ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆನ್‌ಡ್ರೈವ್‌: ವಕೀಲ ದೇವರಾಜೇಗೌಡ ಬಂಧನ

ಲೈಂಗಿಕ ದೌರ್ಜನ್ಯ, ಜಾತಿನಿಂದನೆ ಪ್ರಕರಣ
Published 12 ಮೇ 2024, 0:08 IST
Last Updated 12 ಮೇ 2024, 0:08 IST
ಅಕ್ಷರ ಗಾತ್ರ

ಹೊಳೆನರಸೀಪುರ(ಹಾಸನ): ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಸೇರಿದ್ದೆನ್ನಲಾದ ಲೈಂಗಿಕ ದೌರ್ಜನ್ಯದ ವಿಡಿಯೊಗಳಿರುವ ಪೆನ್‌ಡ್ರೈವ್‌ ಹಂಚಿಕೆ ಕುರಿತು ಹೇಳಿಕೆ ನೀಡಿದ್ದ ವಕೀಲ, ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ಅವರನ್ನು ಲೈಂಗಿಕ ದೌರ್ಜನ್ಯ ಹಾಗೂ ಜಾತಿನಿಂದನೆ ಆರೋಪದ ಮೇರೆಗೆ ಇಲ್ಲಿನ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಶುಕ್ರವಾರ ರಾತ್ರಿ ಹಿರಿಯೂರು ಪೊಲೀಸರ ವಶದಲ್ಲಿದ್ದ ಆರೋಪಿಯನ್ನು ಇಲ್ಲಿನ ಪೊಲೀಸರು ಶನಿವಾರ ಪಟ್ಟಣಕ್ಕೆ ಕರೆತಂದರು. ಇಲ್ಲಿನ ಸರ್ಕಲ್‌ ಇನ್‌ಸ್ಪೆಕ್ಟರ್ ಕಚೇರಿಯಲ್ಲಿ ಎಸ್ಪಿ ಮೊಹಮ್ಮದ್ ಸುಜೀತಾ, ಎ‌ಎಸ್ಪಿ ವೆಂಕಟೇಶ್ ನಾಯ್ಡು, ಡಿವೈಎಸ್ಪಿ ಅಶೋಕ್ ಹಾಗೂ ಸಿಪಿಐ ಸುರೇಶ್ ಕುಮಾರ್‌ ವಿಚಾರಣೆ ನಡೆಸಿದರು. ಸುಮಾರು ನಾಲ್ಕು ಗಂಟೆ ವಿಚಾರಣೆ ನಡೆಸಿದ ಬಳಿಕ ಆರೋಪಿಯನ್ನು ಬಂಧಿಸಲಾಯಿತು.

‘ಕಾರಿನಲ್ಲೂ ಲೈಂಗಿಕ ಕಿರುಕುಳ ನೀಡಿದ್ದಾರೆ’ ಎಂದು ಸಂತ್ರಸ್ತೆ ದೂರಿರುವುದರಿಂದ, ಆರೋಪಿಯ ಇನ್ನೋವಾ ಕ್ರಿಸ್ಟಾ ಕಾರನ್ನು ಪೊಲೀಸರು ವಶಕ್ಕೆ ಪಡೆದು, ಅವರ ಸಮ್ಮುಖದಲ್ಲೇ ತಪಾಸಣೆ ನಡೆಸಿ, ಅಲ್ಲಿದ್ದ ಮೊಬೈಲ್ ಫೋನ್‌ ಅನ್ನು ವಶಪಡಿಸಿಕೊಂಡರು.

ನಂತರ ವೈದ್ಯಕೀಯ ತಪಾಸಣೆಗಾಗಿ ತಾಲ್ಲೂಕು ಆಸ್ಪತ್ರೆಗೆ ಕರೆತಂದ ವೇಳೆ ಆರೋಪಿಯು ‘ಸತ್ಯಕ್ಕೆ ಜಯವಿದೆ’ ಎಂದರು. ತಪಾಸಣೆ ನಂತರ ಪೊಲೀಸರು ನ್ಯಾಯಾಧೀಶರ ಎದುರು ಹಾಜರುಪಡಿಸಿದರು.

‘ನಿವೇಶನ ಮಾರಿಸಿಕೊಡುವ ಸಂಬಂಧ ಸಂಪರ್ಕಿಸಿದ್ದ ಆರೋಪಿಯು, ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಏ.1 ರಂದು ಸಂತ್ರಸ್ತೆ ನೀಡಿದ್ದ ದೂರಿನ ಅನ್ವಯ ಹೊಳೆನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಾತಿನಿಂದನೆಗೆ ಸಂಬಂಧಿಸಿದಂತೆ ಸಂತ್ರಸ್ತೆಯ ಪತಿ ನೀಡಿರುವ ದೂರಿನಂತೆ ಮತ್ತೊಂದು ಪ್ರಕರಣ ದಾಖಲಾಗಿದೆ. ಈ ಮಧ್ಯೆ, ಮಾರ್ಚ್‌‌ನಲ್ಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರೂ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಆರೋಪಿ ವಿರುದ್ಧ ಹಾಸನ ನಗರ ಠಾಣೆಗೆ ದೂರು ನೀಡಿದ್ದರು. ಒಟ್ಟಿಗೇ ಎಲ್ಲ ಪ್ರಕರಣಗಳ ವಿಚಾರಣೆ ನಡೆದಿದೆ.

ಬಿಗಿ ಬಂದೋಬಸ್ತ್‌:

ಹೊಳೆನರಸೀಪುರ ಇನ್‌ಸ್ಪೆಕ್ಟರ್ ಕಚೇರಿಯಲ್ಲಿ ವಿಚಾರಣೆ ನಡೆದ ಹಿನ್ನೆಲೆಯಲ್ಲಿ ಕಚೇರಿ ಮುಂದೆ ಜಮಾಯಿಸಿದ್ದ ನೂರಾರು ಜನರನ್ನು ಚದುರಿಸಿದ ಪೊಲೀಸರು, ಸಮೀಪದ ಅಂಗಡಿಗಳನ್ನು ಬಂದ್ ಮಾಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT