ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಣಿ ಕ್ಲಸ್ಟರ್‌ ವಿವಿ ಕುಲಪತಿಗೆ ಹೈಕೋರ್ಟ್‌ ಎಚ್ಚರಿಕೆ

Published 16 ಅಕ್ಟೋಬರ್ 2023, 20:05 IST
Last Updated 16 ಅಕ್ಟೋಬರ್ 2023, 20:05 IST
ಅಕ್ಷರ ಗಾತ್ರ

ಬೆಂಗಳೂರು: ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಜಿ.ಕೃಷ್ಣಾರೆಡ್ಡಿ ಮತ್ತು ಪ್ರಾಂಶುಪಾಲರಾಗಿದ್ದ ಡಾ.ಎಚ್‌. ಪ್ರಕಾಶ್‌ ಅವರಿಗೆ ಕಳೆದ 15 ತಿಂಗಳಿಂದ ವೇತನ ಬಿಡುಗಡೆ ಮಾಡದಿರುವ ವಿಶ್ವವಿದ್ಯಾಲಯದ ನಡೆಗೆ ಹೈಕೋರ್ಟ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ಕೂಡಲೇ ವೇತನ ಬಿಡುಗಡೆ ಮಾಡದಿದ್ದರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ‘ ಎಂದು ಕುಲಪತಿಗೆ ಎಚ್ಚರಿಕೆ ನೀಡಿದೆ.

ವೇತನ ತಡೆ ಹಿಡಿದಿದ್ದ ಸರ್ಕಾರದ ಕ್ರಮವನ್ನು ಆಕ್ಷೇಪಿಸಿ ಡಾ.ಜಿ.ಕೃಷ್ಙಾರೆಡ್ಡಿ ಮತ್ತು ಡಾ.ಎಚ್‌. ಪ್ರಕಾಶ್‌ ಸಲ್ಲಿಸಿದ್ದ ಪ್ರತ್ಯೇಕ ರಿಟ್‌ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್‌.ಎಸ್‌. ಸಂಜಯ್‌ ಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಎಚ್‌ಆರ್‌ಎಂಎಸ್‌ (ರಾಷ್ಟ್ರೀಯ ಮಾನವ ಸಂಪನ್ಮೂಲಗಳ ನಿರ್ವಹಣಾ ಪದ್ಧತಿಗಳು) ಮಾದರಿಯಲ್ಲಿ ಬಿಲ್‌ಗಳನ್ನು ಸಲ್ಲಿಸುವಲ್ಲಿ ಕೆಲ ತೊಂದರೆಯಾಗಿದೆ ಮತ್ತು ಕೆಲವೊಂದು ದಾಖಲೆಗಳ ಪರಿಶೀಲನೆ ನಡೆಯಬೇಕಿರುವ ಕಾರಣದಿಂದ ವೇತನ ಬಿಡುಗಡೆ ಮಾಡಲಾಗುತ್ತಿಲ್ಲ‘ ಎಂಬ ಕುಲಪತಿಯವರ ವಾದವನ್ನು ಒಪ್ಪಲು ಸಾಧ್ಯವಿಲ್ಲ. ಸರ್ಕಾರ ಹಣ ಬಿಡುಗಡೆ ಮಾಡಿದ ಮೇಲೂ ವೇತನ ಪಾವತಿ ಮಾಡುತ್ತಿಲ್ಲ ಎಂದರೆ, ಇದು ಉದ್ದೇಶಪೂರ್ವಕವಾಗಿ ವೇತನ ತಡೆಹಿಡಿದಿರುವ ಕ್ರಮ ‌ಎಂಬುದಾಗಿ ತೋರುತ್ತಿದೆ‘ ಎಂದು ನ್ಯಾಯಪೀಠ ಅತೃಪ್ತಿ ವ್ಯಕ್ತಪಡಿಸಿದೆ.

ಪ್ರಕರಣವೇನು?

ಮಹಾರಾಣಿ ಕಾಲೇಜನ್ನು ಕ್ಲಸ್ಟರ್‌ ವಿಶ್ವವಿದ್ಯಾಲಯವನ್ನಾಗಿ ಪರಿವರ್ತಿಸಿ 2019ರಲ್ಲಿ ಮತ್ತು ಅಲ್ಲಿನ 64 ಸಿಬ್ಬಂದಿಯನ್ನು ವಿಶ್ವವಿದ್ಯಾಲಯದ ಸಿಬ್ಬಂದಿಯಾಗಿ ವಿಲೀನಗೊಳಿಸಿ 2022ರ ಜೂನ್ 30ರಂದು ಸರ್ಕಾರ ಆದೇಶಿಸಿತ್ತು. ಇದಕ್ಕೂ ಮೊದಲು 2022ರ ಜನವರಿ 14ರಂದು ಆ ವರ್ಷ ಸೇವೆಯಿಂದ ಬಿಡುಗಡೆಯಾಗಲಿರುವ ಸಿಬ್ಬಂದಿಯ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಅರ್ಜಿದಾರರ ಹೆಸರಿತ್ತು.

ಈ ಪಟ್ಟಿಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಅರ್ಜಿದಾರರು, ’ಕಾಲೇಜು ಸಿಬ್ಬಂದಿಯಾಗಿದ್ದರೆ 60 ವರ್ಷಕ್ಕೆ ಸೇವೆಯಿಂದ ನಿವೃತ್ತರಾಗುತ್ತಿದ್ದೆವು. ಆದರೆ, ಕ್ಲಸ್ಟರ್‌ ವಿಶ್ವವಿದ್ಯಾಲಯ ಸಿಬ್ಬಂದಿಯಾಗಿ ವಿಲೀನವಾದ ನಂತರ ನಿವೃತ್ತಿ ವಯಸ್ಸು 62 ಆಗಿದೆ. ಇದೇ ಕಾರಣ ಮುಂದಿಟ್ಟುಕೊಂಡು 2022ರ ಜುಲೈನಿಂದ ನಮಗೆ ವೇತನ ಪಾವತಿ ತಡೆಹಿಡಿಯಲಾಗಿದೆ‘ ಎಂದು ಆಕ್ಷೇಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT