ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ದಂತ ಪರಿಷತ್‌ ಚುನಾವಣೆ: ಫಲಿತಾಂಶ ಪ್ರಕಟಣೆಗೆ ಹೈಕೋರ್ಟ್‌ ತಡೆ

Last Updated 24 ಫೆಬ್ರುವರಿ 2023, 22:00 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ದಂತ ಪರಿಷತ್‌ ಕಾರ್ಯಕಾರಿ ಮಂಡಳಿಯ ವಿವಿಧ ಪದಾಧಿಕಾರಿಗಳ ಹುದ್ದೆಗೆ ನಡೆಸಿರುವ ಚುನಾವಣೆಗೆ ಸಂಬಂಧಿಸಿದಂತೆ ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟಿಸದಂತೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

‌ಚುನಾವಣಾ ಅಧಿಸೂಚನೆ ಪ್ರಶ್ನಿಸಿ ಪರಿಷತ್ ಸದಸ್ಯೆಯೂ ಆದ ಕೋರಮಂಗಲದ ಡಾ.ರೋಹಿಣಿ ರೆಹಿನಾ ಮಲಿಕ್ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಕುರಿತಂತೆ
ಆದೇಶಿಸಿದೆ.

‘ಮತದಾರರ ಪಟ್ಟಿ ಸಿದ್ಧಪಡಿಸುವಲ್ಲಿ ಗಂಭೀರ ಲೋಪ ಉಂಟಾಗಿದೆ. ದಂತವೈದ್ಯರಾಗಿರುವ ಪರಿಷತ್ತಿನ ಸಾವಿರಾರು ಸದಸ್ಯರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇಲ್ಲ. ದಂತವೈದ್ಯ ವೃತ್ತಿಯನ್ನು ತೊರೆದಿರುವ ಹಲವರ ಹೆಸರೂ ಈ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಆದ್ದರಿಂದ, ರಿಟ್‌ ಅರ್ಜಿಯ ಮುಂದಿನ ವಿಚಾರಣೆವರೆಗೆ ಮತ ಎಣಿಕೆ ಕಾರ್ಯ ನಡೆಸಬಾರದು’ ಎಂದು ನ್ಯಾಯಪೀಠ ನಿರ್ದೇಶಿಸಿದ್ದು, ವಿಚಾರಣೆಯನ್ನು ಮಾರ್ಚ್‌ 3ಕ್ಕೆ ಮುಂದೂಡಿದೆ.

ಕೋರಿಕೆ ಏನಿತ್ತು?: ‘ಪರಿಷತ್‌ನಲ್ಲಿ 55 ಸಾವಿರ ಸದಸ್ಯರಿದ್ದು, ಮತದಾರರ ಪಟ್ಟಿಯಲ್ಲಿ ಕೇವಲ 14,623 ಸದಸ್ಯರ ಹೆಸರುಗಳಿವೆ. ಚುನಾವಣೆ ಪ್ರಕ್ರಿಯೆ ನಿಯಮಕ್ಕೆ ಅನುಗುಣವಾಗಿ ಇಲ್ಲ. ಹಾಗಾಗಿ, ಚುನಾವಣಾ ಅಧಿಸೂಚನೆ ರದ್ದುಪಡಿಸಬೇಕು. ಅರ್ಜಿ ಇತ್ಯರ್ಥವಾಗುವರೆಗೆ ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟಿಸದಂತೆ ಮಧ್ಯಂತರ ಆದೇಶ ಹೊರಡಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.

ಚುನಾವಣೆ ನಡೆಸಲು 2023ರ ಜನವರಿ 2ರಂದು ಪರಿಷತ್ತಿನ ರಿಜಿಸ್ಟ್ರಾರ್ ಅಧಿಸೂಚನೆ ಹೊರಡಿಸಿದ್ದರು. ಚುನಾವಣಾಧಿಕಾರಿಯು ಜನವರಿ 4ರಂದು ಅಂತಿಮ ಮತದಾರರ ಪಟ್ಟಿ ಮತ್ತು ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದರು. ಅದರಂತೆ ಅಂಚೆ ಮತದಾನದ ಮೂಲಕ 2023ರ ಜನವರಿ 23ರಿಂದ ಇದೇ 22ರವರೆಗೆ ಮತದಾನ ನಡೆಸಲಾಗಿತ್ತು. ಇದೇ 24ರಂದು ಮತ ಎಣಿಕೆ ನಡೆಯಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT