ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಜಲ್‌ ಹಿಂದೂಸ್ಥಾನಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

Published 25 ಏಪ್ರಿಲ್ 2024, 16:13 IST
Last Updated 25 ಏಪ್ರಿಲ್ 2024, 16:13 IST
ಅಕ್ಷರ ಗಾತ್ರ

ಬೆಂಗಳೂರು: ಕೋಮು ದ್ವೇಷ ಹರಡುವ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕಾಜಲ್‌ ಹಿಂದೂಸ್ಥಾನಿ ವಿರುದ್ಧ ದಾಖಲಿಸಿರುವ ಕ್ರಿಮಿನಲ್‌ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳಿಗೆ ಹೈಕೋರ್ಟ್‌ ತಡೆ ನೀಡಿದೆ.

ಈ ಸಂಬಂಧ ಕಾಜಲ್ ಹಿಂದುಸ್ತಾನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದ್ದು, ಅರ್ಜಿದಾರರ ವಿರುದ್ಧದ ಕ್ರಿಮಿನಲ್‌ ಪ್ರಕರಣಕ್ಕೆ ಸಂಬಂಧಿಸಿದ ಮುಂದಿನ ಎಲ್ಲಾ ಪ್ರಕ್ರಿಯೆಗಳಿಗೆ ತಡೆ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಎಂ.ಅರುಣ್‌ ಶ್ಯಾಮ್‌, ‘ಅರ್ಜಿದಾರರ ವಿರುದ್ಧ ಪೂರಕ ಸಾಕ್ಷ್ಯಾಧಾರಗಳ ಕೊರತೆಯಿದ್ದರೂ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ನೀಡಿದ್ದಾರೆ. ಆದ್ದರಿಂದ, ಪೂರ್ವಾನುಮತಿ ರದ್ದುಪಡಿಸಬೇಕು’ ಎಂದು ಕೋರಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ ಎಫ್‌ಐಆರ್‌ಗೆ ತಡೆ ನೀಡಿ ವಿಚಾರಣೆ ಮುಂದೂಡಿದೆ.

ಪ್ರಕರಣವೇನು?: ಉಡುಪಿ ಕೃಷ್ಣಮಠದ ಬಳಿ 2022ರ ಅಕ್ಟೋಬರ್‌ 2ರಂದು ಹಿಂದು ಜಾಗರಣಾ ವೇದಿಕೆ ಆಯೋಜಿಸಿದ್ದ ‘ದುರ್ಗಾ ದೌಡ್ ’ ಕಾರ್ಯಕ್ರಮದಲ್ಲಿ ಕಾಜಲ್ ಹಿಂದುಸ್ತಾನಿ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ್ದ ಅವರು, ‘ಮುಸ್ಲಿಂ ಸಮುದಾಯದವರು ಲವ್ ಜಿಹಾದ್‌ ನಡೆಸುವ ಮೂಲಕ ಹಿಂದೂ ಹೆಣ್ಣು ಮಕ್ಕಳನ್ನು ವಂಚಿಸುತ್ತಿದ್ದಾರೆ. ಲವ್‌ ಜಿಹಾದ್‌ಗೆ ಬಾಲಿವುಡ್‌ ಸಹಾ ಅಗತ್ಯ ನೆರವು ಹಾಗೂ ಬೆಂಬಲ ನೀಡುತ್ತಿದೆ’ ಎಂದು ಹೇಳಿಕೆ ನೀಡಿದ್ದಾಗಿ ಆರೋಪಿಸಿ ಉಡುಪಿ ಟೌನ್‌ ಪೊಲೀಸರು ಕಾಜಲ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು.

ತನಿಖೆ ಪೂರ್ಣಗೊಳಿಸಿದ್ದ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಾಸಿಕ್ಯೂಷನ್‌ ಪ್ರಕ್ರಿಯೆಗಾಗಿ ಉಡುಪಿ ಜಿಲ್ಲಾಧಿಕಾರಿ ತನಿಖಾಧಿಕಾರಿಗಳಿಗೆ 2023ರ ಡಿಸೆಂಬರ್ 18ರಂದು ಪೂರ್ವಾನುಮತಿ ನೀಡಿದ್ದರು. ಇದನ್ನು ರದ್ದುಪಡಿಸುವಂತೆ ಕೋರಿ ಕಾಜಲ್‌ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT