಏನು ಹೇಳುತ್ತಿದ್ದೇವೆ ಎಂಬುದರ ಬಗ್ಗೆ ಅತ್ಯಂತ ಜಾಗೃತರಾಗಿರಬೇಕಾಗಿದೆ’ ಎಂದು ಸಂಘವು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT